ದೀಪಾವಳಿ ಹಬ್ಬದ ಡಿಜಿಟಲೀಕರಣ....

Update: 2017-10-07 18:44 GMT

ದೇಶವಿಡೀ ದಿವಾಳಿ ದಿವಾಳಿ ಎಂದು ಸಂಭ್ರಮಿಸುತ್ತಿರುವುದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿಯವರು ಆನಂದಬಾಷ್ಪ ಸುರಿಸಿದರು. ‘‘ನೋಡಿ, ನನ್ನ ಆಡಳಿತದಲ್ಲಿ ದೇಶವಾಸಿಗಳು ದೀಪಾವಳಿಗೆ ಮೊದಲೇ ಹಬ್ಬ ಆಚರಿಸುತ್ತಿದ್ದಾರೆ’’ ಎಂದು ಹೇಳಿಕೆಯನ್ನೂ ಕೊಟ್ಟರು. ಈ ಹೇಳಿಕೆಯನ್ನು ಕೇಳಿದ್ದೇ ಪತ್ರಕರ್ತ ಎಂಜಲು ಕಾಸಿ ಪ್ರಧಾನಿ ಮೋದಿಯವರನ್ನು ಹುಡುಕುತ್ತಾ ಅಂಬಾನಿಯ ಮನೆಗೆ ಓಡಿದ. ಪ್ರಧಾನಿಯವರು ಅಂಬಾನಿಯವರ ಮನೆ ಬಾಗಿಲಿಗೆ ದೀಪಾವಳಿಯ ದೀಪದ ಗೂಡನ್ನು ಕಟ್ಟಿ ಅಲಂಕರಿಸುತ್ತಿದ್ದರು.

‘‘ಸಾರ್...ದೀಪಾವಳಿ ಇನ್ನೂ ಬಂದಿಲ್ಲ...ಅಷ್ಟರಲ್ಲೇ...’’ ಕಾಸಿ ಬಾಯಿ ತೆರೆಯುವಷ್ಟರಲ್ಲೇ ಮೋದಿ ಹೇಳಿದರು ‘‘ನೋಡ್ರೀ...ನನ್ನ ಜಿಎಸ್‌ಟಿ ತೆರಿಗೆಯಿಂದಾಗಿ ಇಡೀ ದೇಶ ದೀಪಾವಳಿ ಬರುವ ಮೊದಲೇ ದಿವಾಳಿ ಆಚರಿಸುತ್ತಿದೆ. ದೇಶಕ್ಕೆ ಅಚ್ಛೇ ದಿನ್ ಬಂದಿರುವ ಸಂಕೇತ ಇದು’’ ಎಂದು ಉತ್ತರಿಸಿದರು.

‘‘ಸಾರ್...ದೇಶದ ಜನರು ಹೇಳುತ್ತಿರುವ ದಿವಾಳಿ ದೀಪಾವಳಿಗೆ ಸಂಬಂಧಿಸಿದ್ದಲ್ಲ. ಕೈಯಲ್ಲಿರುವ ದುಡ್ಡನ್ನೆಲ್ಲ ಬ್ಯಾಂಕಿಗೂ, ಸರಕಾರಕ್ಕೂ ಕಟ್ಟಿ ದಿವಾಳಿಯಾಗಿದ್ದೇವೆ ಎಂದು ಅಳುತ್ತಿದ್ದಾರೆ ’’

‘‘ನೋಡ್ರೀ...ಹೀಗೆಲ್ಲ ನೀವು ಶಲ್ಯತಂತ್ರ ಮಾಡಬೇಡಿ. ದೇಶ ಅಳುತ್ತಿರುವುದಲ್ಲ, ಅದು ಆನಂದ ಬಾಷ್ಪ....’’ ಮೋದಿಯವರು ಕಾಸಿಯನ್ನು ತಿದ್ದಿದರು.

‘‘ಸಾರ್...ಜನರ ಕೈಯಲ್ಲಿ ಪಟಾಕಿ ಕೊಳ್ಳುವುದಕ್ಕೇ ದುಡ್ಡಿಲ್ಲ. ಇನ್ನು ದೀಪಾವಳಿ ಆಚರಿಸುವುದು ಹೇಗೆ ಸಾರ್?’’ ಕಾಸಿ ಕೇಳಿದ.

