×
Ad

ಇದು ಬಿಜೆಪಿಯ ‘ಬೇಟಿ ಬಚಾವೋ, ಬೇಟಿ ಪಡಾವೋ’: ರಾಹುಲ್ ಗಾಂಧಿ

Update: 2017-09-24 20:39 IST

ಹೊಸದಿಲ್ಲಿ, ಸೆ.24: ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಇದು ಬಿಜೆಪಿಯ ಬೇಟಿ ಬಚಾವೋ, ಬೇಟಿ ಪಡಾವೋ’ ಎಂದಿದ್ದಾರೆ.

ವಿದ್ಯಾರ್ಥಿನಿಯೊಬ್ಬಳನ್ನು ಕಿಡಿಗೇಡಿಗಳು ಚುಡಾಯಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರಿಂದ ಕೆಲ ವಿದ್ಯಾರ್ಥಿನಿಯರು, ಓರ್ವ ಮಹಿಳೆ ಹಾಗೂ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದರು.

ಕ್ಯಾಂಪಸ್ ನಲ್ಲಿ ಪುರುಷ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಪೋಸ್ಟ್ ಮಾಡಿದ್ದ ವಿಡಿಯೋವೊಂದನ್ನು ಲಿಂಕ್ ಮಾಡಿರುವ ರಾಹುಲ್ ಗಾಂಧಿ, “ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಬಿಜೆಪಿಯ ‘ಬೇಟಿ ಬಚಾವೋ, ಬೇಟಿ ಪಡಾವೊ’” ಎಂದು ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಸಂಜೆ ಬೈಕ್‌ಗಳಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಚುಡಾಯಿಸಿತ್ತು. ಗುಂಪು ಆಕೆಯ ಮೈಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿತ್ತು. ವಿದ್ಯಾರ್ಥಿನಿಯು ಕೂಗಿಕೊಂಡಿದ್ದರೂ ಸಮೀಪದ ಕ್ಯಾಂಪಸ್‌ಲ್ಲಿದ್ದ ಭದ್ರತಾ ಸಿಬ್ಬಂದಿ ಆಕೆಯ ನೆರವಿಗೆ ಮುಂದಾಗಿರಲಿಲ್ಲ ಎಂದು ಆರೋಪಿಸಿದ್ದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News