ಜಾರ್ಖಂಡ್: ಶಾಲೆಯ ಸಮೀಪವೇ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

Update: 2017-10-04 18:16 GMT

ರಾಂಚಿ, ಅಕ್ಟೋಬರ್ 4: ಜಾರ್ಖಂಡ್‌ನ ಪಾಲಮಾವ್ ಜಿಲ್ಲೆಯಲ್ಲಿ ಶಾಲೆಯೊಂದರ ಸಮೀಪ ಇಬ್ಬರುಹದಿಹರೆಯದ ಬಾಲಕಿಯರ ಮೇಲೆ ಮೂವರು ಅತ್ಯಾಚಾರವೆಸಗಿದ ಬರ್ಬರ ಘಟನೆ ಬುಧವಾರ ವರದಿಯಾಗಿದೆ.

ಅತ್ಯಾಚಾರದ ದೃಶ್ಯವನ್ನು ಆರೋಪಿಗಳು ಚಿತ್ರೀಕರಿಸಿದ್ದು, ಒಂದು ವೇಳೆ ಘಟನೆಯ ಬಗ್ಗೆ ದೂರು ನೀಡಿದಲ್ಲಿ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಅವರು ಬಾಲಕಿಗೆ ಬೆದರಿಕೆಯೊಡ್ಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

  ಈ ಬಾಲಕಿಯರು ಶಾಲೆಯ ಎದುರಿಗಿರುವ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದರು. ಆರೋಪಿಗಳು ಕೂಡಾ ಅದೇ ಪರಿಸರದಲ್ಲಿ ವಾಸಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಈ ಮೂವರು ಆರೋಪಿಗಳು ಮನೆಯೊಳಗೆ ನುಗ್ಗಿ ಬಾಲಕಿಯರನ್ನು ಬಲವಂತವಾಗಿ ಶಾಲೆಯ ಸಮೀಪದ ಇನ್ನೊಂದು ಮನೆಗೆ ಎಳೆದೊಯ್ದು, ಅವರ ಮೇಲೆ ಅತ್ಯಾಚಾರವೆಸಗಿದ್ದಾರೆ. ದುಷ್ಕರ್ಮಿಗಳು ಪಾನಮತ್ತರಾಗಿದ್ದರೆಂದು ಪೊಲೀಸರು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿಯರ ಪೈಕಿ ಒಬ್ಬಾಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬಾಕೆ ಅತ್ಯಾಚಾರಿಗಳ ಪೈಕಿ ಇಬ್ಬರನ್ನು ಗುರುತಿಸಿದ್ದಾಳೆ ಹಾಗೂ ಅವರ ಹೆಸರುಗಳನ್ನು ಕೂಡಾ ಪೊಲೀಸರಿಗೆ ತಿಳಿಸಿದ್ದಾಳೆ. ಆದಾಗ್ಯೂ ಈತನಕ ಪೊಲೀಸರು ಯಾರನ್ನೂ ಬಂಧಿಸಿಲ್ಲವೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News