‘‘ನೋಡ್ರೀ...ಇದು ನನ್ನ ಆಡಳಿತದ ತಂತ್ರ. ದೀಪಾವಳಿಯ ಸಂದರ್ಭದಲ್ಲಿ ಜನರ ಕೈಯಲ್ಲಿ ಹಣ ಇದ್ದರೆ ಅವರು ಪಟಾಕಿ ಕೊಳ್ಳುತ್ತಾರೆ. ಪಟಾಕಿ ಸಿಡಿಸಿದರೆ ಪರಿಸರ ಮಾಲಿನ್ಯವಾಗುತ್ತದೆ. ಸ್ವಚ್ಛತಾ ಆಂದೋಲನದ ಭಾಗವಾಗಿ ದೀಪಾವಳಿಯ ಸಂದರ್ಭದಲ್ಲಿ ಅವರ ಕೈಯಿಂದ ದುಡ್ಡನ್ನು ಕಿತ್ತುಕೊಂಡು, ಪಟಾಕಿ ರಹಿತ ದೀಪಾವಳಿ ಮಾಡಲು ಅವಕಾಶ ನೀಡಿದ್ದೇನೆ...’’

ಹೋ...ಹೌದಲ್ಲ ಅನ್ನಿಸಿತು ಕಾಸಿಗೆ. ‘‘ಆದರೆ, ಹಬ್ಬದ ಪಾಯಸ ಮಾಡಬೇಕಾದರೆ ಹಣ ಬೇಕಲ್ವ ಸಾರ್? ಎಲ್ಲ ದಿನಸಿಗಳ ಬೆಲೆಯೂ ಏರಿಕೆಯಾಗಿದೆ...’’ ಕಾಸಿ ಆತಂಕ ಮುಂದಿಟ್ಟ.

ಮೋದಿ ಹಸನ್ಮುಖರಾಗಿ ಮುಂದುವರಿಸಿದರು ‘‘ನೋಡ್ರೀ...ಅದಕ್ಕೆಲ್ಲ ನಮ್ಮ ಅಂಬಾನಿಯವರು ವ್ಯವಸ್ಥೆ ಮಾಡಿದ್ದಾರೆ. ಭಾರತ ಡಿಜಿಟಲೀಕರಣವಾಗಿದೆ. ಹಬ್ಬದ ಹೊತ್ತಿನಲ್ಲೇ ಅವರ ಹಣವನ್ನೆಲ್ಲ ಬ್ಯಾಂಕುಗಳು ತಮ್ಮ ವಶಕ್ಕೆ ತೆಗೆದುಕೊಂಡಿರುವುದು ದೇಶವನ್ನು ಡಿಜಿಟಲೀಕರಣ ಮಾಡುವುದಕ್ಕಾಗಿ. ಈ ಬಾರಿ ದೇಶದ ಜನರೆಲ್ಲ ಡಿಜಿಟಲ್ ಮೂಲಕವೇ ಹಬ್ಬಗಳನ್ನು ಭಾರೀ ಸಂಭ್ರಮದಿಂದ ಆಚರಿಸಲಿದ್ದಾರೆ. ಅದಕ್ಕಾಗಿ ವಿಶೇಷ ಆ್ಯಪ್‌ಗಳನ್ನು ರಿಲಯನ್ಸ್ ಕಂಪೆನಿ ತಯಾರು ಮಾಡುತ್ತಿದೆ...’’

‘‘ಸಾರ್...ಹಬ್ಬ ಬರುತ್ತಿದ್ದ ಹಾಗೆ ಹಣತೆಗಳನ್ನು ತಯಾರು ಮಾಡುವುದು ಕೇಳಿದ್ದೇನೆ. ಈ ಆ್ಯಪ್‌ಗಳಿಗೂ ಹಬ್ಬಕ್ಕೂ ಏನು ಸಂಬಂಧ?’’ ಕಾಸಿ ಕೇಳಿದ.

