×
Ad

ದೀಪಾವಳಿ ಬಳಿಕ ರಾಹುಲ್ ಪಟ್ಟಾಭಿಷೇಕ ಸಾಧ್ಯತೆ : ಸಚಿನ್ ಪೈಲಟ್

Update: 2017-10-01 19:47 IST

ಹೊಸದಿಲ್ಲಿ, ಅ.1: ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲು ಕಾಲ ಕೂಡಿ ಬಂದಿದ್ದು ದೀಪಾವಳಿ ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಂಸ್ಥಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ದೀಪಾವಳಿ ಹಬ್ಬ ಮುಗಿದ ಕೆಲ ದಿನದಲ್ಲೇ ಹೊಸ ಅಧ್ಯಕ್ಷರ ಪಟ್ಟಾಭಿಷೇಕವಾಗಲಿದೆ ಎಂದ ಪೈಲಟ್, ಕಾಂಗ್ರೆಸ್‌ನಲ್ಲಿ ವ್ಯಕ್ತಿಯೋರ್ವ ಉಪನಾಮದ (ಸರ್‌ನೇಮ್) ಬಲದಿಂದಲೇ ಮೇಲಕ್ಕೇರಲು ಸಾಧ್ಯವಿಲ್ಲ. ಸಾಧಕರಿಗೆ ಯಾವಾಗಲೂ ಮನ್ನಣೆಯಿದೆ. ಮುಖಂಡ ಸಾಧನೆ ಅಂತಿಮವಾಗಿ ಪರಿಗಣಿಸಲ್ಪಡುತ್ತದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪಕ್ಷದಲ್ಲಿ ಯುವಕರು ಹಾಗೂ ಹಿರಿಯ ಅನುಭವಿಗಳ ಸಮತೋಲನದ ಮಿಶ್ರಣ ಇರಬೇಕು ಹಾಗೂ ರಾಹುಲ್ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನಡೆಸಬೇಕು ಎಂಬುದು ಕಾರ್ಯಕರ್ತರ ಅಭಿಮತವಾಗಿದೆ ಎಂದವರು ಹೇಳಿದರು.

ಉಪಾಧ್ಯಕ್ಷರಾಗಿ ರಾಹುಲ್ ಗಾಂಧಿ ಸಾಕಷ್ಟು ಕಾರ್ಯ ನಿಭಾಯಿಸಿದ್ದಾರೆ. ಆದರೆ ಈಗ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುವ ಕಾಲ ಬಂದಿದೆ ಎಂದು ಪಕ್ಷ ಅಭಿಪ್ರಾಯಪಟ್ಟಿದೆ ಎಂದು ಪೈಲಟ್ ತಿಳಿಸಿದರು.

   ರಾಹುಲ್ ಸೋದರಿ ಪ್ರಿಯಾಂಕಾ ವಾದ್ರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯ ಪಾತ್ರ ನಿರ್ವಹಿಸಬೇಕು ಎಂದು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪೈಲಟ್, ಅವರು ಕಾಂಗ್ರೆಸ್ ಪಕ್ಷಕ್ಕೇ ಸೇರಿದವರಾಗಿದ್ದರೂ ರಾಜಕೀಯ ಪ್ರವೇಶ ಅವರ ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಚಾರ ಎಂದರು. ವಂಶಪಾರಂಪರ್ಯ ರಾಜಕೀಯ ಹಾಗೂ ಕಾಂಗ್ರೆಸ್ ವಂಶಪರಂಪರೆಯನ್ನು ಬೆಂಬಲಿಸುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪೈಲಟ್, ರಾಜಕೀಯ ಹಿನ್ನೆಲೆ ಆರಂಭಿಕ ಹಂತದಲ್ಲಿ ನೆರವಿಗೆ ಬರಬಹುದು. ಆದರೆ ಸಾಧನೆ ತೋರಿದರೆ ಮಾತ್ರ ರಾಜಕೀಯದಲ್ಲಿ ಮೇಲೇರಲು ಸಾಧ್ಯ . ರಾಜಕೀಯ ಕ್ಷೇತ್ರದಲ್ಲಿರುವ ಕುಟುಂಬಕ್ಕೆ ಸೇರಿದ ವ್ಯಕ್ತಿ ರಾಜಕೀಯಕ್ಕೆ ಅನರ್ಹ ಎನ್ನಲಾಗದು ಎಂದರು.

