ಈ ನಿರ್ಲಕ್ಷಕ್ಕೆ ಯಾರು ಹೊಣೆ?

Update: 2017-10-02 18:47 GMT

ಸೀಟಲ್ಲಿ ಕೂರುವುದಕ್ಕಾಗಿ ಟಿಕೆಟ್ ಹಣ ನೀಡಿ ನಿಲ್ಲುವುದಕ್ಕೂ ಜಾಗ ಸಿಗದಿದ್ದರೆ ಏನೆನ್ನಬೇಕು? ಜಾನುವಾರುಗಳಿಗಿಂತಲೂ ಹೀನಾಯ ಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಿರುವ ಮುಂಬೈ ಲೋಕಲ್ ರೈಲು ಪ್ರಯಾಣಿಕರ ಬೆಳಗ್ಗಿನ ಮತ್ತು ಸಂಜೆಯ ದಿನನಿತ್ಯದ ದೃಶ್ಯ ಇದು. ಅನೇಕ ರೈಲ್ವೆಸ್ಟೇಶನ್‌ಗಳಲ್ಲಿ ರೈಲಿನಿಂದ ಇಳಿದು ಪ್ಲ್ಯಾಟ್‌ಫಾರ್ಮ್‌ನಿಂದ ಫುಟ್‌ಓವರ್‌ಬ್ರಿಡ್ಜ್ ಹತ್ತಿ ಹೊರಗೆ ಬರಲು 20 ನಿಮಿಷ ಬೇಕಾಗುತ್ತದೆ. ಮಿತಿಮೀರಿದ ಜನಸಂಖ್ಯೆ ಯಾವಕ್ಷಣವೂ ಏನೂ ಅನಾಹುತ ಮಾಡಬಹುದು ಎನ್ನುವುದಕ್ಕೆ ಸೆ.29 ಶುಕ್ರವಾರದ ಎಲ್ಫಿನ್‌ಸ್ಟನ್‌ರೋಡ್ -ಪರೇಲ್ ರೈಲ್ವೆ ಸ್ಟೇಷನ್‌ಗಳನ್ನು ಜೋಡಿಸುವ ಸೇತುವೆಯಲ್ಲಿ ನಡೆದ ದುರಂತವೇ ಸಾಕ್ಷಿ.

ಘಟನೆಯ ದಿನವೇ 22 ಪ್ರಯಾಣಿಕರು ಸಾವನ್ನಪ್ಪಿದ್ದರು. ಇಬ್ಬರ ಸ್ಥಿತಿ ಚಿಂತಾಜನಕವಿತ್ತು. ಅನೇಕರು ಗಾಯಗೊಂಡರು. ಆ ದಿನ ಜೋರಾಗಿ ಮಳೆಯೂ ಬರುತ್ತಿತ್ತು. ಒಳಗಿನ ಬ್ರಿಡ್ಜ್ ಮೇಲಿನ ತಗಡು ಶೀಟ್ ಮಳೆಗೆ ಜೋರಾಗಿ ಶಬ್ದ ಮಾಡುತ್ತದೆ. ಕೆಳಗಡೆ ರೈಲು ಹಾದುಹೋಗುವಾಗ ವಯರಲ್ಲಿ ಬೆಂಕಿ ಕಾಣಿಸಿತು. ಯಾರೋ ಸೇತುವೆ ಕುಸಿಯುತ್ತಿದೆ.... ಶಾರ್ಟ್ ಸರ್ಕಿಟ್ ಆಗಿದೆ...ಇತ್ಯಾದಿ ಕೂಗಿದ್ರು. ಸರಿ. ಜನರಿಗೆ ಗಾಬರಿ ಆಗಲು ಇಷ್ಟು ಸಾಕಾಯಿತು. ತಾವು ಬದುಕಿದ್ರೆ ಸಾಕು ಅಂತ ದೂಡಿಕೊಂಡು ಮುಂದೆಹೋದರು. ಕೆಳಗೆ ಬಿದ್ದರು. ಆ ಜನನಿಬಿಡ ಸೇತುವೆಯಲ್ಲಿ ಅನೇಕರು ನೂಕುನುಗ್ಗಲಿಗೆ ಉಸಿರುಗಟ್ಟಿ ಸತ್ತರು.

