ಹಾಲಿವುಡ್‌ಗೆ ರಾಣಾ ದಗುಬಾಟಿ

Update: 2017-10-06 12:07 GMT

ಟಾಲಿವುಡ್ ನಟ ರಾಣಾ ದಗುಬಾಟಿ ಈಗ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ‘ಬಾಹುಬಲಿ’ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದ ದುಗುಬಾಟಿಯ ಅಭಿನಯ ಚಿತ್ರರಸಿಕರ ಪ್ರಶಂಸೆ ಗಿಟ್ಟಿಸಿತ್ತು. ಆನಂತರ ಆತ ನಟಿಸಿದ್ದ ಬಾಲಿವುಡ್ ಚಿತ್ರಗಳಾದ ಬೇಬಿ ಹಾಗೂ ಗಾಝಿ ‘ಆಟ್ಯಾಕ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಬಾರಿಸಿವೆ. ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರ ‘ನೇನೆ ರಾಜು ನೇನೆ ಮಂತ್ರಿ’ ಕೂಡಾ ಗೆಲುವಿನ ನಗೆ ಬೀರಿದೆ. ಟಾಲಿವುಡ್‌ನಲ್ಲಿ ತನ್ನದೇ ಆದ ಇಮೇಜ್ ಬೆಳೆಸಿಕೊಂಡಿರುವ ದಗುಬಾಟಿಯನ್ನು ಇದೀಗ ಹಾಲಿವುಡ್ ಕೈಬೀಸಿ ಕರೆದಿದೆ. ಹೌದು. ಸ್ವಾತಂತ್ರ ಪೂರ್ವ ಭಾರತದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಹಾಲಿವುಡ್ ಚಿತ್ರದಲ್ಲಿ ರಾಣಾ ನಟಿಸುವುದು ಕನ್‌ಫರ್ಮ್ ಆಗಿದೆ. 1888ರಲ್ಲಿ ಉಗಿ ಹಡಗೊಂದರ ನಿಗೂಢ ನಾಪತ್ತೆಯ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುವ ವಿಜ್ಞಾನಿಯಾಗಿ ರಾಣಾ ನಟಿಸಲಿದ್ದಾರೆ. 700 ಮಂದಿ ಪ್ರಯಾಣಿಕರಿದ್ದ ಈ ಹಡಗು ‘ವಿಜಿ’ 1888ರ ನವೆಂಬರ್ 8ರಂದು ಚಂಡಮಾರುತಕ್ಕೆ ಸಿಲುಕಿದ ಬಳಿಕ ಕಾಣೆಯಾಗಿತ್ತು. ಚಿತ್ರದ ಕಥೆ ರಾಣಾಗೆ ತುಂಬಾ ಇಷ್ಟವಾಗಿದ್ದು, ಇತ್ತೀಚೆಗೆ ಅವರು ಚಿತ್ರದ ನಿರ್ಮಾಪಕರ ಜೊತೆ ಲಂಡನ್‌ನಲ್ಲಿ ಮಾತುಕತೆ ಕೂಡಾ ನಡೆಸಿದ್ದಾರೆ. ‘ವಿಜಿ: ಮಿಸ್ಟರಿ ಆಫ್ ದಿ ಫ್ಯಾಂಟಮ್ ಶಿಪ್’ ಎಂದು ಹೆಸರಿಡಲಾದ ಈ ಚಿತ್ರಕ್ಕೆ ಧ್ವಾನಿಲ್ ಮೆಹ್ತಾ ನಿರ್ದೇಶಕರು. ಯೋಗೇಶ್ ಜೋಶಿ ಚಿತ್ರಕಥೆ ಬರೆದಿದ್ದಾರೆ. ಪ್ರಸ್ತುತ ನಿರ್ದೇಶಕರು, ಚಿತ್ರದ ಲೋಕೇಶನ್‌ಗಳ ಹುಡುಕಾಟದಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮುಂದಿನ ವರ್ಷದ ಜೂನ್‌ನಲ್ಲಿ ಶೂಟಿಂಗ್ ಆರಂಭಗೊಳ್ಳಲಿದೆ. ಒಟ್ಟಿನಲ್ಲಿ ಟಾಲಿವುಡ್, ಬಾಲಿವುಡ್‌ನಲ್ಲಿ ಯಶಸ್ಸಿನ ಸಿಹಿ ಉಂಡಿರುವ ರಾಣಾಗೆ ಹಾಲಿವುಡ್ ಕೂಡಾ ಕೈಹಿಡಿಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News