ಜಿಎಸ್‌ಟಿ ತೆರಿಗೆ ವ್ಯಾಪ್ತಿಯಲ್ಲಿ ‘ಮನ್ ಕಿ ಬಾತ್’

Update: 2017-09-30 18:30 GMT

ದೇಶ ಅಧೋಗತಿಯತ್ತ ಸಾಗುತ್ತಿದೆ, ಆರ್ಥಿಕ ಬಿಕ್ಕಟ್ಟು ತಲೆದೋರಿದೆ ಎಂದು ಇದೀಗ ಬಿಜೆಪಿಯ ನಾಯಕರೇ ವಿರೋಧಪಕ್ಷಗಳಂತೆ ಕೂಗೆಬ್ಬಿಸುತ್ತಿರುವುದನ್ನು ನೋಡಿ ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿ ಬಿಟ್ಟ. ಮೋದಿ ಅದೇನೋ ಮಾಡುತ್ತಿದ್ದಾರೆ, ನೋಟು ನಿಷೇಧದಿಂದಾಗಿ ಭಾರೀ ಕಪ್ಪು ಹಣ ದೊರಕಿದ್ದು ಅದನ್ನು ಯಾರಿಗೂ ಹೇಳದೆ ಮುಚ್ಚಿಟ್ಟಿದ್ದಾರೆ. ಸಮಯ ಬಂದಾಗ ಅದನ್ನು ಬಹಿರಂಗ ಪಡಿಸುತ್ತಾರೆ ಎಂದೇ ಕಾಸಿ ಈವರೆಗೆ ನಂಬಿದ್ದ. ಇದೀಗ ನೋಡಿದರೆ, ಏಡಿಯೂ ಇಲ್ಲ, ಏಡಿಗೆ ಹಾಕಿದ ಕೈಯೂ ಇಲ್ಲ ಎಂಬಂತೆ, ದೇಶ ಹಿಂದಕ್ಕೆ ಚಲಿಸುತ್ತಿದೆ ಎಂದು ಬಿಜೆಪಿ ನಾಯಕರೇ ಕೂಗೆಬ್ಬಿಸಿದರೆ, ದೇಶದ ಗತಿ ಏನಾಗಬೇಕು? ಆರೆಸ್ಸೆಸ್‌ನ ಶಾಖೆಯಿಂದ ಹೊರಟ ಸುದ್ದಿಯನ್ನೆಲ್ಲ ಪ್ರಸಾದವೆಂದು ಸ್ವೀಕರಿಸಿದ್ದ ಕಾಸಿ, ನಿಜ ವಿಷಯವೇನು ಎನ್ನುವುದನ್ನು ತಿಳಿಯಲು ಅಮಿತ್ ಶಾ ಅವರ ಬಳಿಗೆ ಧಾವಿಸಿದ. ಹೇಗೂ ರಾಮನ ಬಂಟ ಹನುಮಂತನಂತೆ ಅಮಿತ್ ಶಾ ಮೋದಿಯ ಹಿಂದೆ ತಿರುಗಾಡುವವರು. ಅವರೇ ಇದಕ್ಕೆ ಪರಿಹಾರ ನೀಡುತ್ತಾರೆ ಎಂಬ ಭರವಸೆ ಕಾಸಿಯದು. ಕರ್ನಾಟಕ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದ ಅಮಿತ್, ಅಲ್ಲಿಂದ ಪತ್ರಕರ್ತನೊಬ್ಬ ಬಂದಿದ್ದಾನೆ ಎನ್ನುವುದು ತಿಳಿದು ಧಾವಿಸಿದರು. ಪತ್ರಕರ್ತ ಕಾಸಿ ತನ್ನ ಹರಿದ ಜೋಳಿಗೆಯಿಂದ ನೋಟ್‌ಬುಕ್ ಕೈಯಲ್ಲಿ ಹಿಡಿದು, ಒಂದೊಂದೇ ಪ್ರಶ್ನೆಯನ್ನು ಕೇಳ ತೊಡಗಿದ.

‘‘ಸಾರ್ ಭಾರತದ ಆರ್ಥಿಕ ಸ್ಥಿತಿ ಹಿಂದಕ್ಕೆ ಚಲಿಸುತ್ತಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಹೀಗಾದರೆ ನಿಮ್ಮನ್ನು ನಂಬಿದ ನಮ್ಮಂತಹ ಭಕ್ತರ ಗತಿ ?’’ ಕಾಸಿ ಆರ್ತನಾಗಿ ಕೇಳಿದ.