ತೊಂಬತ್ತರ ದಶಕದಲ್ಲಿ ಮಹಿಳಾ ವಿಶೇಷ ರೈಲು ಆರಂಭವಾದ ದಿನಗಳು. ಯಾರೋ ಮಹಿಳೆ ಸಿಗ್ನಲ್‌ನಲ್ಲಿ ರೈಲು ನಿಂತಾಗ ಬೆಂಕಿ ಅಂದದ್ದಷ್ಟೆ, ಆ ಬೋಗಿಯಲ್ಲಿದ್ದ ಅನೇಕ ಮಹಿಳೆಯರು ಕೆಳಗೆ ಹಾರಿದ್ದರು. ಆಗ ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿನಡಿಗೆ ಬಿದ್ದು 2 ಡಜನ್ ನಷ್ಟು ಮಹಿಳಾ ಪ್ರಯಾಣಿಕರು ಸಾವನ್ನಪ್ಪಿದ್ದರು. ವದಂತಿಗಳು ಬಹುಬೇಗ ಜನರ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರಿಗೂ ತಾವು ಬದುಕಿದರೆ ಸಾಕು, ಬೇರೆಯವರು ಏನಾದರೆ ನಮಗೇನು ಎನ್ನುವ ಭಾವನೆ ಇರುವ ತನಕ ಬದಲಾವಣೆ ಅಷ್ಟು ಸುಲಭವಿಲ್ಲ. ರೈಲು ಇಳಿಯುವವರು ಹತ್ತುವವರನ್ನು ನಿರ್ಲಕ್ಷಿಸಿದರೆ ಅತ್ತ ರೈಲು ಹತ್ತುವವರು ಇಳಿಯುವವರನ್ನು ಇಳಿಯಲು ಬಿಡದಂತಹ ದೃಶ್ಯ ಮಾಮೂಲಿ.

ಎಲ್ಫಿನ್‌ಸ್ಟನ್ ರೋಡ್-ಪರೇಲ್ ಫುಟ್‌ಓವರ್ ಬ್ರಿಡ್ಜ್‌ನಲ್ಲಿ ಪ್ರತಿದಿನ 3 ಲಕ್ಷ ಜನ ಹಾದುಹೋಗುತ್ತಾರೆ. ಸಾಮರ್ಥ್ಯಕ್ಕಿಂತ ಹತ್ತುಪಟ್ಟು ಜನ ಹಾದುಹೋಗುವುದರಿಂದ ಯಾವ ಸಮಯದಲ್ಲೂ ದುರ್ಘಟನೆಯನ್ನು ನಿರೀಕ್ಷಿಸಲಾಗಿತ್ತು. ಹಾಗಿದ್ದೂ ಈ ಬೇಜವಾಬ್ದಾರಿ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಪರೇಲ್‌ನಲ್ಲಿ ದಾದರ್ ದಿಕ್ಕಿಗೆ ಹೊಸ ಬ್ರಿಡ್ಜ್ ಕಟ್ಟಲಾಗಿದೆ.ಆದರೆ ಅದರಿಂದ ಯಾರಿಗೂ ಲಾಭ ಇಲ್ಲ. ಅದರಲ್ಲಿ ಜನರೇ ಇರುವುದಿಲ್ಲ. ಯಾಕೆಂದರೆ ಅದು ಎಲ್ಫಿನ್‌ಸ್ಟನ್‌ರೋಡ್ ಸ್ಟೇಶನ್‌ಗೆ ಸೇರೋದಿಲ್ಲ.

