ಮಾಲೆಗಾಂವ್ ಸ್ಫೋಟ ಪ್ರಕರಣ: ನಿವೃತ್ತ ಮೇ.ರಮೇಶ ಉಪಾಧ್ಯಾಯಗೆ ಜಾಮೀನು

Update: 2017-09-26 12:30 GMT

ಮುಂಬೈ,ಸೆ.26: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ನಿವೃತ್ತ ಮೇಜರ್ ರಮೇಶ ಉಪಾಧ್ಯಾಯಗೆ ಮುಂಬೈ ಉಚ್ಚ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿಯ ಇತರ ಪ್ರಮುಖ ಆರೋಪಿಗಳಿಗೆ ಮುಂಬೈ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಈಗಾಗಲೇ ಜಾಮೀನು ನೀಡಿರುವುದರಿಂದ ಸಮಾನತೆಯ ನೆಲೆಯಲ್ಲಿ ಉಪಾಧ್ಯಾಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಮತ್ತು ಸಾಧನಾ ಜಾಧವ ಅವರ ಪೀಠವು ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್‌ನ ಮೇಲೆ ಜಾಮೀನು ನೀಡಿತು.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಎ)ಯ ವಕೀಲ ಸಂದೇಶ ಪಾಟೀಲ್ ಅವರು ಜಾಮೀನು ಅರ್ಜಿಯನ್ನು ವಿರೋಧಿಸಿದಾಗ, ಸಮಾನತೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ತನ್ನ ಕೈಗಳನ್ನು ಕಟ್ಟಿಹಾಕಿವೆ ಎಂದು ಪೀಠವು ತಿಳಿಸಿತು.

ಸ್ಫೋಟ ಪ್ರಕರಣದಲ್ಲಿ ಉಪಾಧ್ಯಾಯ ವಹಿಸಿದ್ದ ಪಾತ್ರವು ಪ್ರಮುಖ ಆರೋಪಿ ಶ್ರೀಕಾಂತ ಪುರೋಹಿತ ಪಾತ್ರಕ್ಕಿಂತ ಮಹತ್ತರವಾಗಿತ್ತೇ ಎಂದೂ ನ್ಯಾಯಾಲಯವು ಪ್ರಶ್ನಿಸಿತು.

ಆದರೆ ಇದನ್ನು ನಿರಾಕರಿಸಿದ ಉಪಾಧ್ಯಾಯ ಪರ ವಕೀಲರು, ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗಷ್ಟೇ ಪುರೋಹಿತಗೆ ಜಾಮೀನು ನೀಡಿದೆ ಮತ್ತು ಮುಂಬೈನ ವಿಚಾರಣಾ ನ್ಯಾಯಾಲಯವು ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸುಧಾಕರ ದ್ವಿವೇದಿ ಮತ್ತು ಸುಧಾಕರ ಧಾರ್ ದ್ವಿವೇದಿ ಅವರಿಗೆ ಜಾಮೀನು ನೀಡಿದೆ. ಆದ್ದರಿಂದ ಉಪಾಧ್ಯಾಯಗೆ ಜಾಮೀನು ದೊರೆಯಲೇಬೇಕು ಎಂದು ವಾದಿಸಿದರು.

ಉಪಾಧ್ಯಾಯ ಮತ್ತು ಪುರೋಹಿತ ನಡುವಿನ ದೂರವಾಣಿ ಸಂಭಾಷಣೆಯು ಉಪಾಧ್ಯಾಯ ವಿರುದ್ಧ ಪ್ರಮುಖ ಸಾಕ್ಷವಾಗಿದೆ ಎಂದು ಎನ್‌ಐಎ ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು.

2008,ಸೆ.29ರಂದು ಮಾಲೆಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಏಳು ಜನರು ಸಾವನ್ನಪ್ಪಿದ್ದರು.

ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ಸಾಧ್ವಿ ಪ್ರಜ್ಞಾ ಠಾಕೂರ್,ಪುರೋಹಿತ ಮತ್ತು ಇತರ ಏಳು ಜನರ ವಿರುದ್ಧ ತಪ್ಪಾಗಿ ಕಾನೂನು ಕ್ರಮವನ್ನು ಜರುಗಿಸಿದೆ ಎಂದು ವಿಶೇಷ ಮೋಕಾ ನ್ಯಾಯಾಲಯವು ಈ ಹಿಂದೆ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News