×
Ad

ಪಾಕ್ ನಿರ್ಮಿತ ರಹಸ್ಯ ಸುರಂಗ ಪತ್ತೆಹಚ್ಚಿದ ಬಿಎಸ್‍ಎಫ್

Update: 2017-09-30 19:58 IST

ಶ್ರೀನಗರ, ಸೆ.30: ಜಮ್ಮು-ಕಾಶ್ಮೀರದ ಅರ್ನಿಯ ಸೆಕ್ಟರ್‌ನಲ್ಲಿ ಭಾರತ-ಪಾಕ್ ಗಡಿನಿಯಂತ್ರಣಾ ರೇಖೆಯ ಬಳಿ 14 ಅಡಿ ಉದ್ದದ ಗುಪ್ತ ಸುರಂಗವೊಂದನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಅಲ್ಲದೆ ಸಮೀಪದಲ್ಲೇ ಶಸ್ತ್ರಾಸ್ತ್ರ ಸಂಗ್ರಹಾಗಾರ ಎಂದು ಶಂಕಿಸಲಾಗಿರುವ ಸ್ಥಳವೊಂದನ್ನೂ ಭದ್ರತಾ ಪಡೆಗಳು ಪತ್ತೆಹಚ್ಚಿವೆ.

ಗಡಿಭಾಗದಲ್ಲಿ ಹಾಕಲಾಗಿರುವ ಮುಳ್ಳುತಂತಿಯ ಬೇಲಿಯವರೆಗೆ ಈ ಸುರಂಗ ಮಾರ್ಗವಿದೆ. ಪಾಕಿಸ್ತಾನದಿಂದ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸಲು ಈ ಸುರಂಗ ಮಾರ್ಗ ರಚಿಸಿರುವ ಶಂಕೆಯನ್ನು ಭದ್ರತಾ ಪಡೆಗಳು ವ್ಯಕ್ತಪಡಿಸಿವೆ. ಇತ್ತೀಚಿನ ದಿನದಲ್ಲಿ ಈ ಪ್ರದೇಶದಲ್ಲಿ ಪಾಕ್ ಪಡೆಗಳು ನಿರಂತರ ಕದನವಿರಾಮ ಉಲ್ಲಂಘಿಸಿ ಭಾರತೀಯ ಪಡೆಯ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದು, ಇದು ಸುರಂಗ ತೋಡುವ ಕಾರ್ಯಕ್ಕೆ ಪೂರಕವಾಗಿ ನಡೆದಿರಬೇಕು ಎಂದೂ ಶಂಕಿಸಲಾಗಿದೆ.

   ಅರ್ನಿಯ ಸೆಕ್ಟರ್‌ನ ದಮಾನ ಬಳಿಇರುವ ವಿಕ್ರಮ್ ಮತ್ತು ಪಟೇಲ್ ಸೇನಾನೆಲೆ ಮಧ್ಯೆ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗ ಪತ್ತೆಯಾಗಿದೆ. ಹಬ್ಬದ ಸೀಸನ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉದ್ದೇಶದಿಂದ ಉಗ್ರರನ್ನು ಭಾರತದೊಳಗೆ ನುಸುಳಿಸುವ ಪಾಕಿಸ್ತಾನದ ಸಂಚಿನ ಒಂದು ಭಾಗ ಇದಾಗಿದೆ ಎಂದು ಗಡಿ ನಿಯಂತ್ರಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಕಳೆದ ಏಳುತಿಂಗಳಲ್ಲಿ ಪತ್ತೆಯಾಗಿರುವ ಎರಡನೇ ಸುರಂಗ ಮಾರ್ಗ ಇದಾಗಿದೆ. ಸಾಂಭದ ರಾಮ್‌ಗಡ ಸೆಕ್ಟರ್‌ನಲ್ಲಿ ಒಂದು ಸುರಂಗ ಪತ್ತೆಯಾಗಿತ್ತು.

ಈ ಮಧ್ಯೆ ಹೇಳಿಕೆ ನೀಡಿರುವ ಪ್ರಧಾನಮಂತ್ರಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್, ಭಯೋತ್ಪಾದಕತೆಗೆ ಪ್ರೋತ್ಸಾಹ ನೀಡುವ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದೆದುರು ಬೆತ್ತಲಾಗಿದೆ. ಆದರೂ ತನ್ನ ಚಾಳಿಯನ್ನು ಬಿಡುತ್ತಿಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಭದ್ರತಾ ಪಡೆಗಳ ಕಾರ್ಯನಿರ್ವಹಣೆಗೆ ಸ್ವಾತಂತ್ರ ನೀಡಿದ ಕಾರಣ ಸೇನೆ ಮತ್ತು ಬಿಎಸ್‌ಎಫ್‌ಗೆ ಇತ್ತೀಚಿನ ದಿನದಲ್ಲಿ ಭರ್ಜರಿ ಯಶಸ್ಸು ದೊರೆತಿದೆ ಎಂದು ಅಭಿಪ್ರಾಯಪಟ್ಟರು.

 2009ರಲ್ಲಿ ಜಮ್ಮುವಿನ ಅಕ್ನೂರ್ ವಿಭಾಗದಲ್ಲಿ ಗಡಿನಿಯಂತ್ರಣಾ ರೇಖೆಯ ಬಳಿಕ ಸುರಂಗವೊಂದು ಪತ್ತೆಯಾಗಿತ್ತು. 2012ರಲ್ಲಿ ಸಾಂಬ ವಿಭಾಗದ ಬಳಿ ಪತ್ತೆಯಾದ ಸುರಂಗ 400 ಮೀಟರ್ ಉದ್ದವಿತ್ತು ಹಾಗೂ ವಾತಾಯನ(ಗಾಳಿ ಬೆಳಕು) ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News