ಸಾಧನೆಯ ಮೂಲಕ, ಕಠಿಣ ಪರಿಶ್ರಮದ ಮೂಲಕ ಜನರ ಹೃದಯವನ್ನು ಗೆಲ್ಲಬಹುದು. ಉಪನಾಮ ಆರಂಭಿಕ ಹಂತದಲ್ಲಿ ಮಾತ್ರ ವ್ಯಕ್ತಿಯ ನೆರವಿಗೆ ಬರುತ್ತದೆ ಎಂದರು.

ಕಾಂಗ್ರೆಸ್ ವಂಶಾಡಳಿತಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂಬ ಬಿಜೆಪಿಯ ಟೀಕೆಗೆ ಉತ್ತರಿಸಿದ ಪೈಲಟ್, ಬಿಜೆಪಿ ಮೊದಲು ಆತ್ಮಶೋಧನೆ ಮಾಡಿಕೊಳ್ಳಬೇಕು. ಬಿಜೆಪಿಯ ಹಲವು ಮುಖಂಡರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು ಎಂದರು.

ಕಾಂಗ್ರೆಸ್‌ನಲ್ಲಿ ಹಿರಿಯರು ಯುವಕರಿಗೆ ಅವಕಾಶ ಮಾಡಿಕೊಡುವ ಮೂಲಕ ನವಪೀಳಿಗೆ ಮುಂಚೂಣಿಗೆ ಬರಲು ಸಮಯ ಕೂಡಿಬಂದಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಪೈಲಟ್, ಇಲ್ಲಿ ಅವಕಾಶ ಮಾಡಿಕೊಡುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಜೊತೆಯಾಗಿ ಕಾರ್ಯ ನಿರ್ವಹಿಸುವ ವಿಷಯಕ್ಕೆ ಆದ್ಯತೆ ನೀಡಬೇಕಿದೆ ಎಂದರು.

 ಹಿರಿಯರನ್ನು ಅವಮಾನಿಸುವ ಸಂಪ್ರದಾಯ ಬಿಜೆಪಿಯಲ್ಲಿದೆ. ಆದರೆ ಕಾಂಗ್ರೆಸ್‌ನಲ್ಲಿ ಹಿರಿಯರ ಅನುಭವ ಹಾಗೂ ಕಾರ್ಯಶೈಲಿಯನ್ನು ಗೌರವಿಸುವ ಕ್ರಮವಿದೆ. ಬಿಜೆಪಿಯ ಲ್ಲಿರುವ ಮಾರ್ಗದರ್ಶಕ ಮಂಡಳಿ ಎಂಬುದು ಈ ಕಾಲದ ಅತ್ಯಂತ ಹಾಸ್ಯಾಸ್ಪದ ವಿಷಯವಾಗಿಬಿಟ್ಟಿದೆ. ಅವರಂತೆ ನಾವು ಹಿರಿಯರನ್ನು ಅವಮಾನಿಸುವುದಿಲ್ಲ ಎಂದರು.

 ಬಿಜೆಪಿ ದ್ವೇಷ ರಾಜಕಾರಣ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದ ಅವರು, ರಾಜಕೀಯದಲ್ಲಿ ಪ್ರತಿಸ್ಪರ್ಧಿಗಳಿರಬೇಕು. ಆದರೆ ಹಗೆತನದ ರಾಜಕಾರಣ ಸಲ್ಲದು. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News