ಸ್ಯಾಂಡಲ್ ವುಡ್ ಗೆ ಅಕ್ಷರಹಾಸನ್

Update: 2017-09-23 17:41 GMT

ಕಮಲಹಾಸನ್ ಅವರ ಎರಡನೆ ಮಗಳು ಅಕ್ಷರಹಾಸನ್ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆೆಂಬ ಬಲವಾದ ವದಂತಿಗಳು ಈಗ ಗಾಂಧಿನಗರದಲ್ಲಿ ಬರುತ್ತಿವೆ. ‘ಸಂಜು ವೆಡ್ಸ್ ಗೀತಾ’, ‘ಮೈನಾ’ದಂತಹ ಪ್ರೇಮಕಥೆಯ ಚಿತ್ರಗಳ ನಿರ್ದೇಶಕ ನಾಗಶೇಖರ್‌ರ ನೂತನ ಚಿತ್ರದಲ್ಲಿ ಅಕ್ಷರಾ ನಟಿಸಲಿರುವುದು ಬಹುತೇಕ ಖಚಿತವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್‌ರ ಚೊಚ್ಚಲ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಲಿದ್ದು, ಅದರಲ್ಲಿ ನಾಯಕಿಯಾಗಿ ಅಕ್ಷರಾ ಹಾಸನ್ ಆಯ್ಕೆಯಾಗಿದ್ದಾರೆ. ನಾಗಶೇಖರ್ ಇತ್ತೀಚೆಗೆ ಚೆನ್ನೈಗೆ ತೆರಳಿ ಅಕ್ಷರಾಗೆ ಚಿತ್ರದ ಕಥೆಯನ್ನು ವಿವರಿಸಿದ್ದಾರಂತೆ. ಕಥೆಯನ್ನು ಕೇಳಿ ಇಂಪ್ರೆಸ್ ಆಗಿರುವ ಅಕ್ಷರಾ, ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ.‘ನವೆಂಬರ್‌ನಲ್ಲಿ ನಾನು ಅವಳು’ ಎಂದು ಹೆಸರಿಡಲಾಗಿರುವ ಈ ಚಿತ್ರದ ಕಥೆಗೆ ನಾಗಶೇಖರ್ ಅಂತಿಮ ಸ್ಪರ್ಶ ನೀಡುವುದರಲ್ಲಿ ಮಗ್ನರಾಗಿದ್ದಾರೆ.

ತಮಿಳಿನ ಲೇಟೆಸ್ಟ್ ಸೂಪರ್‌ಹಿಟ್ ಚಿತ್ರ ವಿವೇಗಂನಲ್ಲಿ ಅಕ್ಷರಾ ಅಭಿನಯ ಈಗಾಗಲೇ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ. ಅಕ್ಕ ಶ್ರುತಿ ಹಾಸನ್‌ರಂತೆ ಅಕ್ಷರಾ ಕೂಡಾ ದಕ್ಷಿಣ ಭಾರತದ ಜನಪ್ರಿಯ ನಟಿಯರ ಸಾಲಿಗೆ ಸೇರುವ ಎಲ್ಲ ಸೂಚನೆಗಳನ್ನು ನೀಡಿದ್ದಾರೆ.

ಅಕ್ಷರಾ ತಂದೆ ಕಮಲ ಹಾಸನ್ ಈ ಹಿಂದೆ ನಟಿಸಿದ್ದ ಕನ್ನಡ ಚಿತ್ರಗಳಾದ ಬೆಂಕಿಯಲ್ಲಿ ಅರಳಿದ ಹೂವು,ರಾಮ ಶಾಮ ಭಾಮಾ ಭರ್ಜರಿ ಯಶಸ್ಸು ಕಂಡಿದ್ದವು. ಇದೀಗ ಅಕ್ಷರಾ ಕೂಡಾ ತಂದೆಯಂತೆ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ಕಾಣುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News