ಮ್ಯಾನ್ಮಾರ್‌ನ ರೊಹಿಂಗ್ಯಾ ಗ್ರಾಮಗಳಲ್ಲಿ ಇನ್ನೂ ಬೆಂಕಿ: ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆರೋಪ

Update: 2017-09-23 17:13 GMT

ಬ್ಯಾಂಕಾಕ್, ಸೆ. 23: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ಗ್ರಾಮಗಳಲ್ಲಿ ಹೊಗೆ ಏಳುತ್ತಿರುವುದನ್ನು ಶುಕ್ರವಾರ ಮಧ್ಯಾಹ್ನ ಉಪಗ್ರಹಗಳು ತೆಗೆದ ಚಿತ್ರಗಳು ಮತ್ತು ವೀಡಿಯೊಗಳು ತೋರಿಸಿವೆ. ಇದು ಅಲ್ಲಿ ಸೇನೆಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂಬ ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಹೇಳಿಕೆಗೆ ವಿರುದ್ಧವಾಗಿದೆ ಎಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.

 ಮ್ಯಾನ್ಮಾರ್‌ನ ಭದ್ರತಾ ಪಡೆಗಳು ಮತ್ತು ದೊಂಬಿಯಲ್ಲಿ ನಿರತವಾಗಿರುವ ಗುಂಪುಗಳು ಬೆಂಕಿ ಹಚ್ಚಿವೆ ಎಂಬುದನ್ನು ರಖೈನ್‌ನಲ್ಲಿರುವ ತನ್ನ ಮೂಲಗಳು ಹೇಳಿವೆ ಎಂದು ಲಂಡನ್‌ನಲ್ಲಿ ನೆಲೆ ಹೊಂದಿರುವ ಮಾನವಹಕ್ಕುಗಳ ಗುಂಪು ತಿಳಿಸಿದೆ.

‘‘ಈ ಪ್ರತ್ಯಕ್ಷದರ್ಶಿ ಮತ್ತು ಬಾಹ್ಯಾಕಾಶ ಸಾಕ್ಷಗಳು ಆಂಗ್ ಸಾನ್ ಸೂ ಕಿ ಜಗತ್ತಿಗೆ ಹೇಳಿರುವ ಮಾತುಗಳನ್ನು ಅಣಕಿಸುತ್ತಿವೆ’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಬಿಕ್ಕಟ್ಟು ನಿರ್ವಹಣೆ ನಿರ್ದೇಶಕಿ ತಿರಾನಾ ಹಸನ್ ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.

‘‘ರೊಹಿಂಗ್ಯಾ ಮನೆಗಳು ಮತ್ತು ಗ್ರಾಮಗಳು ಇನ್ನೂ ಉರಿಯುತ್ತಲೇ ಇವೆ. ರೊಹಿಂಗ್ಯಾರನ್ನು ಮನೆಯಿಂದ ಹೊರಗಟ್ಟಿದ್ದಕ್ಕಷ್ಟೇ ತೃಪ್ತರಾಗದ ಅಲ್ಲಿನ ಅಧಿಕಾರಿಗಳು, ಅವರಿಗೆ ಮರಳಲು ಯಾವುದೇ ಮನೆಗಳು ಉಳಿಯದಂತೆ ನೋಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News