ಭಾರತದ ಈ ಗ್ರಾಮದಲ್ಲಿ ಲಿವ್-ಇನ್ ಸಂಬಂಧ ದೊಡ್ಡ ವಿಷಯವೇ ಅಲ್ಲ!

Update: 2017-09-24 18:42 GMT

ಮದುವೆಯಾಗದ ಜೋಡಿಗಳು ಒಟ್ಟಾಗಿ ವಾಸವಾಗಿರುವ ಲಿವಿಂಗ್ ಇನ್ ಸಂಬಂಧದಲ್ಲಿ ತೊಡಗಿಕೊಳ್ಳುವ ಮುನ್ನ ಅದರ ಒಳಿತು-ಕೆಡುಕುಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ವಿದೇಶಗಳಲ್ಲಿ ಇಂತಹ ಸಂಬಂಧಗಳು ಸಾಮಾನ್ಯವಾಗಿದ್ದರೂ ಭಾರತದಲ್ಲಿ ಇದನ್ನು ಒಪ್ಪುವವರು ಕಡಿಮೆಯೇ ಸರಿ. ಆದರೆ ನಮ್ಮದೇ ದೇಶದಲ್ಲಿರುವ ಗ್ರಾಮವೊಂದರಲ್ಲಿ ಈ ಲಿವಿಂಗ್-ಇನ್ ಸಂಬಂಧವು ಒಂದು ದೊಡ್ಡ ವಿಷಯವೇ ಅಲ್ಲ ಎನ್ನುವುದು ಗೊತ್ತಿದೆಯೇ?. ಇಲ್ಲಿ ಮದುವೆಯಾಗಿರುವ ಜೋಡಿಗಳಿಗಿಂತ ಲಿವ್-ಇನ್ ಸಂಬಂಧದಲ್ಲಿ ಬದುಕುತ್ತಿರುವ ಜೋಡಿಗಳ ಸಂಖ್ಯೆಯೇ ಹೆಚ್ಚು!

ರಾಜಸ್ಥಾನದ ಈ ಗ್ರಾಮದಲ್ಲಿ ಜನರು ಮೊದಲು ಮಕ್ಕಳನ್ನು ಪಡೆಯುತ್ತಾರೆ ಮತ್ತು ನಂತರ ಸಂಸಾರದ ಹೊಣೆಗಾರಿಕೆಯನ್ನು ಹೊರಲು ತಾವು ಸಿದ್ಧರಾಗಿದ್ದೇವೆ ಎಂದು ವಿಶ್ವಾಸ ಮೂಡಿದ ಮೇಲೆಯೇ ಮದುವೆಯಾಗುತ್ತಾರೆ. ಈ ಜನರು ಗರಾಸಿಯಾ ಸಮುದಾಯಕ್ಕೆ ಸೇರಿದ್ದಾರೆ. ತನ್ನ ವಿಶಿಷ್ಟ ಜೀವನ ಶೈಲಿಯಿಂದಾಗಿ ಈ ಸಮುದಾಯ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಸ್ಥಾನವನ್ನು ಗುರುತಿಸಿಕೊಂಡಿದೆ. ಈ ಜನರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಮದುವೆಯಾಗದೇ ವರ್ಷಗಳ ಕಾಲ ಒಟ್ಟಿಗೇ ಅವರು ಬದುಕಬಹುದು ಮತ್ತು ಮಕ್ಕಳಿಗೂ ಜನ್ಮ ನೀಡಬಹುದು.

 ಈ ಸಮುದಾಯದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸ್ಥಾನಮಾನವನ್ನು ಹೊಂದಿದ್ದಾರೆ. ಅತ್ಯಾಚಾರ ಮತ್ತು ವರದಕ್ಷಿಣೆ ಸಾವುಗಳು ಇಲ್ಲಿ ಇಲ್ಲವೇ ಇಲ್ಲ ಎನ್ನುತ್ತಾರೆ. ಹೆಚ್ಚಿನ ಲಿವ್-ಇನ್ ಸಂಗಾತಿಗಳು ಮದುವೆಗೆ ಮುನ್ನ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಸಂಸಾರವನ್ನು ಪೋಷಿಸಲು ತಮ್ಮ ಬಳಿ ಸಾಕಷ್ಟು ಹಣವಿದೆ ಎಂದು ಖಚಿತಪಡಿಸಿಕೊಂಡ ಬಳಿಕವೇ ಈ ಜೋಡಿಗಳು ಮದುವೆ ಮಾಡಿಕೊಳ್ಳುತ್ತಾರೆ.

