ಬಿಹಾರ ರಾಜ್ಯಪಾಲರಾಗಿ ಮಲಿಕ್ ಪ್ರಮಾಣ

Update: 2017-10-04 18:21 GMT

ಪಾಟ್ನಾ, ಅ.4: ಬಿಹಾರದ ರಾಜ್ಯಪಾಲರಾಗಿ ಹಿರಿಯ ಬಿಜೆಪಿ ನಾಯಕ ಸತ್ಯಪಾಲ್ ಮಲಿಕ್ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಕರಣಗೊಂ ಬಳಿಕ ರಾಜೀನಾಮೆ ನೀಡಿದ್ದರಿಂದ, ಆ ಹುದ್ದೆಯು ತೆರವಾಗಿತ್ತು. ಈ ಅವಧಿಯಲ್ಲಿ ಪಶ್ಚಿಮಬಂಗಾಳದ ರಾಜ್ಯಪಾಲ ಕೆ.ಎನ್.ತ್ರಿಪಾಠಿ ಬಿಹಾರದ ಹೆಚ್ಚುವರಿ ಹೊಣೆ ವಹಿಸಿಕೊಂಡಿದ್ದರು.

ಇಂದು ಪಾಟ್ನಾದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರು ಸತ್ಯಪಾಲ್ ಮಲಿಕ್‌ಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಚೌಧುರಿ ಹಾಗೂ ವಿಧಾನಪರಿಪತ್ ಅಧ್ಯಕ್ಷ ಅವಧೇಶ್ ನಾರಾಯಣ್ ಸಿಂಗ್ ಉಪಸ್ಥಿತರಿದ್ದರು.

ಮೂಲತಃ ಪಶ್ಚಿಮ ಉತ್ತರಪ್ರದೇಶದ ಭಾಗ್‌ಪತ್ ಜಿಲ್ಲೆಯವರಾದ ಮಲಿಕ್ ಕಾನೂನು ಪದವೀಧರ. 1970ರಲ್ಲಿ ಉತ್ತರಪ್ರದೇಶ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅವರು ಸಕ್ರಿಯ ರಾಜಕಾರಣಪ್ರವೇಶಿಸಿದ್ದರು. 1989ರ ಲೋಕಸಭಾ ಚುನಾವಣೆಯಲ್ಲಿ ಅವರು ಅಲಿಗಡ ಲೋಕಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯರಾಗಿಯೂ ಅವರು ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News