‘‘ನೋಡ್ರೀ...ಇನ್ನು ಹಣತೆಗಳನ್ನು ಎಲ್ಲರೂ ಮೊಬೈಲ್‌ನಲ್ಲೇ ಹಚ್ಚಬೇಕು. ವಿಶೇಷ ಹಣತೆಗಳ ಆ್ಯಪ್‌ಗಳನ್ನು ದೀಪಾವಳಿಗಾಗಿಯೇ ತಯಾರಿಸಲಾಗಿದೆ. ಇದರಿಂದಾಗಿ ಎಣ್ಣೆ ಉಳಿತಾಯವಾಗುತ್ತದೆ. ಈಗಾಗಲೇ ವಿವಿಧ ಡಿಸೈನ್‌ಗಳ ಹಣತೆಗಳನ್ನು ಹರಿಯಬಿಡಲಾಗಿದೆ. ಹಾಗೆಯೇ ಬೇರೆ ಬೇರೆ ರೀತಿಯ ಪಟಾಕಿಗಳನ್ನೂ ಮೊಬೈಲ್‌ಗಳ ಮೂಲಕವೇ ಸಿಡಿಸಿ ಸಂತೋಷ ಪಡಬಹುದು. ಹೇಗೂ ಮನೆ ಮನೆಗಳಲ್ಲಿ ಈಗ ಹಣತೆಗಳಿವೆ....ಪುಕ್ಕಟೆ ಇಂಟರ್‌ನೆಟ್ ಪ್ಯಾಕೇಜುಗಳೂ ಇವೆ....ಹಾಗೆಯೇ ಬೇರೆ ಬೇರೆ ದೇವರುಗಳ ದರ್ಶನವನ್ನೂ ಈಗ ಡಿಜಿಟಲೀಕರಣಗೊಳಿಸಿದೆ. ಅಂಗೈಯಲ್ಲಿ ದೇವರು ಎನ್ನುವ ಯೋಜನೆಯ ಭಾಗವಾಗಿ ಎಲ್ಲರೂ ಅವರವರ ದೇವರುಗಳನ್ನು ಅವರವರ ಮೊಬೈಲ್‌ಗಳಲ್ಲೇ ದರ್ಶನ ಮಾಡಬಹುದು. ಮತ್ತು ವಿವಿಧ ಗ್ರಾಫಿಕ್ಸ್‌ಗಳಲ್ಲಿ ದೇವರುಗಳ ದರ್ಶನವನ್ನು ಅಂಬಾನಿಯವರು ಮಾಡಲಿದ್ದಾರೆ’’

‘‘ಸಾರ್...ಹಬ್ಬದ ಊಟಕ್ಕೆ ಏನು ಮಾಡುವುದು ಸಾರ್?’’ ಕಾಸಿ ಇನ್ನೊಂದು ಮಹತ್ವದ ಪ್ರಶ್ನೆಯನ್ನು ಮುಂದಿಟ್ಟ. ‘‘ನೋಡಿ ಹಬ್ಬದ ಸಂದರ್ಭದಲ್ಲಿ ತಿಂದು ಎಸೆದ ಬಾಳೆಯೆಲೆಗಳು ರಸ್ತೆಯಲ್ಲಿ ಬಿದ್ದಿರುತ್ತವೆ. ಇವುಗಳನ್ನೆಲ್ಲ ತಪ್ಪಿಸಲು ಹಬ್ಬದ ಊಟಗಳನ್ನು ಡಿಜಿಟಲೀಕರಣಗೊಳಿಸಿದ್ದೇವೆ. ಬಗೆ ಬಗೆಯ ಊಟಗಳನ್ನು ಮೊಬೈಲ್‌ಗಳ ಮೂಲಕವೇ ದೇಶಾದ್ಯಂತ ರಿಲಯನ್ಸ್ ವಿತರಿಸಲಿದೆ’’ ಮೋದಿ ಸಮಾಧಾನಿಸಿದರು.

‘‘ಹಬ್ಬದ ಊಟಗಳನ್ನು ಹೇಗೆ ಸಾರ್ ಡಿಜಿಟಲೀಕರಣ ಮಾಡುವುದು...’’ ಕಾಸಿ ಅರ್ಥವಾಗದೆ ಕೇಳಿದ.

