ಕೌನ್ ಬನೇಗಾ ಕರೋಡ್ ಪತಿಯ 7 ಕೋಟಿಯ ಈ ಪ್ರಶ್ನೆಗೆ ಉತ್ತರಿಸಬಲ್ಲಿರಾ...

Update: 2017-10-06 10:14 GMT

ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ’ ಸೀಸನ್ 9ರಲ್ಲಿ ಇತ್ತೀಚೆಗಷ್ಟೇ ಜಮ್ಶೇಡ್ ಪುರದ ಮಹಿಳೆಯೊಬ್ಬರು 1 ಕೋಟಿ ರೂ. ಗೆದ್ದಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ 1 ಕೋಟಿ ರೂ. ಗೆದ್ದವರಲ್ಲಿ ಮೊದಲಿಗರಾಗಿ ಜಮ್ಶೇಡ್ ಪುರದ ಅನಾಮಿಕ ಮಜೂಂದಾರ್ ಹೊರಹೊಮ್ಮಿದ್ದಾರೆ.

ಸ್ಪರ್ಧೆಯ ಆರಂಭದಿಂದಲೂ ಜಾಣ್ಮೆಯಿಂದ ಆಟವಾಡಿದ ಅನಾಮಿಕ ಅವರು ರಿಯಾಲಿಟಿ ಶೋದ ಹೋಸ್ಟ್ ಅಮಿತಾಬ್ ಬಚ್ಚನ್ ರಿಂದಲೂ ಮೆಚ್ಚುಗೆ ಗಳಿಸಿದರು.

1 ಕೋಟಿ ರೂ. ನ ಪ್ರಶ್ನೆಯ ಸಂದರ್ಭ ಅವರ ಬಳಿ ಯಾವುದೇ ಲೈಫ್ ಲೈನ್ ಗಳಿರಲಿಲ್ಲ. ಆದರೆ ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಮೂಲಕ ಅವರು 1 ಕೋಟಿ ರೂ. ಗೆದ್ದರು.

ಅನಾಮಿಕ ಅವರ ಕೊನೆಯ ಪ್ರಶ್ನೆ ಅಂದರೆ 7 ಕೋಟಿ ರೂ. ಗೆಲ್ಲುವ ಪ್ರಶ್ನೆ ಅವರೆಣಿಸಿದಷ್ಟು ಸುಲಭವಾಗಿರಲಿಲ್ಲ. ಅವರ ಬಳಿ ಲೈಫ್ ಲೈನ್ ಕೂಡ ಇರಲಿಲ್ಲ.

“ನೊಬೆಲ್ ಪ್ರಶಸ್ತಿ ಗೆದ್ದ ಈ ಕೆಳಗಿನ ಜೋಡಿಗಳಲ್ಲಿ ಯಾರು ಪರಸ್ಪರ ಹೆತ್ತವರು ಮತ್ತು ಮಕ್ಕಳಲ್ಲ” ಎಂಬ ಪ್ರಶ್ನೆಯನ್ನು 7 ಕೋಟಿ ರೂ.ಗೆ ಕೇಳಲಾಗಿತ್ತು. ಈ ಪ್ರಶ್ನೆಗೆ

ಮೇರಿ ಕ್ಯೂರಿ-ಐರಿನ್ ಜೊಲಿಯೊಟ್ ಕ್ಯೂರಿ
ಜೆ.ಜೆ. ಥಾಮ್ಸನ್, ಜಾರ್ಜ್ ಪೇಗೆಟ್ ಥಾಮ್ಸನ್
ನೀಲ್ಸ್ ಬೋಹ್ರ್-ಆಜ್ ಬೋಹ್ರ್
ಹರ್ಮನ್ ಎಮಿಲ್ ಫಿಶರ್-ಹ್ಯಾನ್ಸ್ ಫಿಶರ್

ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಆದರೆ ಈ ಪ್ರಶ್ನೆಯ ಬಗ್ಗೆ ಉತ್ತರಿಸಲು ಅನಾಮಿಕ ಅವರಿಗೆ ಸಾಧ್ಯವಾಗಲಿಲ್ಲ. ಅವರು ಉತ್ತರಗಳನ್ನು ಹೇಳಲು ತಡವರಿಸಿದರು. ಈ ಸಂದರ್ಭ ಇದನ್ನು ಗಮನಿಸಿದ ಬಚ್ಚನ್ , ಒಂದು ಕೋಟಿ ರೂ.ವನ್ನು ಕಳೆದುಕೊಳ್ಳುವುದು ನಿಮ್ಮ ಪಾಲಿಗೆ ಹೇಗನಿಸುತ್ತದೆ ಎಂದು ಪ್ರಶ್ನಿಸಿದರು. ತೋಚಿದ್ದ ಉತ್ತರವನ್ನು ನೀಡಲು ಸಿದ್ಧವಾಗಿದ್ದ ಅನಾಮಿಕಾ ಅಮಿತಾಬ್ ರ ಈ ಮಾತುಗಳಿಂದ ತನ್ನ ನಿರ್ಧಾರವನ್ನು ಬದಲಾಯಿಸಿ ಸ್ಪರ್ಧೆಯಿಂದ ‘ಕ್ವಿಟ್’ ಆಗುವ ಮೂಲಕ ಒಂದು ಕೋಟಿ ರೂ. ಗೆದ್ದರು.

ನಂತರ ಈ ಪ್ರಶ್ನೆಗೆ ಉತ್ತರ ಯಾವುದಾಗಿರಬಹುದು ಎಂದು ಆಯ್ಕೆ ಮಾಡಲು ಅನಾಮಿಕ ಬಳಿ ಅಮಿತಾಬ್ ಹೇಳಿದ್ದು, ಅವರು ಆಪ್ಶನ್ ಸಿ.) ನೀಲ್ಸ್ ಬೋಹ್ರ್-ಆಜ್ ಬೋಹ್ರ್ ನ್ನು ಆಯ್ಕೆ ಮಾಡಿದರು. ಆದರೆ ಸರಿಯಾದ ಉತ್ತರ ಡಿ. ಆಪ್ಶನ್ ನ ಹರ್ಮನ್ ಎಮಿಲ್ ಫಿಶರ್ ಹಾಗು ಹ್ಯಾನ್ಸ್ ಫಿಶರ್ ಆಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News