ಎಲ್ಫಿನ್‌ಸ್ಟನ್‌ರೋಡ್ ಸ್ಟೇಶನ್‌ನ ಟಿಕೆಟ್ ಕೌಂಟರ್ ಬಳಿ ಕೆಳಗಡೆ ವಿದ್ಯುತ್ ಕಂಬ ಇದೆ. ರೈಲು ಹಾದುಹೋಗುವಾಗ ಪೆಂಟೋಗ್ರಾಫ್ ಮತ್ತು ತಂತಿಯ ಘರ್ಷಣೆಯಿಂದ ಕಂಡುಬಂದ ಬೆಂಕಿ ಮತ್ತು ಶಬ್ದವನ್ನು ಕಂಡ ಅಲ್ಲಿದ್ದ ಜನರಲ್ಲಿ ಕೆಲವರು ಶಾರ್ಟ್ ಸರ್ಕಿಟ್ ಎಂದರು. ಇನ್ನು ಕೆಲವರು ಸೇತುವೆ ಕುಸಿಯುತ್ತಿದೆ ಎಂದರು. ಅಂತೂ 5 ಮೀಟರ್ ಅಗಲದ 45 ವರ್ಷ ಹಳೆಯ ಸೇತುವೆ ಮತ್ತೊಂದು ಕಪ್ಪುಶುಕ್ರವಾರ ಕಾಣಿಸಿತು. 1993ರ ಸರಣಿ ಬಾಂಬ್ ಸ್ಫೋಟ ಕೂಡಾ ನಡೆದದ್ದು ಶುಕ್ರವಾರವೇ. ಮುಂಬೈಯ ಇತರ 6 ಫುಟ್‌ಓವರ್ ಬ್ರಿಡ್ಜ್ ಸಹಿತ ಈ ಫುಟ್‌ಓವರ್ ಬ್ರಿಡ್ಜ್‌ಗಾಗಿ ಕಳೆದ ವರ್ಷ ರೈಲ್ ಬಜೆಟ್‌ನಲ್ಲಿ ಮಂಜೂರು ಸಿಕ್ಕಿತ್ತು. ಆದರೆ ಈ ತನಕ ಕೆಲಸವೇ ಆರಂಭ ಆಗಿಲ್ಲ. ಸರಕಾರದ ವಿರುದ್ಧ ಮಾನವ ಹತ್ಯೆಯ ಎಫ್‌ಐಆರ್ ದಾಖಲಿಸಬೇಕೆಂದು ಶಿವಸೇನೆ ಸಂಸದ ಸಂಜಯ ರಾವತ್ ಹೇಳಿದ್ದಾರೆ.

ಅಂದು ಕೆ.ಇ.ಎಂ ಆಸ್ಪತ್ರೆಯಲ್ಲಿ ರಕ್ತಕೊಡಲು ಅನೇಕ ಸ್ವಯಂಸೇವಕರು ಬಂದಿದ್ದರು. ಪರೇಲ್ ಕ್ಷೇತ್ರ ಮಿಲ್ ಕಾರ್ಮಿಕರಿಗೆ ಖ್ಯಾತಿ. ಒಂದೊಮ್ಮೆ ಇಲ್ಲಿ ಜನ ಆರಾಮವಾಗಿ ಹೋಗಿಬರುತ್ತಿದ್ದರು. ಆದರೆ ಆನಂತರ ಯಾವುದೇ ಸರಿಯಾದ ಪ್ಲ್ಯಾನಿಂಗ್ ಇಲ್ಲದೆ ಕಟ್ಟಡಗಳು ಎದ್ದುನಿಂತು ಈ ಕ್ಷೇತ್ರದ ಸೌಂದರ್ಯವೇ ಹೋಗಿಬಿಟ್ಟಿದೆ. ಪರೇಲ್, ಎಲ್ಪಿನ್‌ಸ್ಟನ್, ಲೋವರ್ ಪರೇಲ್ ಇಲ್ಲೆಲ್ಲ 1980ರ ದಶಕದ ಬಳಿಕ ಬಟ್ಟೆಮಿಲ್‌ಗಳು ಬಂದ್ ಆದ ನಂತರ ಇಲ್ಲಿನ ಜಮೀನು ಬೇಡಿಕೆ ಹೆಚ್ಚಿಸಿಕೊಂಡಿದೆ. ರಾಜ್ಯಸರಕಾರದ ಮೂಲಕ ಈ ಮಿಲ್‌ಗಳಲ್ಲಿ ಜನವಸತಿಯ ಕಟ್ಟಡಗಳಿಗೆ ಅನುಮತಿ ದೊರೆತು ಅನೇಕ ಬಿಲ್ಡರ್‌ಗಳು ಆಸಕ್ತಿ ತೋರಿಸಿದರು. ಪರೇಲ್‌ನ ದೃಶ್ಯ ಬದಲಾಗತೊಡಗಿತು. ಆದರೆ ಇಲ್ಲಿನ ರೈಲ್‌ಸ್ಟೇಶನ್ ಜನಸಂಖ್ಯೆಗೆ ತಕ್ಕಂತೆ ರೂಪುಗೊಂಡಿಲ್ಲ. ಈ ದೃಶ್ಯ ಕೇವಲ ಪರೇಲ್‌ಗೆ ಮಾತ್ರ ಸೀಮಿತವಲ್ಲ. ಅನೇಕ ರೈಲ್ವೆಸ್ಟೇಶನ್‌ಗಳ ಫುಟ್ ಓವರ್ ಬ್ರಿಡ್ಜ್ ಅತ್ಯಂತ ಇಕ್ಕಟ್ಟಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತೊಂದು ಕಡೆ ಇಂತಹ ಘಟನೆ ನಡೆದರೆ ಆಶ್ಚರ್ಯವಿಲ್ಲ.