‘‘ಎಲ್ಲ ಬಗೆ ಬಗೆಯ ಭೋಜನಗಳನ್ನು, ಭಕ್ಷಗಳನ್ನು ವಾಟ್ಸ್ ಆ್ಯಪ್ ಮೂಲಕ ದೇಶಾದ್ಯಂತ ಶೇರು ಮಾಡಿಕೊಳ್ಳಬಹುದು. ತಮ್ಮ ವಾಟ್ಸ್ ಆ್ಯಪ್‌ಗೆ ಬಂದಿರುವ ಭಕ್ಷಗಳ ಚಿತ್ರಗಳನ್ನು ಇತರರಿಗೂ ಶೇರು ಮಾಡಿಕೊಳ್ಳುವ ಮೂಲಕ ಈ ಬಗೆ ಬಗೆಯ ಊಟಗಳು ಎಲ್ಲರಿಗೂ ತಲುಪುವಂತೆ ಮಾಡಬೇಕು. ಈ ದೇಶದ ಮೂಲೆ ಮೂಲೆಗಳಿಗೆ ಇದು ತಲುಪಬೇಕು. ಈ ಭೋಜನಗಳು ಜಿಎಸ್‌ಟಿ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲವಾದುದರಿಂದ ದೇಶಾದ್ಯಂತ ಎಲ್ಲರೂ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸುವಂತಾಗುತ್ತದೆ’’ ಮೋದಿ ಪರಿಹಾರ ನೀಡಿದರು. ಕಾಸಿಗೆ ತಲೆ ತಿರುಗಿದಂತಾಯಿತು. ಇನ್ನು ಮುಂದೆ ದೇಶಕ್ಕೆ ವಾಟ್ಸ್ ಆ್ಯಪ್ ಊಟವೇ ಗತಿಯೇ? ಕಾಸಿ ಒಮ್ಮೆಲೆ ವೌನವಾದುದನ್ನು ನೋಡಿ ಮೋದಿಯವರೇ ಮುಂದುವರಿಸಿದರು ‘‘ಮುಂದಿನ ದಿನಗಳಲ್ಲಿ ಎಲ್ಲ ರೇಷನ್ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಇದರಿಂದ ದೇಶದ ಖಜಾನೆಗೆ ಅಪಾರ ಹಣ ಉಳಿತಾಯವಾಗುತ್ತದೆ. ರೇಷನ್ ಆ್ಯಪ್ ಒಂದನ್ನು ನಾವು ಬಿಡುಗಡೆ ಮಾಡಲಿದ್ದೇವೆ. ಅಕ್ಕಿ, ಬೇಳೆ, ಎಣ್ಣೆ, ತುಪ್ಪ ಎಲ್ಲವನ್ನೂ ಈ ಆ್ಯಪ್‌ನ ಮೂಲಕವೇ ವಿತರಿಸಲಿದ್ದೇವೆ. ಸಿಲಿಂಡರ್‌ಗಳನ್ನು ಪೂರೈಕೆಯನ್ನೂ ನಿಲ್ಲಿಸುತ್ತೇವೆ. ಅದನ್ನೂ ಡಿಜಿಟಲೀಕರಣಗೊಳಿಸಲಾಗುತ್ತದೆ. ಇದರಿಂದ ಸಿಲಿಂಡರ್‌ಗಳನ್ನು ಸಾಗಾಟ ಮಾಡುವ ವೆಚ್ಚ ಉಳಿತಾಯವಾಗುತ್ತದೆ. ವಾಟ್ಸಪ್‌ನಲ್ಲೂ ಸಿಲಿಂಡರ್‌ಗಳನ್ನು ಪೂರೈಸುವ ವ್ಯವಸ್ಥೆಗಳನ್ನು ಮಾಡಲಿದ್ದೇವೆ. ಅಕ್ಕಿ ಬೇಳೆಗಳನ್ನು ಮೊಬೈಲ್ ಮೂಲಕವೇ ಜನರು ಡೌನ್‌ಲೋಡ್ ಮಾಡಬಹುದು. ಅಷ್ಟೇ ಅಲ್ಲ, ತಮಗೆ ಬಂದ ಅಕ್ಕಿ, ಬೇಳೆಗಳನ್ನು ಇತರರಿಗೂ ಶೇರ್ ಮಾಡಬಹುದು. ಈ ದೇಶದಲ್ಲಿ ರೈತರು ಬೆಳೆದ ಅಕ್ಕಿ, ಬೇಳೆಗಳನ್ನು ನಾವು ವಿದೇಶಕ್ಕೆ ಮಾರಿ, ಸರಕಾರಕ್ಕೆ ದುಡ್ಡು ಮಾಡಲಿದ್ದೇವೆ...’’

