'ಸಂಘಮಿತ್ರ'ಳಾಗಿ ದಿಶಾ ಪಟಾನಿ

Update: 2017-09-29 13:47 GMT

ತಮಿಳಿನ ಮೆಗಾಬಜೆಟ್ ಚಿತ್ರ ‘ಸಂಘಮಿತ್ರ’ಕ್ಕೆ ಕೊನೆಗೂ ನಾಯಕಿ ದೊರೆತಿದ್ದಾಳೆ. ಬಾಲಿವುಡ್‌ನ ಉದಯೋನ್ಮುಖ ನಟಿ, ಖ್ಯಾತ ರೂಪದರ್ಶಿ ದಿಶಾ ಪಟಾನಿ ಸಂಘಮಿತ್ರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಸಂಘಮಿತ್ರ ಎಂಬ ಹೆಸರಿನ ರಾಜಕುಮಾರಿಯ ಕಥೆ ಹೇಳುವ ಈ ಫ್ಯಾಂಟಸಿ ಚಿತ್ರದ ನಾಯಕಿ ಪಾತ್ರದಲ್ಲಿ ಶ್ರುತಿ ಹಾಸನ್ ಅಭಿನಯಿಸಲಿದ್ದಾರೆಂದು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಅಷ್ಟೇ ಚಿತ್ರದ ಫೋಟೋಶೂಟ್‌ನಲ್ಲೂ ಆಕೆ ಪಾಲ್ಗೊಂಡಿದ್ದರು. ಸಂಘಮಿತ್ರ ಪಾತ್ರಕ್ಕೆ ನೈಜತೆ ತುಂಬಲು ಆಕೆ ಪ್ರಸಿದ್ಧ ಸಮರ ಕಲೆ ಕಳರಿಪಯಟ್, ಕುದುರೆ ಸವಾರಿ ಕೂಡಾ ಕಲಿತಿದ್ದರು. ಆದರೆ, ಕೆಲವು ವಾರಗಳ ಹಿಂದೆಯಷ್ಟೇ, ಆಕೆ ಚಿತ್ರದಿಂದ ಹಿಂದೆ ಸರಿದಿದ್ದಾರೆಂದು ಸುದ್ದಿಯಾಗಿತ್ತು.

ಆದರೆ ತೆಳ್ಳಗಿನ ದೇಹದ ಶ್ರುತಿಯನ್ನು, ಸಂಘಮಿತ್ರಾ ಪಾತ್ರದಲ್ಲಿ ಪ್ರೇಕ್ಷಕರು ಒಪ್ಪುವರೇ ಎಂಬ ಸಂಶಯದಿಂದ ಆಕೆಯನ್ನು ಕೈಬಿಡಲಾಗಿದೆಯೆಂದು ನಿರ್ಮಾಣ ಸಂಸ್ಥೆಯಾದ ಶ್ರೀ ತೆಂಡ್ರಲ್ ಫಿಲ್ಮ್ಸ್ ಬಹಿರಂಗಪಡಿಸಿದೆ.

ಆದರೆ ಶ್ರುತಿ ಹೇಳಿದ್ದೇ ಬೇರೆ. ಚಿತ್ರದ ಸ್ಕ್ರಿಪ್ಟ್ ಇನ್ನೂ ಪೂರ್ತಿಯಾಗಿಲ್ಲ. ಅಲ್ಲದೆ ಶೂಟಿಂಗ್ ಪೂರ್ಣಗೊಳ್ಳಲು ಎರಡು ವರ್ಷಗಳೇ ಬೇಕಾಗುವುದರಿಂದ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳಲು ಕಷ್ಟವಾಗಲಿದೆ. ಹೀಗಾಗಿ ತಾನಾಗಿಯೇ ಚಿತ್ರದಿಂದ ಹೊರಬಂದಿರುವುದಾಗಿ ಶ್ರುತಿ ಹೇಳಿದ್ದರು. ಆ ಬಳಿಕ ಸಂಘಮಿತ್ರ ಪಾತ್ರಕ್ಕೆ ನಯನತಾರಾ, ಅನುಷ್ಕಾ ಶೆಟ್ಟಿ ಹೆಸರುಗಳೂ ಕೂಡಾ ಕೇಳಿಬಂದಿತ್ತಾದರೂ, ಅಂತಿಮವಾಗಿ ದಿಶಾ ಪಟಾನಿ ಆಯ್ಕೆಯಾಗಿದ್ದಾರೆ. ನಾಯಕಿ ಪ್ರಧಾನ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ಆರ್ಯ, ಜಯಂ ರವಿ ಮುಖ್ಯಪಾತ್ರಗಳಲ್ಲಿ ನಟಿಸಲಿದ್ದಾರೆ. ಬಾಹುಬಲಿಯ ರೀತಿಯಲ್ಲಿ ಸಂಘಮಿತ್ರ ಕೂಡಾ ಎರಡು ಭಾಗಗಳಾಗಿ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News