ಜಮ್ಮುವಿನಲ್ಲಿ ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನಕ್ಕೆ ತೀವ್ರ ಆಕ್ಷೇಪ ಸಲ್ಲಿಸಿದ ಭಾರತ

Update: 2017-10-03 18:04 GMT

ಹೊಸದಿಲ್ಲಿ, ಅ.3: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಪಾಕ್ ಪಡೆಗಳು ನಡೆಸಿದ ಕದನವಿರಾಮ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಉಪ ಹೈಕಮಿಶನರ್ ಸೈಯದ್ ಹೈದರ್ ಶಾರನ್ನು ಕರೆಸಿಕೊಂಡ ಭಾರತ ಸರಕಾರ ತೀವ್ರ ಆಕ್ಷೇಪಣೆ ಸಲ್ಲಿಸಿತು.

 ಅಕ್ಟೋಬರ್ 2ರಂದು ಜಮ್ಮುವಿನ ಪೂಂಛ್ ವಿಭಾಗದಲ್ಲಿ ಪಾಕ್ ಪಡೆಗಳು ನಡೆಸಿದ ಕದನವಿರಾಮ ಉಲ್ಲಂಘನೆಯಲ್ಲಿ ಮೂವರು ಮಕ್ಕಳು ಮೃತರಾಗಿದ್ದರು. ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಕೃತ್ಯ ಮಾನವೀಯತೆಗೆ ವಿರುದ್ಧವಾಗಿದೆ ಮತ್ತು ಇದು ಸ್ವೀಕಾರಾರ್ಹವಲ್ಲ ಎಂದು ಸರಕಾರ ಪಾಕ್ ರಾಜತಾಂತ್ರಿಕ ಅಧಿಕಾರಿಗೆ ತಿಳಿಸಿತು. 2003ರ ಕದನವಿರಾಮ ಒಪ್ಪಂದವನ್ನು ಪಾಕ್ ಪಡೆ ನಿರಂತರವಾಗಿ ಉಲ್ಲಂಘಿಸುತ್ತಾ ಬಂದಿದೆ. 2017ರ ಬಳಿಕ ಇಂತಹ 503 ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಲಾಗಿದೆ ಎಂದು ವಿದೇಶ ವ್ಯವಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

 ಪಾಕ್‌ನಲ್ಲಿರುವ ಭಾರತದ ಉಪ ಹೈಕಮಿಶನರ್‌ರನ್ನು ಸೋಮವಾರ ಕರೆಸಿಕೊಂಡಿದ್ದ ಪಾಕ್ ಸರಕಾರ ಸೆ.30 ಹಾಗೂ ಅಕ್ಟೋಬರ್ 2ರಂದು ಭಾರತದ ಪಡೆ ಗಡಿನಿಯಂತ್ರಣಾ ರೇಖೆಯ ಬಳಿ ಕದನ ವಿರಾಮ ಉಲ್ಲಂಘಿಸಿವೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News