‘‘ಎಲ್ಲ ದುಡ್ಡು ಸರಕಾರದ ಖಜಾನೆ ಸೇರುತ್ತದೆಯಾದರೆ, ಆ ದುಡ್ಡಿನಿಂದ ಏನು ಮಾಡಲಿದ್ದೀರಿ ಸಾರ್?’’ ಕಾಸಿ ಕೇಳಿದ. ‘‘ನೋಡಿ...ಬುಲೆಟ್ ಟ್ರೇನ್ ಮಾಡಬೇಕು. ವಿಶ್ವದ ಗಮನ ನಮ್ಮ ಕಡೆ ಸೆಳೆಯಬೇಕು. ಹಾಗೆಯೇ ಅತಿ ಎತ್ತರ ಶಿವಾಜಿಯ ಪ್ರತಿಮೆ, ಅತಿ ಎತ್ತರ ಪಟೇಲ್ ಪ್ರತಿಮೆ...ಹೀಗೆ ಬೇರೆ ಬೇರೆ ಅತಿ ಎತ್ತರದ ಪ್ರತಿಮೆಗಳನ್ನು ಮಾಡಿ ವಿಶ್ವವನ್ನು ಬೆಕ್ಕಸಬೆರಗಾಗಿಸಬೇಕು. ಅದಕ್ಕಾಗಿ ನಮಗೆ ಅತ್ಯವಶ್ಯವಾಗಿ ದುಡ್ಡು ಬೇಕಾಗಿದೆ.....’’ ಮೋದಿ ಹೇಳಿದರು.

‘‘ಸಾರ್...ಈ ಬುಲೆಟ್ ಟ್ರೈನ್‌ನ್ನು ಡಿಜಿಟಲ್ ಮಾಡಿದರೆ ಹೇಗೆ? ಗುಜರಾತ್ ಅಭಿವೃದ್ಧಿಯಾಗಿದೆ ಎಂದು ದೇಶವನ್ನು ನಂಬಿಸಿದ ಹಾಗೆ, ಅತಿ ಎತ್ತರದ, ಅದ್ಭುತವಾದ ಎಲ್ಲವೂ ಭಾರತದಲ್ಲಿದೆ ಎಂದು ವಾಟ್ಸ್ ಆ್ಯಪ್‌ನಲ್ಲಿ ಹಬ್ಬಿಸಿದರೆ, ವಿಶ್ವ ಭಾರತ ಅಭಿವೃದ್ಧಿಯಾಗಿದೆ ಎಂದು ನಂಬುವುದಿಲ್ಲವೇ?’’ ಕಾಸಿ ಸಲಹೆ ನೀಡಿದ.

‘‘ಹೆಹೆಹೆ...ಹಾಗೆ ನಂಬುವುದಕ್ಕೆ ಅವರು ನನ್ನ ಭಕ್ತರೆ? ವಿಶ್ವದಲ್ಲೆಲ್ಲ ನನ್ನ ಭಕ್ತರು ಇದ್ದಿದ್ದರೆ ನಾನೂ ಕೆಲವೇ ನಿಮಿಷಗಳಲ್ಲಿ ಭಾರತವನ್ನು ವಿಶ್ವಪ್ರಸಿದ್ಧ ಮಾಡಿ ಬಿಡುತ್ತಿದ್ದೆ. ಆದರೇನು ಮಾಡುವುದು....ನಾನು ಏನೇ ಹೇಳಿದರೂ ಅದನ್ನು ಸುಳ್ಳು ಎಂದು ವಿರೋಧ ಪಕ್ಷಗಳು ಸಾಬೀತು ಮಾಡುತ್ತಿದ್ದಾರೆ. ಈ ಮೂಲಕ ದೇಶವನ್ನು ವಿಶ್ವಪ್ರಸಿದ್ಧಿ ಮಾಡುವುದಕ್ಕೆ ಅವರು ಅವಕಾಶ ನೀಡುತ್ತಿಲ್ಲ....’’ ಮೋದಿ ಕಣ್ಣೀರು ಸುರಿಸಿದರು.

‘‘ಸಾರ್...ಡೋಕಾಲಾದಲ್ಲಿ ಚೀನಾ....’’ ಎಂದು ಕಾಸಿ ಬಾಯಿ ತೆರೆದದ್ದೇ....ಮೋದಿಯವರು ‘‘ಪಾಕಿಸ್ತಾನ... ಟೆರರಿಸ್ಟ್...ಕಾಶ್ಮೀರ....’’ ಎಂದು ಅರಚಾಡತೊಡಗಿದರು. ಕಾಸಿ ಭಯಭೀತನಾಗಿ ತನ್ನ ಮೊಬೈಲ್ ಆನ್ ಮಾಡಿ, ಅದರಲ್ಲಿರುವ ಬುಲೆಟ್ ಟ್ರೈನ್ ಆ್ಯಪ್ ಡೌನ್ ಲೋಡ್ ಮಾಡಿ ಅದನ್ನೇರಿ, ಬೆಂಗಳೂರು ಸೇರಿಕೊಂಡ.

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News