ಹನಿಪ್ರೀತ್‌ಗೆ ಪೊಲೀಸ್ ಕಸ್ಚಡಿ

Update: 2017-10-04 18:17 GMT

ಹೊಸದಿಲ್ಲಿ,ಅ.4: ಒಂದು ತಿಂಗಳಿಗೂ ಅಧಿಕ ಸಮಯದಿಂದ ತಲೆಮರೆಸಿಕೊಂಡಿದ್ದು, ಮಂಗಳವಾರ ಹರ್ಯಾಣ ಪೊಲೀಸರಿಗೆ ಶರಣಾಗಿರುವ ದೇರಾ ಸಾಚಾ ಸೌಧಾದ ವರಿಷ್ಠ ಗುರ್ಮಿತ್ ಸಿಂಗ್‌ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್‌ಗೆ ಪಂಚ್‌ಕುಲಾ ನ್ಯಾಯಾಲಯವು ಬುಧವಾರ ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಆಗಸ್ಟ್ 25ರಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗುರ್ಮೀತ್ ಸಿಂಗ್‌ಗೆ ನ್ಯಾಯಾಲಯ ಜೈಲು ಶಿಕ್ಷೆಯನ್ನು ವಿಧಿಸಿದ ಬಳಿಕ,ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ಹನಿಪ್ರೀತ್ ಎದುರಿಸುತ್ತಿದ್ದಾಳೆ.

 ಹನಿಪ್ರೀತ್, ಬಂಧಿತ ದೇರಾ ವರಿಷ್ಠ ಗುರ್ಮೀತ್ ಪರಮಾಪ್ತ ಸಹಾಯಕಿಯಾಗಿದ್ದು, ವಿಚಾರಣೆಗಾಗಿ ಆಕೆಗೆ 14 ದಿನಗಳ ರಿಮಾಂಡ್ ವಿಧಿಸಬೇಕೆಂದು ಪ್ರಾಸಿಕ್ಯೂಶನ್ ಆಗ್ರಹಿಸಿತ್ತು. ದೇರಾ ಸಾಚಾ ಸೌಧದ ಚಟುವಟಿಕೆಗಳು ಹಾಗೂ ಅದರ ಮುಖ್ಯಸ್ಥ ಗುರ್ಮಿತ್ ಬಂಧನದ ಬಳಿಕ ಹರ್ಯಾಣ, ಪಂಜಾಬ್ ಹಾಗೂ ದಿಲ್ಲಿಯಲ್ಲಿ ಆತನ ಅನುಯಾಯಿಗಳು ಹಿಂಸಾಕೃತ್ಯಗಳನ್ನು ಎಸಗಿರುವ ಬಗ್ಗೆ ಹನಿಪ್ರೀತ್‌ಗೆ ಅರಿವಿತ್ತೆಂದು ಅದು ಆಪಾದಿಸಿದೆ. ಗುರ್ಮಿತ್ ಬಂಧನ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ 38 ಮಂದಿ ಮೃತಪಟ್ಟು, 264 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News