ಸದ್ದು ಮಾಡುತ್ತಿರುವ ರಣವೀರ್ ಫಸ್ಟ್ ಲುಕ್

Update: 2017-10-06 12:01 GMT

ಸಂಜಯ್‌ಲೀಲಾ ಬನ್ಸಾಲಿಯ ‘‘ಪದ್ಮಾವತಿ’’ ಘೋಷಣೆಯಾದದ್ದೇ ತಡ, ಈ ಮೆಗಾ ಬಜೆಟ್ ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ವಿವಾದದ ಸುಳಿಯಲ್ಲಿ ಸಿಲುಕುತ್ತಲೇ ಇದೆ. ಆದರೆ ಇತ್ತೀಚೆಗೆ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ‘ಪದ್ಮಾವತಿ’ಯ ಪೋಸ್ಟರ್‌ಗಳು ಆ ಚಿತ್ರದ ಬಗ್ಗೆ ಚಿತ್ರರಸಿಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.

‘ಪದ್ಮಾವತಿ’ ಪಾತ್ರದಲ್ಲಿ ದೀಪಿಕಾ ಪಡುಕೋಣೆಯ ಫಸ್ಟ್‌ಲುಕ್ ಬಾಲಿವುಡ್‌ನಲ್ಲಿ ಭಾರೀ ಸುದ್ದಿ ಮಾಡುತ್ತಿರುವಾಗಲೇ, ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್‌ಸಿಂಗ್‌ನ ಫಸ್ಟ್‌ಲುಕ್ ಬಿಡುಗಡೆಯಾಗಿದೆ.

ಸಂಜಯ್‌ಲೀಲಾ ಬನ್ಸಾಲಿಯ ಬಾಜೀರಾವ್ ಮಸ್ತಾನಿ ಚಿತ್ರದಲ್ಲಿ ರಣವೀರ್‌ಸಿಂಗ್, ಐತಿಹಾಸಿಕ ಪಾತ್ರಕ್ಕೆ ಜೀವತುಂಬಿದ್ದರು. ಅದಕ್ಕೂ ಮೊದಲು ಬನ್ಸಾಲಿ ನಿರ್ದೇಶನದ ರಾಮ್‌ಲೀಲಾದಲ್ಲೂ ರೋಮ್ಯಾಂಟಿಕ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಬಿಡುಗಡೆಯಾಗಿರುವ ‘ಪದ್ಮಾವತಿ’ ಚಿತ್ರದಲ್ಲಿ ರಣವೀರ್‌ನ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವಂತೂ ಚರ್ಚೆಯ ವಸ್ತುವಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಫಸ್ಟ್‌ಲುಕ್‌ನಲ್ಲಿ ರಣವೀರ್ ತನ್ನ ಕಣ್ಣುಗಳಿಂದಲೇ ಪಾತ್ರದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.ಖಿಲ್ಜಿಯ ಪಾತ್ರದಲ್ಲಿ ಹರಿತವಾದ ಅವರ ಕಣ್ಣಿನ ನೋಟವು ಈ ನಟನ ಅಭಿನಯ ಪ್ರತಿಭೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಬನ್ಸಾಲಿ ಕೂಡಾ ಪಾತ್ರಗಳ ಆಯ್ಕೆಯಲ್ಲಿ ತಾನೋರ್ವ ಫರ್‌ಫೆಕ್ಷನಿಸ್ಟ್ ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಬಾಲಿವುಡ್ ಮಂದಿ ಹೇಳಿಕೊಳ್ಳುತ್ತಿದ್ದಾರೆ.

ಪ್ರತಿಯೊಂದು ಚಿತ್ರದಲ್ಲೂ ರಣವೀರ್ ತನ್ನ ಪಾತ್ರದ ಪರಾಕಾಯ ಪ್ರವೇಶ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಾಜೀರಾವ್ ಮಸ್ತಾನಿ ಬಳಿಕ ‘ಪದ್ಮಾವತಿ’ ಕೂಡಾ ರಣವೀರ್‌ನ ಚಿತ್ರಬದುಕಿಗೆ ಹೊಸ ಮೈಲುಗಲ್ಲಾಗುವುದರಲ್ಲಿ ಸಂದೇಹವಿಲ್ಲವೆಂಬುದನ್ನು ಈ ಫಸ್ಟ್‌ಲುಕ್ ನೋಡಿಯೇ ತಿಳಿಯಬಹುದು ಎಂದು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ದೀಪಿಕಾ, ರಣವೀರ್ ಜೊತೆಗೆ ಶಾಹೀದ್ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರವನ್ನು ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News