ಇನ್ನು ಮುಂದೆ ಜಪಾನ್, ಜರ್ಮನಿ, ದಕ್ಷಿಣ ಆಫ್ರಿಕಾ, ಕೆನಡಾದಲ್ಲೂ ಆಲ್ ಇಂಡಿಯಾ ರೇಡಿಯೋ
ಹೊಸದಿಲ್ಲಿ, ಅ. 2: ಭಾರತೀಯ ವಲಸಿಗರಿಗೆ ಕಾರ್ಯಕ್ರಮ ತಲುಪಿಸಲು ಹಾಗೂ ಸರಕಾರದ ರಾಜತಾಂತ್ರಿಕ ಶ್ರಮ ಪೋಷಿಸುವ ಉದ್ದೇಶದಲ್ಲಿ ಆಲ್ ಇಂಡಿಯಾ ರೇಡಿಯೋ ಜಪಾನ್, ಜರ್ಮನಿ ಹಾಗೂ ಸಿಐಎಸ್‌ನ ಕೆಲವು ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತನ್ನ ಸೇವೆ ಆರಂಭಿಸಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾ, ದಕ್ಷಿಣ ಆಫ್ರಿಕಾ ಹಾಗೂ ಮಾಲ್ಡೀವ್ಸ್ ಕೂಡ ಆಲ್ ಇಂಡಿಯಾ ರೇಡಿಯೋದ ಕಾರ್ಯಕ್ರಮ ತಲುಪಲಿರುವ ದೇಶಗಳಲ್ಲಿ ಸೇರಲಿವೆ ಎಂದು ಬಾಹ್ಯ ಸೇವಾ ವಿಭಾಗ (ಇಎಸ್‌ಡಿ)ದ ನಿರ್ದೇಶಕ ಅಮ್ಲಾನ್‌ಜ್ಯೋತಿ ಮಜುಂದಾರ್ ತಿಳಿಸಿದ್ದಾರೆ. ಪ್ರಸ್ತುತ ಇಎಸ್‌ಡಿ 27 ಭಾಷೆಗಳಲ್ಲಿ ಸುಮಾರು 150 ದೇಶಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ 14 ನೆರೆಯ ರಾಷ್ಟ್ರಗಳು ಹಾಗೂ ಆಗ್ನೇಯ ಏಶ್ಯಾ ರಾಷ್ಟ್ರಗಳು. ಪ್ರಸ್ತುತ ತನ್ನ ಅಸ್ತಿತ್ವ ವಿಸ್ತರಿಸಲು ಹಾಗೂ ಆಲ್ ಇಂಡಿಯಾ ರೇಡಿಯೋ ಇಲ್ಲಿ ವರೆಗೆ ತಲುಪದ ದೇಶಗಳನ್ನು ತಲುಪಲು ಇಎಸ್‌ಡಿ ಯೋಜಿಸುತ್ತಿದೆ. ಜಪಾನ್, ಕೆನಡಾ, ಜರ್ಮನಿ, ದಕ್ಷಿಣ ಆಫ್ರಿಕಾ, ಮಾಲ್ಡೀವ್ಸ್ ಹಾಗೂ ಸಿಐಎಸ್‌ನ ಕೆಲವು ರಾಷ್ಟ್ರಗಳಿಗೆ ನೂತನ ಸೇವೆ ಪರಿಚಯಿಸಲು ಇಎಸ್‌ಡಿ ಪ್ರಸ್ತಾಪಿಸಿದೆ ಎಂದು ಎಂದು ಮಜುಂದಾರ್ ತಿಳಿಸಿದ್ದಾರೆ. ಇತ್ತೀಚೆಗೆ ಬಾಹ್ಯ ಪ್ರಸಾರದ ಕುರಿತು ನಡೆದ ಸಲಹಾ ಸಮಿತಿ ಸಭೆ ವೇಳೆ ಚರ್ಚೆ ನಡೆಸಿದ ಬಳಿಕ ಆಲ್ ಇಂಡಿಯಾ ರೇಡಿಯೋ ಈ ಪ್ರಸ್ತಾಪ ಮುಂದಿಟ್ಟಿದೆ. ಜಾಗತಿಕ ಕೇಳುಗರೊಂದಿಗೆ ಸಂಬಂಧ ವರ್ಧಿಸಲು ಹಾಗೂ ರಾಜತಾಂತ್ರಿಕವಾಗಿ ತಲುಪಲು ನೆರವು ನೀಡುವ ಸರಕಾರದ ಶ್ರಮಕ್ಕೆ ಇದು ಉತ್ತೇಜನ ನೀಡಲಿದೆ ಎಂದು ಮಜುಂದಾರ್ ತಿಳಿಸಿದ್ದಾರೆ.