* * *

ಫಿಫಾ ಜ್ಯೂನಿಯರ್ ಫುಟ್‌ಬಾಲ್ ವಿಶ್ವಕಪ್: ನವಿ ಮುಂಬೈ ಮನಪಾದಿಂದ ವಿಶೇಷ ತಯಾರಿ
 ಅಕ್ಟೋಬರ್‌ನಲ್ಲಿ ಫಿಫಾ ಜ್ಯೂನಿಯರ್ ಫುಟ್‌ಬಾಲ್ ವಿಶ್ವಕಪ್‌ನ ಪೂರ್ವತಯಾರಿ ನವಿಮುಂಬೈಯಲ್ಲಿ ಜೋರಾಗಿ ನಡೆಯುತ್ತಿದೆ. ಈ ವಿಶ್ವಕಪ್‌ನ ಎಂಟು ತಂಡಗಳು ನವಿ ಮುಂಬೈಯ ನೆರುಳ್‌ನ ಡಾ. ಡಿ.ವೈ. ಪಾಟೀಲ್ ಸ್ಟೇಡಿಯಮ್‌ನಲ್ಲಿ ಸ್ಪರ್ಧಿಸಲಿವೆ. ಈ ಕ್ರೀಡಾ ಸ್ಪರ್ಧೆಗಳು ಅಕ್ಟೋಬರ್ 6, 9, 12, 18, 19 ಮತ್ತು 25 ರಂದು ನಡೆಯಲಿವೆ. ಫುಟ್‌ಬಾಲ್ ಸ್ಪರ್ಧೆಯನ್ನು ವೀಕ್ಷಿಸಲು ದೇಶ-ವಿದೇಶದಿಂದ ಬೇರೆ ಬೇರೆ ಸಮಯದಲ್ಲಿ ಸಾವಿರಾರು ಜನ ನವಿಮುಂಬೈಗೆ ಬರಲಿದ್ದಾರೆ.

ಈ ಸಂದರ್ಭದಲ್ಲಿ ನವಿಮುಂಬೈ ನಗರದ ಹಿರಿಮೆ-ಗರಿಮೆಯನ್ನು ಕಾಪಾಡಿಕೊಳ್ಳುವಲ್ಲಿ ನವಿಮುಂಬೈ ಮನಪಾ ಈಗಾಗಲೇ ಎಲ್ಲಾ ತಯಾರಿಗಳನ್ನು ಕೈಗೊಂಡಿದೆ. ವೀಕ್ಷಕರು ಮತ್ತು ದೇಶ ವಿದೇಶಗಳ ಕ್ರೀಡಾಪಟುಗಳು ನವಿಮುಂಬೈಗೆ ಬರುವ ಮೊದಲು ನಗರದ ಸ್ವಚ್ಛತೆಯ ಜೊತೆ ಸೌಲಭ್ಯಗಳನ್ನು ಒದಗಿಸಲು ಅಂತಾರಾಷ್ಟ್ರೀಯ ಸ್ತರದ ಗುಣಮಟ್ಟ ಕಾಣಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ರಸ್ತೆಗಳ ಸ್ಪೀಡ್‌ಬ್ರೇಕರ್ಸ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದ ಅನುರೂಪ ಸುಧಾರಣೆಗೊಳಿಸಲಾಗುತ್ತಿದೆ. ನವಿಮುಂಬೈ ಮನಪಾದ ಇಂಜಿನಿಯರ್ ವಿಭಾಗದ ಸಿಬ್ಬಂದಿ ಈಗಾಗಲೇ ಇದರ ಕೆಲಸದಲ್ಲಿ ನಿರತರಾಗಿದ್ದಾರೆ. ಮಹಾನಗರ ಪಾಲಿಕೆ ಆಡಳಿತವು ಸ್ಟೇಡಿಯಂವರೆಗೆ ಬರುವ ಪ್ರೇಕ್ಷಕರ ವಾಹನಗಳನ್ನು ನಿಲ್ಲಿಸಲು 6 ಸ್ಥಳಗಳನ್ನು ಆಯ್ಕೆ ಮಾಡಿದೆ. ನಗರವನ್ನು ಶೃಂಗರಿಸುವ ನಿಟ್ಟಿನಲ್ಲೂ ಮನಪಾ ಆಡಳಿತ ಮುಂದಾಗಿದೆ.

ಅಂತಾರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಳುಗಳ ತಂಡ ಅಭ್ಯಾಸ ಪಂದ್ಯ ನಡೆಸಲು ಮುಂಬೈಯಿಂದ ಸಯನ್ - ಪನ್ವೇಲ್ ಮಹಾಮಾರ್ಗದಿಂದ ವಾಶಿಗೆ ಬಂದು ಆನಂತರ ಕ್ರೀಡಾಂಗಣಕ್ಕೆ ಹೇಗೆ ಬರುವುದು ಎಂಬ ಬಗ್ಗೆ ಎಲ್ಲಾ ಮಾಹಿತಿ ರೂಟ್‌ಮ್ಯಾಪ್ ಸಿದ್ಧಗೊಂಡಿದೆ.
* * *

ಅಕ್ರಮ ಧಾರ್ಮಿಕ ಸ್ಥಳಗಳನ್ನು ಕೆಡವಿ ಹಾಕಲು ಆದೇಶ

ನವಿ ಮುಂಬೈಯಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾದ 501 ಧಾರ್ಮಿಕ ಸ್ಥಳಗಳನ್ನು ನವೆಂಬರ್ 17ರೊಳಗೆ ಕೆಡವಿ ಹಾಕಲು ನವಿ ಮುಂಬೈ ಮನಪಾ ಆಯುಕ್ತ ಡಾ. ಎನ್. ರಾಮಸ್ವಾಮಿ ಎಲ್ಲಾ ಸರಕಾರಿ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ. ನವಿಮುಂಬೈ ಮನಪಾ ಮುಖ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ ಒಂದು ಬೈಠಕ್‌ನಲ್ಲಿ ಮನಪಾ ಆಯುಕ್ತರು ಅಕ್ರಮ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಇವುಗಳಲ್ಲಿ ಸಿಡ್ಕೋ ಜಮೀನಿನಲ್ಲಿ 377, ಎಂಐಡಿಸಿ ಜಮೀನಿನಲ್ಲಿ 100, ನವಿಮುಂಬೈ ಮನಪಾ ಜಮೀನಿನಲ್ಲಿ 14, ಅರಣ್ಯ ವಿಭಾಗದಲ್ಲಿ 7, ರೈಲ್ವೆಯ 2 ಮತ್ತು ಮ್ಯಾಂಗ್ರೋವ್ಸ್ ಕ್ಷೇತ್ರದಲ್ಲಿ -1, ಹೀಗೆ 501 ಧಾರ್ಮಿಕ ಸ್ಥಳಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.

