ಸರ್ದಾರ್ ಪಟೇಲ್‌ರನ್ನು ಸ್ಮರಿಸಿದ ರಾಹುಲ್‌ರಿಂದ ಮೋದಿಯ ಗುಜರಾತ್ ಮಾದರಿಯ ಟೀಕೆ
ಅಹ್ಮದಾಬಾದ್,ಸೆ.26: ಮಂಗಳವಾರ ತಂಕಾರಾ ಮತ್ತು ಧ್ರೋಲ್‌ಗಳಲ್ಲಿ ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಸನ್ನಿಹಿತವಾಗಿರುವ ರಾಜ್ಯದ ಜನರನ್ನು ಓಲೈಸಲು ಭಾರತದ ಪ್ರಥಮ ಗೃಹಸಚಿವ, ಗುಜರಾತ್‌ನವರೇ ಆದ ಸರ್ದಾರ್ ವಲ್ಲಭ್‌ಭಾಯಿ ಅವರನ್ನು ನೆನಪಿಸಿಕೊಂಡರು.
‘ಜೈ ಸರ್ದಾರ್,ಜೈ ಪಾಟಿದಾರ್’ ಎಂಬ ಘೋಷಣೆಯಿದ್ದ ಸ್ಕಲ್ ಕ್ಯಾಪ್‌ಗಳನ್ನು ಧರಿಸಿದ್ದ ಪಾಟಿದಾರ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಭೆಗಳಲ್ಲಿ ಮಾತನಾಡಿದ ರಾಹುಲ್, ಗುಜರಾತ್ ದೇಶಕ್ಕೆ ಸರ್ದಾರ ಪಟೇಲ್‌ರನ್ನು ನೀಡಿದೆ. ದೇಶವನ್ನು ಹೊಸ ಎತ್ತರಕ್ಕೊಯ್ಯುವಲ್ಲಿ ಗುಜರಾತ್ ನಾಯಕತ್ವ ವಹಿಸಬೇಕು ಎಂದರು. ಸರ್ದಾರ್ ಪಟೇಲ್ ಪಾಟಿದಾರ್ ಸಮುದಾಯದವರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಪ್ರವರ್ತಿತ ಗುಜರಾತ್ ಅಭಿವೃದ್ಧಿ ಮಾದರಿಯನ್ನು ‘ಒಂದು ವೈಫಲ್ಯ’ಎಂದು ಬಣ್ಣಿಸಿದ ಅವರು, ಸಮಾಜದ ಎಲ್ಲ ವರ್ಗಗಳ ಅಗತ್ಯಗಳಿಗೆ ಸ್ಪಂದಿಸಿರುವ ಹಳೆಯ ಅಮುಲ್ ಮಾದರಿಗೆ ಮರಳಲು ಕರೆ ನೀಡಿದರು.
ಅಮುಲ್ ಗುಜರಾತ್ ಹಾಲು ಮಾರಾಟ ಒಕ್ಕೂಟದ ಬ್ರಾಂಡ್ ಆಗಿದ್ದು, 3.6 ಮಿಲಿಯನ್ ಹಾಲು ಉತ್ಪಾದಕರನ್ನು ಸದಸ್ಯರನ್ನಾಗಿ ಹೊಂದಿದೆ. 1946ರಲ್ಲಿ ಆಗ ಅಸ್ತಿತ್ವದಲ್ಲಿದ್ದ ಏಕಮಾತ್ರ ‘ಪೋಲ್ಸನ್ ಡೇರಿಯಿಂದ ಹಾಲು ಉತ್ಪಾದಕರ ಶೋಷಣೆಯ ವಿರುದ್ಧ ರಕ್ಷಣೆ ನೀಡಲು ಈ ಒಕ್ಕೂಟವನ್ನು ಸ್ಥಾಪಿಸಲಾಗಿತ್ತು. ದೇಶದಲ್ಲಿ ಶ್ವೇತ ಕ್ರಾಂತಿಯನ್ನು ಹುಟ್ಟುಹಾಕಿದ ಈ ಒಕ್ಕೂಟವು ಇಂದು ವಿಶ್ವದಲ್ಲಿ ಅತ್ಯಂತ ದೊಡ್ಡ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2015ರಲ್ಲಿ ಮೀಸಲಾತಿ ಚಳವಳಿ ಸಂದರ್ಭದಲ್ಲಿ ಪೊಲೀಸರೊಂದಿಗೆ ಸಂಘರ್ಷಗಳಲ್ಲಿ 14 ಪಾಟಿದಾರ್ ಯುವಕರು ಸಾವನ್ನಪ್ಪಿದ್ದನ್ನು ನೆನಪಿಸಿಕೊಂಡ ರಾಹುಲ್, ಸಮುದಾಯದ ಯುವಜನರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದಾಗ ಬಿಜೆಪಿ ಗುಂಡುಗಳ ಉತ್ತರವನ್ನು ನೀಡಿತ್ತು. ಇದು ಕಾಂಗ್ರೆಸ್‌ನ ವಿಧಾನವಲ್ಲ. ಅದು ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ನಂಬಿಕೆಯನ್ನಿಟ್ಟಿದೆ ಎಂದರು.
ನಿರುದ್ಯೋಗ ಮತ್ತು ಪಾಟಿದಾರ್ ಸಮುದಾಯದ ಪ್ರಾಬಲ್ಯವಿರುವ ರಾಜ್ಯದ ಕೃಷಿಪ್ರಧಾನ ಪ್ರದೇಶಗಳಲ್ಲಿ ಕೃಷಿಕರ ಬವಣೆಗಳ ಕುರಿತೂ ಅವರು ಮಾತನಾಡಿದರು.
ಪಾಟಿದಾರ್ ಸಮುದಾಯವನ್ನು ಓಲೈಸುವ ರಾಹುಲ್ ಪ್ರಯತ್ನಗಳ ನಡುವೆಯೇ ಗುಜರಾತ್‌ನ ಬಿಜೆಪಿ ಸರಕಾರವು ಮಂಗಳವಾರ ಪಾಟಿದಾರ್ ಮೀಸಲಾತಿ ಚಳವಳಿ ಯಲ್ಲಿ ತೊಡಗಿಕೊಂಡಿರುವ ಗುಂಪುಗಳನ್ನು ಮಾತುಕತೆಗಳಿಗೆ ಆಹ್ವಾನಿಸಿದೆ. ಪ್ರತಿಭಟನೆಯ ನಾಯಕ ಹಾರ್ದಿಕ ಪಟೇಲ್ ಅವರು ತಾನು ಸರಕಾರದ ಜೊತೆ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.