 ಇಂತಹ ಲಿವ್-ಇನ್ ಜೀವನಶೈಲಿಯ ಸಮುದಾಯವೊಂದಿದೆ ಎನ್ನುವುದು ಬಹಳ ವರ್ಷಗಳ ಕಾಲ ಹೊರಜಗತ್ತಿಗೆ ಗೊತ್ತಿರಲಿಲ್ಲ. 70ರ ಹರೆಯದ ನಾನಿಯಾ ಗರಾಸಿಯಾ ಎಂಬ ಮಹಿಳೆಯ ಮದುವೆ ತನ್ನ ಬಹುವರ್ಷಗಳ ಲಿವ್-ಇನ್ ಸಂಗಾತಿ ಕಾಲಿಯ ಜೊತೆಗೆ ನಿಗದಿಯಾದಾಗಲೇ ಇಂತಹುದೊಂದು ಪದ್ಧತಿ ಈ ಸಮುದಾಯದಲ್ಲಿ ಪ್ರಚಲಿತವಿದೆ ಎನ್ನುವುದು ಬೆಳಕಿಗೆ ಬಂದಿತ್ತು. ಈ ಜೋಡಿಯ ಮೂವರು ಪುತ್ರರು ಕೂಡ ಅದೇ ದಿನ ತಮ್ಮ ಲಿವ್-ಇನ್ ಸಂಗಾತಿಗಳೊಂದಿಗೆ ಮದುವೆಯಾಗಿದ್ದರು!

ಈ ಸಮುದಾಯದ ಜನರು ತಮ್ಮ ಹೆತ್ತವರೊಂದಿಗೆ ಒಂದೇ ಮನೆಯಲ್ಲಿ ತಮ್ಮ ಸಂಗಾತಿಗಳೊಂದಿಗೆ ವರ್ಷಗಳ ಕಾಲ ಲಿವ್-ಇನ್ ಬದುಕು ಸಾಗಿಸುತ್ತಾರೆ. ಅಂತಿಮವಾಗಿ ಸಾಕಷ್ಟು ಹಣವನ್ನು ಗಳಿಸಿ ಮದುವೆಯಾಗಲು ನಿರ್ಧರಿಸುವವರೆಗೆ ಅದೇ ಮನೆಯಲ್ಲಿ ಮಕ್ಕಳನ್ನು ಹೆರುತ್ತಾರೆ.

 ಈ ಸಮುದಾಯದಲ್ಲಿ ಇನ್ನೊಂದು ವಿಶಿಷ್ಟ ಪದ್ಧತಿಯಿದೆ. ಯುವತಿಯರನ್ನು ಸ್ವತಂತ್ರವಾಗಿ ಬಿಡಲಾಗುತ್ತದೆ ಮತ್ತು ಅವರು ತಮಗೆ ಇಷ್ಟವಾದವರೊಂದಿಗೆ ಸ್ನೇಹ ಬೆಳೆಸಲು ಅವಕಾಶ ನೀಡಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್‌ನ ಕೆಲವೆಡೆಗಳಲ್ಲಿ ಇದಕ್ಕಾಗಿಯೇ ‘ಪ್ರಣಯ ಜಾತ್ರೆ’ಗಳು ನಡೆಯುತ್ತವೆ. ಇಲ್ಲಿ ತಮ್ಮ ಸಂಗಾತಿಗಳನ್ನು ಆಯ್ದುಕೊಳ್ಳುವ ಯುವತಿಯರು ಅವರೊಂದಿಗೆ ಪರಾರಿಯಾಗುತ್ತಾರೆ. ಎರಡು ದಿನಗಳ ಬಳಿಕ ಗ್ರಾಮಕ್ಕೆ ಮರಳಿ ತಮ್ಮ ಕುಟುಂಬದೊಂದಿಗೆ ವಾಸವಾಗಿರುತ್ತಾರೆ. ಅವರು ಪರಸ್ಪರ ಮದುವೆಯಾಗಿರಬೇಕಾದ ಅಗತ್ಯವಿಲ್ಲ. ಅವರೂ ಲಿವ್-ಇನ್ ಬದುಕು ನಡೆಸುತ್ತ ತಾವು ಮದುವೆಗೆ ಸಿದ್ಧ ಎಂದು ಅನ್ನಿಸಿದಾಗ ಆ ಕೆಲಸವನ್ನು ಮಾಡುತ್ತಾರೆ!.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News