ಒಂದೇ ಹಳಿಯಲ್ಲಿ ಚಲಿಸಿದ ಮೂರು ರೈಲುಗಳು

Update: 2017-09-26 12:28 GMT

ಅಲಹಾಬಾದ್, ಸೆ.26: ಮೂರು ರೈಲುಗಳು ಒಂದೇ ಹಳಿಯಲ್ಲಿ ಸಂಚರಿಸುತ್ತಿರುವುದನ್ನು ರೈಲ್ವೇ ಅಧಿಕಾರಿಗಳು ಸಕಾಲದಲ್ಲಿ ಅರಿತುಕೊಂಡ ಕಾರಣ ಸಂಭವನೀಯ ಅವಘಡವೊಂದು ತಪ್ಪಿಹೋಗಿದೆ.

ಉ.ಪ್ರದೇಶದ ಅಲಹಾಬಾದ್ ಸಮೀಪ ಈ ಘಟನೆ ಸಂಭವಿಸಿದೆ. ದುರೊಂತೊ ಎಕ್ಸ್‌ಪ್ರೆಸ್, ಹತಿಯ- ಆನಂದ್ ವಿಹಾರ್ ಎಕ್ಸ್‌ಪ್ರೆಸ್ ಹಾಗೂ ಮಹಾಬೋಧಿ ಎಕ್ಸ್‌ಪ್ರೆಸ್ ರೈಲುಗಳು ಒಂದೇ ಹಳಿಯಲ್ಲಿ ಸಂಚರಿಸುತ್ತಿದ್ದವು. ಈ ಪ್ರಮಾದವನ್ನು ಅಧಿಕಾರಿಗಳು ಸಕಾಲದಲ್ಲಿ ಅರಿತುಕೊಂಡ ಕಾರಣ ಸಂಭಾವ್ಯ ಭಾರೀ ದುರಂತವೊಂದು ತಪ್ಪಿದೆ.

  ಕಳೆದ ಎರಡು ತಿಂಗಳಲ್ಲಿ ಹಲವಾರು ರೈಲು ಅಪಘಾತಗಳು ಸಂಭವಿಸಿವೆ. ಆಗಸ್ಟ್ 19ರಂದು ಉತ್ಕಲ್ ಎಕ್ಸ್‌ಪ್ರೆಸ್ ರೈಲಿನ 14 ಬೋಗಿಗಳು ಉ.ಪ್ರದೇಶದಲ್ಲಿ ಹಳಿತಪ್ಪಿದ ಕಾರಣ 24 ಮಂದಿ ಮೃತಪಟ್ಟು 156 ಮಂದಿ ಗಾಯಗೊಂಡಿದ್ದರು. ಆಗಸ್ಟ್ 23ರಂದು ಉ.ಪ್ರದೇಶದಲ್ಲೇ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ದಿಲ್ಲಿಗೆ ಬರುತ್ತಿದ್ದ ಕೈಫಿಯತ್ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಸೆ.8ರಂದು ಒಂದು ಗಂಟೆಯೊಳಗೆ ಮೂರು ರೈಲುಗಳು ಹಳಿತಪ್ಪಿದ ಘಟನೆ ನಡೆದಿತ್ತು. ಜಬಲ್‌ಪುರಕ್ಕೆ ಬರುತ್ತಿದ್ದ ಶಕ್ತಿಪುಂಜ್ ಎಕ್ಸ್‌ಪ್ರೆಸ್ ರೈಲು ಓಬ್ರ ಡ್ಯಾಮ್ ಸ್ಟೇಷನ್ ಬಳಿ, ಬಳಿಕ ರಾಂಚಿ- ದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಿಂಟೊ ಸೇತುವೆ ಬಳಿ, ಖಂಡಾಲ ಬಳಿ ಎರಡು ಗೂಡ್ಸ್ ರೈಲು ಹಳಿತಪ್ಪಿತ್ತು.

 ಸೆ.23ರಂದು ಆಗ್ರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಆಗ್ರಾ-ಗ್ವಾಲಿಯರ್ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದ್ದವು. ಪ್ರಕರಣದಲ್ಲಿ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News