ನೀವು ಬಳಸುವ ಇಂಟರ್ನೆಟ್ ಸೂಪರ್‌ಫಾಸ್ಟ್ ಕೇಬಲ್‌ಗಳ ಮೂಲಕ ಸಾಗರ ತಳದಿಂದ ಹಾದು ಬರುತ್ತದೆ, ಗೊತ್ತೇ....?

Update: 2017-10-08 10:23 GMT

ಒಂದು ಕಾಲದಲ್ಲಿ ಕೇವಲ ಉಳ್ಳವರ ಸ್ವತ್ತಾಗಿದ್ದ ಇಂಟರ್ನೆಟ್ ಅಥವಾ ಅಂತರ್ಜಾಲವು ಆಧುನಿಕ ತಂತ್ರಜ್ಞಾನದಿಂದಾಗಿ ಇಂದು ಎಲ್ಲರ ಮೊಬೈಲ್ ಫೋನ್‌ಗಳಲ್ಲಿ ಹರಿದಾಡುತ್ತಿದೆ, ಅದೂ ಕೈಗೆಟಕುವ ದರಗಳಲ್ಲಿ. ಆದರೆ ಇಂಟರ್ನೆಟ್ ಬಳಸುವ ಹೆಚ್ಚಿನವರಿಗೆ ಅದರ ಮೂಲ ಅಥವಾ ಅದು ಎಲ್ಲಿಂದ ಬರುತ್ತದೆ ಎನ್ನುವುದು ಗೊತ್ತಿಲ್ಲ.

ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ದೂರಸಂಪರ್ಕ ಮೂಲಸೌಕರ್ಯ ಕಂಪನಿ ಟೆಲ್ಷಿಯಸ್ ಅಟ್ಲಾಂಟಿಕ್ ಸಾಗರದಾದ್ಯಂತ ಹೊಸದಾಗಿ 6,598 ಕಿ.ಮೀ.ಉದ್ದದಷ್ಟು ಕೇಬಲ್‌ಗಳನ್ನು ಅಳವಡಿಸಿದ್ದು, ಇವು ಪ್ರತಿ ಸೆಕಂಡಿಗೆ 160 ಟೆರಾಬೈಟ್‌ಗಳಷ್ಟು ಡಾಟಾ ಪ್ರಸರಣದ ಸಾಮರ್ಥ್ಯವನ್ನು ಹೊಂದಿವೆ. ಈ ವೇಗದಲ್ಲಿ ಡಾಟಾ ವರ್ಗಾವಣೆ ಯಿಂದ 71 ಮಿಲಿಯನ್ ಹೈ-ಡೆಫಿನಿಷನ್ ವೀಡಿಯೊಗಳನ್ನು ಏಕಕಾಲದಲ್ಲಿ ವೀಕ್ಷಿಸ ಬಹುದಾಗಿದೆ.

ಮನೆಯ ಸಾಮಾನ್ಯ ವೆಬ್ ಸಂಪರ್ಕದ 16 ಮಿಲಿಯನ್ ಪಟ್ಟು ವೇಗದ ಅಂತರ್ಜಾಲವನ್ನು ಒದಗಿಸುವ ಅತ್ಯಧಿಕ ಸಾಮರ್ಥ್ಯದ ಸಾಗರತಳದ ಕೇಬಲ್ ‘ಮರಿಯಾ’ದ ಅಳವಡಿಕೆಯನ್ನು ಪೂರ್ಣಗೊಳಿಸಿರುವುದಾಗಿ ಕಂಪನಿಗಳು ಪ್ರಕಟಿಸಿವೆ.

6,598 ಕಿ.ಮೀ.ಪೈಕಿ ಹೆಚ್ಚಿನ ಮಾರ್ಗದಲ್ಲಿ ತಾಮ್ರದ ಕವಚ ಹೊಂದಿರುವ ಎಂಟು ಜೋಡಿ ಫೈಬರ್ ಆಪ್ಟಿಕಲ್ ಕೇಬಲ್‌ಗಳಿಂದ ನಿರ್ಮಿಸಲಾಗಿರುವ ಈ ಸೂಪರ್ ಫಾಸ್ಟ್ ಕೇಬಲ್ ಸಾಗರದ ತಳದಲ್ಲಿ ಮೈಚಾಚಿಕೊಂಡಿದೆ. ತೀರಕ್ಕೆ ಸಮೀಪವಿರುವ ಸಾಗರ ಪ್ರದೇಶದಲ್ಲಿ ಹಡಗುಗಳ ಸಂಚಾರದಿಂದ ಈ ಕೇಬಲ್‌ಗೆ ಯಾವುದೇ ಹಾನಿಯಾಗದಂತೆ ಇದನ್ನು ಸಾಗರ ತಳದ ನೆಲದಲ್ಲಿ ಹುಗಿಯಲಾಗಿದೆ.