ರಾಜ್ಯ ಸರಕಾರದ ಜುಲೈ1, 2015ರ ಆದೇಶಾನುಸಾರ ಮನಪಾ ಆಯುಕ್ತರ ಅಧ್ಯಕ್ಷತೆಯಲ್ಲಿ ಮನಪಾ ಸ್ತರದ ಸಮಿತಿ ರಚಿಸಲಾಗಿತ್ತು. ಇದಕ್ಕೆ ಅಕ್ರಮ ಧಾರ್ಮಿಕ ಸ್ಥಳಗಳ ಮೇಲೆ ನಿಗಾ ಇರಿಸಲು ಹೇಳಿಕೊಳ್ಳಲಾಗಿತ್ತು.
* * *

ಭಾರತೀಯ ಭಾಷೆಗಳ ಪುಸ್ತಕ ಮೇಳ
ಮುಂಬೈಯಲ್ಲಿ ಬಹುದೊಡ್ಡ ವಾರ್ಷಿಕ ಪುಸ್ತಕ ಮೇಳ ಸೆಪ್ಟಂಬರ್ 26ರಿಂದ ಆರಂಭವಾಗಿ ಸೆಪ್ಟಂಬರ್ 30ರ ವರೆಗೆ ಪುಸ್ತಕ ಪ್ರೇಮಿಗಳ ಮನ ತಣಿಸಿದೆ. ದಕ್ಷಿಣ ಮುಂಬೈಯ ಚರ್ಚ್ ಗೇಟ್ ಬಳಿಯ ಸುಂದರ ಬಾಯಿ ಹಾಲ್‌ನಲ್ಲಿ ಭಾರತೀಯ ಭಾಷೆಗಳ ಬಹುದೊಡ್ಡ ಪುಸ್ತಕ ಮೇಳ ಪ್ರತೀ ವರ್ಷ ನಡೆಯುತ್ತದೆ. ಸೆಪ್ಟಂಬರ್ 26ರಂದು ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಇದನ್ನು ಉದ್ಘಾಟಿಸಿದರು.

ಮುಂಬೈ ಮಹಾನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಾನಗರದ ಪುಸ್ತಕ ಪ್ರೇಮಿಗಳಿಗೆ 24 ಭಾರತೀಯ ಭಾಷೆಗಳ ಪುಸ್ತಕಗಳು ಇಲ್ಲಿ ಖರೀದಿಗೆ ಲಭ್ಯವಿತ್ತು. ಈ ಪುಸ್ತಕ ಮೇಳದ ಆಯೋಜಕ ಸಂಸ್ಥೆ ಹಿಂದಿ ಕಲ್ಯಾಣ್ ನ್ಯಾಸ್ ಡಾಟ್ ಕಾಮ್‌ನ ಪ್ರಮುಖ, ವರಿಷ್ಠ ಪತ್ರಕರ್ತ ವಿಜಯ್ ಕುಮಾರ್ ಜೈನ್ ಹೇಳುವಂತೆ ಈ ಆಯೋಜನೆಯಲ್ಲಿ ಅವರ ಸ್ಲೋಗನ್ ಏನೆಂದರೆ ‘ಭಾರತೀಯ ಭಾಷಾ ಅಪ್ನಾವೋ.’

‘‘ಹಿಂದಿಯ ಜೊತೆ ದೇಶದ ಸಮಸ್ತ ಭಾರತೀಯ ಭಾಷೆಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ವಿಸ್ತರಿಸುವುದು ನಮ್ಮ ಉದ್ದೇಶವಾಗಿದೆ’’ ಎನ್ನುತ್ತಾರವರು. ಪುಸ್ತಕ ಮೇಳದಲ್ಲಿ ಸಾಹಿತ್ಯ ಅಕಾಡಮಿ, ಭಾರತೀಯ ಜ್ಞಾನಪೀಠ, ನ್ಯಾಷನಲ್ ಬುಕ್ ಟ್ರಸ್ಟ್.... ಸಹಿತ ಇಪ್ಪತ್ತೈದಕ್ಕೂ ಹೆಚ್ಚು ಪ್ರಮುಖ ಪ್ರಕಾಶಕರು ಭಾಗವಹಿಸಿದ್ದಾರೆ.

