ಆರ್ಥಿಕ ದುಃಸ್ಥಿತಿಗಾಗಿ ಯುಪಿಎ ಸರಕಾರವನ್ನು ದೂರಬೇಡಿ:ಯಶವಂತ್ ಸಿನ್ಹಾ

Update: 2017-09-28 15:15 GMT

ಹೊಸದಿಲ್ಲಿ,ಸೆ.28: ಬುಧವಾರವಷ್ಟೇ ಆಂಗ್ಲ ದೈನಿಕವೊಂದರ ತನ್ನ ಲೇಖನದಲ್ಲಿ ಆರ್ಥಿಕತೆಯ ಕಳಪೆ ನಿರ್ವಹಣೆಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ಮಾಜಿ ವಿತ್ತಸಚಿವ ಯಶವಂತ್ ಸಿನ್ಹಾ ಅವರು ಗುರುವಾರವೂ ತನ್ನ ದಾಳಿಯನ್ನು ಮುಂದುವರಿಸಿದ್ದಾರೆ. ನಮಗೂ ಬಹಳಷ್ಟು ಅವಕಾಶಗಳು ದೊರಕಿದ್ದವು. ಹೀಗಾಗಿ ಸರಕಾರವು ದೇಶದ ಇಂದಿನ ಹತಾಶ ಆರ್ಥಿಕ ಸ್ಥಿತಿಗೆ ಹಿಂದಿನ ಯುಪಿಎ ಸರಕಾರವನ್ನು ದೂರುವಂತಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.

2014ರ ಮುನ್ನ ತಾನು ಬಿಜೆಪಿಯ ವಕ್ತಾರನಾಗಿದ್ದಾಗ ಯುಪಿಎ ಸರಕಾರದಡಿ ದೇಶದ ಆರ್ಥಿಕ ಸ್ಥಿತಿಯನ್ನು ‘ನೀತಿ ನಿಷ್ಕ್ರಿಯತೆ’ ಎಂದು ಪಕ್ಷವು ಬಣ್ಣಿಸಿತ್ತು ಎಂದು ಸಿನ್ಹಾ ನೆನಪಿಸಿಕೊಂಡರು.

ಇಂದಿನ ಆರ್ಥಿಕ ಸ್ಥಿತಿಗಾಗಿ ಮನಮೋಹನ್ ಸಿಂಗ್ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಜೇಟ್ಲಿ ಅವರ ಕಾರ್ಯವೈಖರಿ ಮೆಚ್ಚುಗೆಗೆ ಅರ್ಹವಲ್ಲ. ನೋಟು ಅಮಾನ್ಯ ಮತ್ತು ಜಿಎಸ್‌ಟಿ ಜಾರಿ ಸರಕಾರದ ವೈಫಲ್ಯಗಳಾಗಿವೆ. ಮೋದಿ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಪ್ರಗತಿ ಸಾಧಿಸಲು ಬಹಳಷ್ಟು ಮಾರ್ಗಗಳಿದ್ದವು ಎಂದು ಅವರು ಹೇಳಿದರು.

ದೇಶದಲ್ಲಿಂದು ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ ಎಂದರು.

 ಸರಕಾರದ ಆರ್ಥಿಕ ನೀತಿಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವರಾದ ರಾಜನಾಥ ಸಿಂಗ್ ಮತ್ತು ಪಿಯೂಷ್ ಗೋಯಲ್‌ರನ್ನು ವ್ಯಂಗ್ಯವಾಡಿದ ಸಿನ್ಹಾ, ಅವರು ನನಗಿಂತ ದೊಡ್ಡವರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News