ಬರಲಿದ್ದಾನೆ ಆಪ್ತಮಿತ್ರ 2

Update: 2017-09-23 17:35 GMT

‘ಆಪ್ತಮಿತ್ರ’ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಮೈಲುಗಲ್ಲು ಸೃಷ್ಟಿಸಿದ ಸಿನೆಮಾ ಎಂದರೆ ಅತಿಶಯೋಕ್ತಿಯಾಗಲಾರದು. ಮಲಯಾಳಂನ ‘ಮಣಿಚಿತ್ರತ್ತಾಳ್’ ಚಿತ್ರದ ರಿಮೇಕ್ ಆದರೂ, ಅಪ್ಪಟ ಕನ್ನಡತನವನ್ನು ಮೈಗೂಡಿಸಿಕೊಂಡಿದ್ದ ಈ ಚಿತ್ರ ಸಾಹಸಸಿಂಹ ದಿವಂಗತ ವಿಷ್ಣುವರ್ಧನ್‌ರ ಅತ್ಯುತ್ತಮ ಸಿನೆಮಾಗಳಲ್ಲೊಂದೆನಿಸಿದೆ. ಈ ಸೂಪರ್‌ಹಿಟ್ ಚಿತ್ರದ ಮುಂದುವರಿದ ಭಾಗವಾದ ‘ಅಪ್ತರಕ್ಷಕ’ ಸಾಧಾರಣ ಮಟ್ಟದ ಯಶಸ್ಸನ್ನು ಕಂಡಿತ್ತು. ಇದೀಗ, ಆಪ್ತಮಿತ್ರ ಸರಣಿಯ ಇನ್ನೊಂದು ಚಿತ್ರ ಸೆಟ್ಟೇರಲು ಸಜ್ಜಾಗುತ್ತಿದೆ.

ಹೌದು. ಆಪ್ತಮಿತ್ರ ತೆರೆಕಂಡ ಬರೋಬ್ಬರಿ 13 ವರ್ಷಗಳ ಸುದೀರ್ಘ ಅಂತರದ ಬಳಿಕ ‘ಆಪ್ತಮಿತ್ರ 2’ ನಿರ್ಮಾಣವಾಗುತ್ತಿದೆ. ಆಪ್ತಮಿತ್ರ ಹಾಗೂ ಆಪ್ತರಕ್ಷಕ ಚಿತ್ರಗಳನ್ನು ನಿರ್ದೇಶಿಸಿದ್ದ ಪಿ.ವಾಸು ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇಷ್ಟಕ್ಕೂ ‘ಆಪ್ತಮಿತ್ರ 2’ ಚಿತ್ರವು ಆಪ್ತರಕ್ಷಕನ ಮುಂದುವರಿದ ಭಾಗವಲ್ಲವಂತೆ. ಆದಾಗ್ಯೂ ಒಂದು ಮೂಲದ ಪ್ರಕಾರ ಈ ಚಿತ್ರವು ತಮಿಳಿನ ಸೂಪರ್‌ಹಿಟ್ ಹಾರರ್ ಚಿತ್ರ ‘ಅರಮನೈ’ ಕಥೆಯಿಂದ ಸ್ಫೂರ್ತಿ ಪಡೆದಿದೆಯಂತೆ. ವಿಷ್ಣುವರ್ಧನ್‌ರನ್ನು ಈ ಚಿತ್ರದಲ್ಲಿ ಪ್ರೇಕ್ಷಕರು ಮಿಸ್ ಮಾಡಿಕೊಂಡರೂ, ಕನ್ನಡದ ಸೂಪರ್‌ಸ್ಟಾರ್ ಒಬ್ಬರು ನಟಿಸುವ ಸಾಧ್ಯತೆಯಿದೆ. ಚಿತ್ರದ ನಟ, ನಟಿಯರು ಹಾಗೂ ತಂತ್ರಜ್ಞರ ಆಯ್ಕೆ ಭರದಿಂದ ನಡೆಯುತ್ತಿದೆ. ರಮೇಶ್ ಯಾದವ್ ನಿರ್ಮಾಣದ ‘ಆಪ್ತಮಿತ್ರ 2’ ಶೂಟಿಂಗ್‌ನ್ನು ನವೆಂಬರ್‌ನಲ್ಲಿ ಆರಂಭಿಸುವ ಯೋಚನೆ ನಿರ್ಮಾಪಕರು ಹಾಗೂ ನಿರ್ದೇಶಕರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News