ಮುಖ್ಯವಾಗಿ ಮುಂಬೈಯಲ್ಲಿ ಓದುಗರಿಗೆ ಪುಸ್ತಕಗಳನ್ನು ತಲುಪಿಸಬೇಕು ಎನ್ನುವುದೇ ಆಯೋಜಕರ ಗುರಿ ಆಗಿತ್ತು.
ಆಯೋಜಕರ ಪ್ರಕಾರ ಮುಂಬೈನ ಪುಸ್ತಕ ಮೇಳ ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳದಷ್ಟು ಯಶಸ್ಸು ಪಡೆಯುವುದಿಲ್ಲ. ಇದಕ್ಕೆ ನಾನಾ ಕಾರಣಗಳಿವೆ. ಹಾಗಿದ್ದೂ ಈ ಬಾರಿ ದಿಲ್ಲಿಯ ಮಾದರಿಯಂತೆ ಯಶಸ್ಸು ಪಡೆಯಲು ಪ್ರತಿದಿನ ಬಿಡುಗಡೆ ಸಮಾರಂಭ, ನಾಟಕ, ಕಾವ್ಯಗೋಷ್ಠಿ, ಸಂವಾದ....ಇತ್ಯಾದಿಗಳನ್ನೂ ಆಯೋಜಿಸಲಾಗಿತ್ತು. ಲೇಖಕರ ಜೊತೆ ವಿವಿ ವಿದ್ಯಾರ್ಥಿಗಳನ್ನು, ಕಾಲೇಜು ವಿದ್ಯಾರ್ಥಿಗಳನ್ನು ಆಮಂತ್ರಿಸಲಾಗಿತ್ತು. ಈಗಿನ ಕಾಲಘಟ್ಟಕ್ಕೆ ಅನುಗುಣವಾಗಿ ಡಿಜಿಟಲ್ ಪಾವತಿ ಸೌಲಭ್ಯವನ್ನೂ ಹಮ್ಮಿಕೊಳ್ಳಲಾಗಿತ್ತು.

ಮುಂಬೈಯಲ್ಲಿ ವರ್ಷದಲ್ಲಿ ಅನೇಕ ಕಡೆ ಪುಸ್ತಕ ಪ್ರದರ್ಶನ ನಡೆಯುತ್ತದೆ. ಈ ಬಗ್ಗೆ ಪರಿದೃಶ್ಯ ಪ್ರಕಾಶನದ ರಮಣ್ ಮಿಶ್ರಾ, ‘‘ಪುಸ್ತಕ ಮೇಳದ ಯಶಸ್ಸು ನಾವು ಎಲ್ಲ್ಲಿ ಆಯೋಜಿಸುತ್ತಿದ್ದೇವೆ ಎಂಬುದನ್ನು ಹೊಂದಿಕೊಂಡಿದೆ. ಮುಂಬೈಯಲ್ಲಿ ಕ್ರಾಸ್ ಮೈದಾನದಲ್ಲಿ ಈ ಆಯೋಜನೆ ನಡೆದಾಗ ಸಿಕ್ಕಿದ ಯಶಸ್ಸು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಯೋ ಜಿಸಿದಾಗ ಸಿಗಲಿಲ್ಲ. ಇಬುಕ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ವಾಟ್ಸ್ ಆಪ್‌ನ ಜಮಾನಾದಲ್ಲೂ ಪುಸ್ತಕಗಳು ಮಹತ್ವ ಪಡೆದಿವೆ. ಯಾಕೆಂದರೆ ಇವು ಮನಸ್ಸಿಗೆ ಮುದ ನೀಡುತ್ತವೆ.’’ ಎನ್ನುತ್ತಾರೆ.

ಇನ್ನೊಬ್ಬ ಪ್ರಕಾಶಕರ ಪ್ರಕಾರ ಇಂಗ್ಲಿಷ್ ಪುಸ್ತಕಗಳ ಮಾರಾಟದ ತುಲನೆಯಲ್ಲಿ ಹಿಂದಿ ಪುಸ್ತಕಗಳು ಶೇ. 20 ಕೂಡಾ ಮಾರಾಟ ವಾಗುತ್ತಿಲ್ಲವಂತೆ. ಯಾವುದು ಮಾರಾಟವಾಗಿದೆಯೋ ಅವುಗಳಲ್ಲಿ ಇಂಗ್ಲಿಷ್‌ನಿಂದ ಅನುವಾದವಾದ ಪುಸ್ತಕವೇ ಹೆಚ್ಚು. ಹಿಂದಿ ಪುಸ್ತಕದವರು ಕೂಡಾ ಸರಕಾರಿ ಖರೀದಿಯನ್ನೇ ಹೆಚ್ಚು ಆಶ್ರಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News