ಅಫಘಾನಿಸ್ತಾನದಲ್ಲಿ ಭಾರತದ ಪಡೆಗಳನ್ನು ನಿಯೋಜಿಸುವುದಿಲ್ಲ: ಭಾರತದ ಸ್ಪಷ್ಟನೆ

Update: 2017-09-26 13:31 GMT

ಹೊಸದಿಲ್ಲಿ,ಸೆ.26: ಭಾರತ ಮತ್ತು ಅಮೆರಿಕ ಸೋಮವಾರ ಅಫಘಾನಿಸ್ತಾನದ ವಿಷಯದೊಂದಿಗೆ ತಮ್ಮ ನಡುವಿನ ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುವ ಮಾರ್ಗೋಪಾಯಗಳು ಮತ್ತು ಪಾಕಿಸ್ತಾನದಿಂದ ಹರಡುತ್ತಿರುವ ಭಯೋತ್ಪಾದನೆಯ ಕುರಿತು ಚರ್ಚಿಸಿದವು. ಅಫಘಾನಿಸ್ತಾನದಲ್ಲಿ ಭಾರತೀಯ ಪಡೆಗಳ ನಿಯೋಜನೆಯನ್ನು ಇದೇ ವೇಳೆ ಸರಕಾರವು ತಳ್ಳಿಹಾಕಿತು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಾಟಿಸ್ ಅವರು ದ್ವಿಪಕ್ಷೀಯ ರಕ್ಷಣಾ ಪಾಲುದಾರಿಕೆಯ ಕುರಿತು ವಿಸ್ತ್ರತ ಚರ್ಚೆಗಳನ್ನು ನಡೆಸಿದರು.

ನಮ್ಮ ನೆರೆಹೊರೆಯಲ್ಲಿನ ಸ್ಥಿತಿ ಮತ್ತು ಹೆಚ್ಚುತ್ತಿರುವ ಗಡಿಯಾಚೆಯ ಭಯೋತ್ಪಾದನೆ ಪಿಡುಗಿನ ಕುರಿತು ಆಳವಾಗಿ ಚರ್ಚಿಸಲಾಯಿತು. ಈ ವಿಷಯದಲ್ಲಿ ಉಭಯ ರಾಷ್ಟ್ರಗಳ ನಿಲುವುಗಳಲ್ಲಿ ಸಹಮತ ಹೆಚ್ಚುತ್ತಿದೆ ಎಂದು ಸೀತಾರಾಮನ್ ಅವರು ಜಂಟಿ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ಭಯೋತ್ಪಾದನೆಯನ್ನು ಸರಕಾರಿ ನೀತಿಯ ಸಾಧನವಾಗಿ ಬಳಸುತ್ತಿರುವವರನ್ನು ಉತ್ತರದಾಯಿಗಳನ್ನಾಗಿ ಮಾಡುವುದರ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಮೂಲಸೌಕರ್ಯಗಳನ್ನು ನಿರ್ಮೂಲಿಸುವುದರ ಮಹತ್ವವನ್ನು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಭಯೋತ್ಪಾದನೆಗೆ ಆಶ್ರಯ ನೀಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಮಾಟಿಸ್, ಯುದ್ಧ ಸಂತ್ರಸ್ತ ಅಫಘಾನಿಸ್ತಾನದಲ್ಲಿ ಭಾರತದ ಕೊಡುಗೆಗಳನ್ನು ಪ್ರಶಂಸಿಸಿದರು.

ಅಫಘಾನಿಸ್ತಾನಕ್ಕೆ ನೆರವಾಗಲು ಭಾರತವು ತನ್ನ ಯೋಧರನ್ನು ಕಳುಹಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಅಲ್ಲಿ ನಮ್ಮ ಪಡೆಗಳನ್ನು ನಿಯೋಜಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದರು.

 ಪಾಕಿಸ್ತಾನದಿಂದ ಹರಡುತ್ತಿರುವ ಭಯೋತ್ಪಾದನೆಯ ವಿಷಯವನ್ನು ತಾನು ಆ ರಾಷ್ಟ್ರ ದೊಂದಿಗೆ ಪ್ರಸ್ತಾಪಿಸುವುದಾಗಿ ಮಾಟಿಸ್ ಭರವಸೆ ನೀಡಿದ್ದಾರೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News