ಅಮಿತ್ ಶಾ ತಮ್ಮ ತುಘಲಕ್ ಗಡ್ಡವನ್ನು ಸವರಿ ಮಾತನಾಡ ತೊಡಗಿದರು ‘‘ನೋಡ್ರೀ...ಬಿಜೆಪಿ ಮತ್ತು ಆರೆಸ್ಸೆಸ್‌ನ ಉದ್ದೇಶವೇ ಭಾರತದ ಅರ್ಥವ್ಯವಸ್ಥೆಯನ್ನು ಹಿಂದಕ್ಕೆ ಕೊಂಡೊಯ್ಯುವುದಾಗಿತ್ತು. ಒಂದಾನೊಂದು ಕಾಲದಲ್ಲಿ ಭಾರತ ಶ್ರೀಮಂತವಾಗಿತ್ತು. ನಿಮ್ಮ ಕರ್ನಾಟಕ ಸಮೀಪದ ವಿಜಯನಗರದಲ್ಲಿ ಮುತ್ತು ರತ್ನಗಳನ್ನು ಸೇರಿನಲ್ಲಿ ಅಳೆಯುತ್ತಿದ್ದರು. ಇದೀಗ ಆರ್ಥಿಕ ತಜ್ಞರೆಲ್ಲರೂ, ಭಾರತ ಹಿಂದಕ್ಕೆ ಹೋಗಿದೆ ಎನ್ನುವುದನ್ನು ಒಪ್ಪಿಕೊಂಡಿರುವುದರಿಂದ, ಮೋದಿ ಕನಸು ನನಸಾಗಿದೆ. ವಿಶ್ವಸಂಸ್ಥೆ ಕೂಡ ಇದನ್ನೇ ಹೇಳಿ ಮೋದಿಯ ಸಾಧನೆಯನ್ನು ಹೊಗಳಿದೆ. ಇನ್ನಷ್ಟು ಹಿಂದಕ್ಕೆ ಅಂದರೆ, ಭಾರತವನ್ನು ಮಹಾಭಾರತದ ಕಾಲಕ್ಕೆ ಒಯ್ಯುವುದು ಮೋದಿಯ ಗುರಿ’’
ಮಹಾಭಾರತ ಎಂದಾಗ ಕಾಸಿಯ ಕಣ್ಣ ಮುಂದೆ ಕುರುಕ್ಷೇತ್ರ ಕಾಣಿಸ ತೊಡಗಿತು.‘‘ಸಾರ್...ರೈತರೆಲ್ಲ ಸಾಲ ಸೋಲದಿಂದ ಸಾಯುತ್ತಿದ್ದಾರೆ ಸಾರ್...’’
ಅಮಿತ್ ಗುರ್ರ್‌ ಎಂದರು ‘‘ನೋಡ್ರೀ...ರೈತರು ಸೇರಿನಲ್ಲಿ ಭತ್ತ ಅಳೆದರೆ ಅದರಿಂದ ದೇಶಕ್ಕೆ ನಾಚಿಕೆ. ಈಗ ನೋಡಿ, ಅಂಬಾನಿ, ಅದಾನಿ, ರಾಮ್‌ದೇವ್ ಮೊದಲಾದವರು ಸೇರಿನಲ್ಲಿ ಮುತ್ತು ರತ್ನಗಳನ್ನು ಅಳೆದು ವಿಶ್ವದ ಗಮನ ಸೆಳೆಯುತ್ತಿದ್ದಾರೆ....’’
‘‘ಆದರೆ ಬಡವರ ಸಂಖ್ಯೆ ಹೆಚ್ಚಾಗುತ್ತಿದೆ...’’ ಕಾಸಿ ಅದೇನೋ ಹೇಳಲು ಪ್ರಯತ್ನಿಸಿದ.
