ರಜನಿಯ ಕಾಲಾ ಕರಿಕಾಲನ್

Update: 2017-09-23 17:53 GMT

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ‘ಕರಿಕಾಲನ್’, ಒಂದು ಲೆಕ್ಕದಲ್ಲಿ ರಜನಿ ನಟಿಸಿರುವ ಇತ್ತೀಚಿನ ಚಿತ್ರಗಳ ಪೈಕಿ ಅತ್ಯಂತ ಬಿರುಸಿನಿಂದ ಚಿತ್ರೀಕರಣಗೊಂಡ ಸಿನೆಮಾ ಎಂಬ ದಾಖಲೆ ನಿರ್ಮಿಸುವುದರಲ್ಲಿ ಸಂದೇಹವಿಲ್ಲ. ಮೇನಲ್ಲಿ ಮುಂಬೈನಲ್ಲಿ ಶೂಟಿಂಗ್ ಆರಂಭಿಸಿದ ಈ ಚಿತ್ರದ ಶೇ.70ರಷ್ಟು ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಕಬಾಲಿ ಖ್ಯಾತಿಯ ಪಾ.ರಂಜಿತ್ ನಿರ್ದೇಶನದ ಈ ಚಿತ್ರ ‘ಅಂಡರ್‌ವಲ್ಡ್’ ಜಗತ್ತಿನ ಕಥಾವಸ್ತುವನ್ನು ಹೊಂದಿದೆ.

ಕಬಾಲಿ ಚಿತ್ರದಲ್ಲಿ ಪಂಚಿಂಗ್ ಡೈಲಾಗ್‌ಗಳಿಂದ ಮೋಡಿ ಮಾಡಿದ್ದ ರಜನಿ,ಕಾಲಾ ‘ಕರಿಕಾಲನ್’ನಲ್ಲೂ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದ್ದಾರೆಂದು ಚಿತ್ರತಂಡ ತುಂಬು ವಿಶ್ವಾಸವನ್ನು ಹೊಂದಿದೆ.

ಬಾಲಿವುಡ್‌ನ ಪ್ರತಿಭಾವಂತ ನಟ ನಾನಾ ಪಾಟೇಕರ್ ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಟಿಲ ಹಾಗೂ ನಿರ್ದಯಿ ರಾಜಕಾರಣಿ ಪಾತ್ರ ಅವರದ್ದು. ರಜನಿ ಹಾಗೂ ನಾನಾ ನಡುವಿನ ಮುಖಾಮುಖಿ ಪ್ರೇಕ್ಷಕರಿಗೆ ಅಪಾರ ಇಷ್ಟವಾಗಲಿದೆಯೆಂದು ಚಿತ್ರತಂಡದ ಅಂಬೋಣ.

 ‘ಕರಿಕಾಲನ್’ಗೆ ನಾಯಕಿಯಾಗಿ ಹುಮಾ ಖುರೈಷಿ ನಟಿಸಿದ್ದು, ಇದು ಆಕೆಯ ಚೊಚ್ಚಲ ತಮಿಳು ಚಿತ್ರವಾಗಿದೆ. ತಮಿಳಿನ ಖ್ಯಾತ ನಟ, ರಜನಿಯ ಅಳಿಯ ಧನುಷ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಮಧ್ಯೆ ರಜನಿಕಾಂತ್ ಅಭಿನಯದ ಮೆಗಾ ಬಜೆಟ್ ಚಿತ್ರ ಎಂದಿರನ್ 2.0 ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ರಜನಿ ಜೊತೆಗೆ ಅಕ್ಷಯ್ ಹಾಗೂ ಆ್ಯಮಿ ಜಾಕ್ಸನ್ ನಟಿಸಿರುವ ಈ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News