ಮ್ಯಾನ್ಮಾರ್‌ನಿಂದ ಮಾನವತೆಯ ವಿರುದ್ಧದ ಅಪರಾಧ: ಹ್ಯೂಮನ್ ರೈಟ್ಸ್ ವಾಚ್ ಆರೋಪ

Update: 2017-09-26 18:09 GMT

ಯಾಂಗನ್ (ಮ್ಯಾನ್ಮಾರ್), ಸೆ. 26: ರಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಮಾನವತೆಯ ವಿರುದ್ಧ ಅಪರಾಧಗಳನ್ನು ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಮಂಗಳವಾರ ಹೇಳಿದೆ ಹಾಗೂ ಆ ದೇಶದ ವಿರುದ್ಧ ಆರ್ಥಿಕ ದಿಗ್ಬಂಧನ ಮತ್ತು ಶಸ್ತ್ರಾಸ್ತ್ರ ನಿಷೇಧ ವಿಧಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕರೆ ನೀಡಿದೆ.

ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಪೊಲೀಸ್ ಮತ್ತು ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ, ಸೇನೆ ನಡೆಸುತ್ತಿರುವ ಕಾರ್ಯಾಚರಣೆಗೆ ಬೆದರಿ ಸುಮಾರು 4.4 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ರೊಹಿಂಗ್ಯಾ ಮುಸ್ಲಿಮರು ಬೌದ್ಧ ಬಾಹುಳ್ಯದ ಮ್ಯಾನ್ಮಾರ್‌ನಿಂದ ಹೊರ ಹೋಗುವಂತಹ ಪರಿಸ್ಥಿತಿಯನ್ನು ಸೇನೆ ಮತ್ತು ಬೌದ್ಧ ಗುಂಪುಗಳು ಸೃಷ್ಟಿಸುತ್ತಿವೆ ಎಂದು ರೊಹಿಂಗ್ಯಾ ಮುಸ್ಲಿಮರು ಆರೋಪಿಸಿದ್ದಾರೆ.

‘‘ಬರ್ಮಾ ಸೇನೆಯು ರೊಹಿಂಗ್ಯಾರನ್ನು ರಖೈನ್ ರಾಜ್ಯದಿಂದ ಅಮಾನುಷವಾಗಿ ಹೊರದಬ್ಬುತ್ತಿದೆ’’ ಎಂದು ಹ್ಯೂಮನ್ಸ್ ರೈಟ್ಸ್ ವಾಚ್‌ನ ಕಾನೂನು ಮತ್ತು ನೀತಿ ನಿರ್ದೇಶಕ ಜೇಮ್ಸ್ ರಾಸ್ ಹೇಳಿದರು.

‘‘ಸೇನೆಯು ಗ್ರಾಮಸ್ಥರ ಸಾಮೂಹಿಕ ಹತ್ಯಾಕಾಂಡ ಮತ್ತು ಮನೆಗಳಿಗೆ ಬೆಂಕಿ ಕೊಡುವ ಕಾರ್ಯದಲ್ಲಿ ತೊಡಗಿದ್ದು, ಇದು ಮಾನವತೆಯ ವಿರುದ್ಧದ ಅಪರಾಧವಾಗಿದೆ’’ ಎಂದು ಅವರು ನುಡಿದರು.

ಉಪಗ್ರಹ ಚಿತ್ರಗಳ ಆಧಾರದಲ್ಲಿ ತಾನು ಮಾಡಿರುವ ಸಂಶೋಧನೆಗಳ ಪ್ರಕಾರ, ಅಲ್ಲಿ ಗಡಿಪಾರು, ಕೊಲೆ, ಕೊಲೆಯತ್ನ, ಅತ್ಯಾಚಾರ ಹಾಗೂ ಇತರ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆ ನಡೆಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News