ಮಹಾಸಾಗರದ ಮೇಲ್ಮೈನಿಂದ 17,000 ಅಡಿಗಳಷ್ಟು ಕೆಳಗಿರುವ ಕೇಬಲ್ ಅಮೆರಿಕದ ವರ್ಜೀನಿಯಾ ಬೀಚ್ ಮತ್ತು ಸ್ಪೇನ್‌ನ ಬಿಲ್ಬವೊ ನಗರದವರೆಗೆ ಚಾಚಿಕೊಂಡಿದ್ದು, 2018ರ ಆರಂಭದ ತಿಂಗಳುಗಳಲ್ಲಿ ಕಾರ್ಯಾರಂಭ ಮಾಡಲಿದೆ. ಕೇಬಲ್ ಅಳವಡಿಕೆ ಕಾಮಗಾರಿಯು ಸಾಮಾನ್ಯ ಅವಧಿಗಿಂತ ಮೂರು ಪಟ್ಟು ತ್ವರಿತವಾಗಿ, ಅಂದರೆ ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ತಂತ್ರಜ್ಞಾನ ದೈತ್ಯ ಸಂಸ್ಥೆಗಳು ತಮ್ಮದೇ ಆದ ಕೇಬಲ್‌ಗಳನ್ನು ಹೊಂದಿರಲು ಕಾರಣಗಳೂ ಇವೆ. ಅಮೆರಿಕದಿಂದ ಜಪಾನ್‌ವರೆಗೆ ಚಾಚಿರುವ ಎರಡು ಕೇಬಲ್‌ಗಳ ಅಳವಡಿಕೆಗೆ ಗೂಗಲ್ ಭಾರೀ ಹಣವನ್ನು ಹೂಡಿಕೆ ಮಾಡಿದೆ. ದಕ್ಷಿಣ ಅಮೆರಿಕ ಮತ್ತು ಹಲವಾರು ಏಷ್ಯನ್ ರಾಷ್ಟ್ರಗಳು ಈ ಕೇಬಲ್‌ಗಳ ವ್ಯಾಪ್ತಿಯಲ್ಲಿ ಬರುತ್ತವೆ.

ಮರಿಯ ಕೇಬಲ್ ಅಳವಡಿಕೆಯಿಂದಾಗಿ ಫೇಸ್‌ಬುಕ್ ಮತ್ತು ಮೈಕ್ರೋಸಾಫ್ಟ್‌ಗಳ ಹೂಡಿಕೆಗಳು ವಿಶ್ವಾದ್ಯಂಂತ ತ್ವರಿತವಾಗಿ ಪ್ರಸರಿಸಲು ಅವುಗಳಿಗೆ ಅಗತ್ಯವಾದ ವ್ಯಾಪಕ ಪ್ರಮಾಣದ ಡಾಟಾದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತವೆ.

ವಾಸ್ತವದಲ್ಲಿ ನಾವು ಬಳಸುವ ಶೇ.99ರಷ್ಟು ಡಾಟಾ ಮಹಾಸಾಗರಗಳ ಕೆಳಗಿನಿಂದ ಹಾದು ಬರುತ್ತದೆ. ಹಾಲಿ 420ಕ್ಕೂ ಅಧಿಕ ಜಲಾಂತರ್ಗಾಮಿ ಕೇಬಲ್‌ಗಳು ಸೇವೆಯನ್ನು ಒದಗಿಸುತ್ತಿದ್ದು, ಇವು ವಿಶ್ವಾದ್ಯಂತ 11 ಲಕ್ಷ ಕಿ.ಮೀ.ಗೂ ಅಧಿಕ ವಿಸ್ತೀರ್ಣದಲ್ಲಿ ಹರಡಿಕೊಂಡಿವೆ. ಮೊದಲ ಖಂಡಾಂತರ ಕೇಬಲ್‌ನ್ನು 1858ರಲ್ಲಿ ಅಳವಡಿಸಲಾಗಿದ್ದು, ಅದು ಅಯರ್ಲಂಡ್‌ನಿಂದ ನ್ಯೂಫೌಂಡ್ ಲ್ಯಾಂಡ್‌ವರೆಗೆ ಚಾಚಿಕೊಳ್ಳುವ ಮೂಲಕ ಇಂಗ್ಲಂಡ್ ಮತ್ತು ಕೆನಡಾಗಳ ನಡುವೆ ಟೆಲಿಗ್ರಾಫ್ ಸಂವಹನವನ್ನು ಸಾಧ್ಯವಾಗಿಸಿತ್ತು.

‘ಫಾಸ್ಟರ್’ ಎಂದು ಕರೆಯಲಾಗುವ ವಿಶ್ವದ ಅತ್ಯಧಿಕ ಸಾಮರ್ಥ್ಯದ ಸಾಗರತಳದ ಇಂಟರ್ನೆಟ್ ಕೇಬಲ್ ಅಮೆರಿಕದ ಒರೆಗಾಂವ್ ಅನ್ನು ಜಪಾನ್ ಮತ್ತು ತೈವಾನ್ ಜೊತೆ ಸಂಪರ್ಕಿಸುವ 9012 ಕಿ.ಮೀ.ನಷ್ಟು ಅಂತರವನ್ನು ಹಾದುಹೋಗಿದೆ. ಗೂಗಲ್ ಮತ್ತು ಇತರ ದೂರಸಂಪರ್ಕಗಳ ಒಕ್ಕೂಟವು ಈ ಕೇಬಲ್‌ನ ಒಡೆತನವನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News