‘‘ನೋಡ್ರಿ, ನಾವು ಬುಲೆಟ್ ಟ್ರೈನ್ ಓಡಿಸೋದು ಜನರು ಓಡಾಡುವುದಕ್ಕಲ್ಲ. ವಿಶ್ವಕ್ಕೆ ನಾವು ಶ್ರೀಮಂತರು ಎಂದು ತೋರಿಸುವುದಕ್ಕೆ. ಎಲ್ಲ ಬಡವರು ಈ ಬುಲೆಟ್ ಟ್ರೈನ್‌ನ ಹಳಿಯ ಮೇಲೆ ಬಂದು ಮಲಗಲಿ. ಒಂದೇ ದಿನದಲ್ಲಿ ದೇಶದ ಬಡತನವೆಲ್ಲ ತೊಲಗುತ್ತದೆ.’’ ಶಾ ಹೇಳಿದರು.
‘‘ಸಾರ್ ನಿಮ್ಮ ಮುಂದಿನ ಯೋಜನೆಗಳು ಏನು? ಜನರಲ್ಲಿ ಹಣ ಇಲ್ಲ....ದೇಶವನ್ನು ಅಭಿವೃದ್ಧಿ ಮಾಡುವುದು ಹೇಗೆ?’’ ಕಾಸಿ ಕೇಳಿದ.
‘‘ನೋಡ್ರೀ...ಮೋದಿಯವರು ಜನರಿಗೆ ಹೊಸತೊಂದು ಕೊಡುಗೆಯನ್ನು ನೀಡಿದ್ದಾರೆ. ಈವರೆಗೆ ಅವರು ತಿಂಗಳಿಗೊಮ್ಮೆ ಮನ್ ಕಿ ಬಾತ್ ಭಾಷಣ ಮಾಡಿ ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದರು. ಇನ್ನು ಮುಂದೆ ವಾರಕ್ಕೆ ಎರಡು ಬಾರಿ ಮನ್‌ಕಿ ಬಾತ್ ಭಾಷಣ ಮಾಡಿ ದೇಶವನ್ನು ಅಭಿವೃದ್ಧಿಯ ತುತ್ತ ತುದಿಗೆ ಏರಿಸಲಿದ್ದಾರೆ....’’ ಅಮಿತ್ ಶಾ ಹೊಸ ಯೋಜನೆಯನ್ನು ಘೋಷಿಸಿದರು.
‘‘ಇದರಿಂದ ದೇಶದ ಅಭಿವೃದ್ಧಿ ಹೇಗಾಗುತ್ತದೆ ಸಾರ್?’’ ಅರ್ಥವಾಗದೆ ಕಾಸಿ ಪ್ರಶ್ನೆ ಮಾಡಿದ.
  ‘‘ನೋಡ್ರೀ...ಮೋದಿಯವರ ಮನ್ ಕಿ ಬಾತ್ ಭಾಷಣದಿಂದ ಒಂದು ವಿಶೇಷವಾದ ಪಾಸಿಟಿವ್ ಎನರ್ಜಿ ಉತ್ಪಾದನೆಯಾಗುವುದನ್ನು ಈ ದೇಶದ ಜ್ಯೋತಿಷಿಗಳು, ವಾಸ್ತುಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ. ಅಮೆರಿಕದಂತಹ ದೇಶಗಳೂ ಅವರು ಭಾಷಣಗಳ ಮೂಲಕ ಉತ್ಪಾದಿಸುತ್ತಿರುವ ಈ ಎನರ್ಜಿಯನ್ನು ಕಂಡು ಅಚ್ಚರಿಗೊಂಡಿವೆೆ. ಚೀನಾ ಈ ಎನರ್ಜಿಗೆ ಹೆದರಿ ಯುದ್ಧದಿಂದ ಹಿಂದೆ ಸರಿದಿದೆ. ವಾರಕ್ಕೆ ಎರಡು ಬಾರಿ ಮೋದಿಯವರು ಈ ಎನರ್ಜಿಯನ್ನು ಉತ್ಪಾದಿಸಿ ಆ ಎನರ್ಜಿಯನ್ನು ಬಳಸಿಕೊಂಡು ದೇಶದ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡುವ ಉದ್ದೇಶ ಹೊಂದಿದ್ದಾರೆ. ಹಾಗೆಯೇ ಈಗ ಇರುವ ಅಡುಗೆ ಸಿಲಿಂಡರ್‌ಗಳನ್ನೆಲ್ಲ ನೋಟು ನಿಷೇಧದ ಹಾಗೆ ನಿಷೇಧ ಮಾಡಲಿದ್ದೇವೆ. ಇದರಿಂದಾಗಿ ಅಕ್ರಮ ಸಿಲಿಂಡರ್ ದಾಸ್ತಾನಿಗೆ ತಡೆ ಬೀಳುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರೂ ಮೋದಿಯವರ ಭಾಷಣದಿಂದ ಹೊರ ಸೂಸುವ ಎನರ್ಜಿಯನ್ನು ಬಳಸಿಕೊಂಡು ಅಡುಗೆ ಮಾಡುವ ಹಾಗೆ ವ್ಯವಸ್ಥೆ ಮಾಡುತ್ತೇವೆ. ಈ ಎನರ್ಜಿ ಉಚಿತವಾಗಿ ವಿತರಣೆಯಾಗುವುದರಿಂದ ಬಡವರೆಲ್ಲ ಸಿಲಿಂಡರ್‌ಗೆ ಹಣ ತೆರುವ ಸಮಸ್ಯೆಯಿಂದ ಮುಕ್ತರಾಗುತ್ತಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ವಾಹನಗಳೆಲ್ಲ ಇದೇ ಎನರ್ಜಿಯನ್ನು ಬಳಸಿ ದೇಶದಲ್ಲಿ ಓಡಾಡಲಿವೆ...ದೇಶದ ಜನರೆಲ್ಲ ಬಳಸಿ ಉಳಿದ ಎನರ್ಜಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಈಗಾಗಲೇ ಟ್ರಂಪ್ ಅವರು ಈ ಎನರ್ಜಿಯ ಕುರಿತಂತೆ ವಿಶೇಷ ಆಸಕ್ತಿಯನ್ನು ವಹಿಸಿದ್ದಾರೆ. ಇದರಿಂದ ವಿದೇಶಿ ವಿನಿಮಯ ಹೆಚ್ಚಲಿದೆ....’’
ಕಾಸಿಗೆ ತುಂಬಾ ಸಂತೋಷವಾಯಿತು. ಇದೀಗ ಮತ್ತೊಂದು ಸಮಸ್ಯೆಯನ್ನು ಕಾಸಿ ಮುಂದಿಟ್ಟ ‘‘ಸಾರ್...ನರ್ಮದಾ ಜಲಾಶಯ ಉದ್ಘಾಟಿಸುತ್ತಾ ಮೋದಿಯವರು ಆ ನೀರನ್ನು ಪಾದರಸಕ್ಕೆ ಹೋಲಿಸಿದ್ದಾರೆ. ಈ ನೀರು ಪಾದರಸದಂತೆ. ಎಲ್ಲೆಲ್ಲ ಹರಿಯುತ್ತದೆಯೋ ಅಲ್ಲೆಲ್ಲ ಬಂಗಾರವಾಗುತ್ತದೆ ಎಂದು ಹೇಳಿದ್ದಾರೆ. ಪಾದರಸ ವಿಷ ಎಂದು ನಾನು ವಿಜ್ಞಾನದಲ್ಲಿ ಓದಿದ್ದೇನೆ...ಅದು ವಿಷ ಅಲ್ಲವಾ ಸಾರ್...?’’
‘‘ನೋಡ್ರೀ...ಅದೆಲ್ಲ ಎಡಪಂಥೀಯರು ರಚಿಸಿರುವ ವಿಜ್ಞಾನ ಪುಸ್ತಕ. ಎಲ್ಲ ವಿಜ್ಞಾನ ಪುಸ್ತಕಗಳನ್ನು ಶುರುವಿನಿಂದ ಬರೆಯಲು ಬಾಬಾ ರಾಮ್‌ದೇವ್ ಅವರಿಗೆ ಹೇಳಲಾಗಿದೆ. ಅದಕ್ಕೆ ಬೇಕಾದ ಸಂಶೋಧನೆ ನಡೆಸಲು ಅವರಿಗೆ ಸಾವಿರಾರು ಕೋಟಿ ರೂಪಾಯಿಯನ್ನು ನೀಡಲಿದ್ದೇವೆ. ಪ್ರಾಚೀನ ಭಾರತದಲ್ಲಿ ಪಾದರಸದಿಂದ ಚಿನ್ನವನ್ನು ತಯಾರಿಸುತ್ತಿದ್ದರು. ಆದುದರಿಂದಲೇ ಭಾರತ ಸಂಪತ್ ಭರಿತವಾಗಿತ್ತು. ಕಾಲ ಕ್ರಮೇಣ ವಿದೇಶಿಯರ ಆಗಮನದಿಂದ ಮತ್ತು ವಿದೇಶಿಯರ ಶಿಕ್ಷಣದಿಂದಾಗಿ ಭಾರತೀಯರ ಈ ಚಿನ್ನ ತಯಾರಿಸುವ ವಿದ್ಯೆ ಇಲ್ಲವಾಗಿ ಹೋಯಿತು. ಇದೀಗ ಮತ್ತೆ ಪಾದರಸಗಳ ಮೂಲಕ ಚಿನ್ನ ತಯಾರಿಸುವ ಯೋಜನೆಯನ್ನು ರೂಪಿಸುತ್ತಿದ್ದೇವೆ. ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪೆನಿ ಪಾದರಸದಿಂದ ಚಿನ್ನಗಳನ್ನು ತಯಾರಿಸಲಿವೆ. ಹಾಗೆ ತಯಾರಾದ ಚಿನ್ನಗಳನ್ನು ವಿಶ್ವಬ್ಯಾಂಕ್‌ನಲ್ಲಿ ಇಟ್ಟು, ಭಾರತದ ಅರ್ಥವ್ಯವಸ್ಥೆಯನ್ನು ಮೇಲೆತ್ತಲಿದ್ದೇವೆ...’’ ಅಮಿತ್ ಶಾ ತಮ್ಮ ಯೋಜನೆಗಳನ್ನು ವಿವರಿಸಿದರು.
ಪತ್ರಕರ್ತ ಕಾಸಿ ಹಿರಿ ಹಿರಿ ಹಿಗ್ಗಿದ. ಭಾರತ ಶೀಘ್ರದಲ್ಲೇ ವಿಶ್ವಗುರು ಆಗುವುದನ್ನು ನೆನೆದು ರೋಮಾಂಚನಗೊಂಡ. ‘‘ಸಾರ್...ಪ್ಲೀಸ್ ಸಾರ್...ಮೋದಿಯವರು ಪ್ರತೀ ದಿನ ಮಂಕೀ ಬಾತ್ ಭಾಷಣ ಮಾಡುವ ಹಾಗೆ ಮಾಡಿ. ಅದರಿಂದ ಇನ್ನಷ್ಟು ಎನರ್ಜಿ ಉತ್ಪಾದನೆಯಾಗಿ ವಿದೇಶವಿನಿಮಯ ಹೆಚ್ಚಬಹುದು’’ ಆರ್ಥಿಕ ತಜ್ಞನಂತೆ ಕೇಳಿಕೊಂಡ.
‘‘ಅಂತಹದೊಂದು ಯೋಜನೆಯೂ ಇದೆ. ಪ್ರತೀ ದಿನ ಮೋದಿಯವರಿಂದ ದಿನಕ್ಕೆ ಎರಡು ಬಾರಿ ಮನ್ ಕೀ ಬಾತ್ ಭಾಷಣ ಮಾಡಿಸೋದು. ಮತ್ತು ಮನ್‌ಕಿ ಬಾತ್‌ನ್ನು ಜಿಎಸ್‌ಟಿ ತೆರಿಗೆ ವ್ಯಾಪ್ತಿಗೆ ತರುವುದು. ಇದರಿಂದ ಸರಕಾರದ ಖಜಾನೆಗೂ ಹಣ ಆಗ್ತದೆ...’’
ಜಿಎಸ್‌ಟಿ ತೆರಿಗೆ ಎಂದದ್ದೇ ಕಾಸಿ ಹಾವು ಕಂಡವನಂತೆ ಅಲ್ಲಿಂದ ಓಡತೊಡಗಿದ.
‘‘ನಿಲ್ರೀ ನಿಲ್ರೀ...ನಾನೂ ಕರ್ನಾಟಕಕ್ಕೆ ಬರುತ್ತಿದ್ದೇನೆ...ನಿಮ್ಮ ಕರ್ನಾಟಕವನ್ನು ಗುಜರಾತ್ ಮಾಡುವ ಉದ್ದೇಶವಿದೆ...ಅದರ ಬಗ್ಗೆನೂ ಬರೆಯಿರಿ...’’ ಎಂದು ಅವನ ಹಿಂದೆಯೇ ಅಮಿತ್ ಶಾ ಓಡತೊಡಗಿದರು.

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News