ಗ್ಯಾಲಕ್ಸಿ ನೋಟ್ 7ಗೆ ಆದ ಗತಿಯೇ ಆ್ಯಪಲ್ ಐಫೋನ್ 8ಕ್ಕೂ ಬರಲಿದೆಯೇ?

Update: 2017-10-08 12:12 GMT

ಇತ್ತೀಚಿಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಆ್ಯಪಲ್ ಐಫೋನ್ 8 ಮತ್ತು 8 ಪ್ಲಸ್ ಮೊಬೈಲ್ ಫೋನ್‌ಗಳ ಬ್ಯಾಟರಿಗಳು ಉಬ್ಬಿಕೊಂಡು ಫೋನ್‌ಗಳು ಒಡೆದು ಹೋದ ಕನಿಷ್ಠ ಆರು ಪ್ರಕರಣಗಳು ವರದಿಯಾಗಿದ್ದು, ಇವು ಕಳೆದ ವರ್ಷದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಪೋನ್‌ನ ವೈಫಲ್ಯವನ್ನು ನೆನಪಿಸುತ್ತಿವೆ.

ಐಫೋನ್ 8ರ ಮೊದಲ ಪ್ರಕರಣ ತೈವಾನ್‌ನಿಂದ ವರದಿಯಾಗಿತ್ತು. ಮಹಿಳೆಯೋರ್ವಳು ತನ್ನ ಐಫೋನ್‌ನ್ನು ಚಾರ್ಜಿಗಿಟ್ಟಾಗ ಅದು ಉಬ್ಬಿಕೊಂಡಿದ್ದನ್ನು ಗಮನಿಸಿದ್ದಳು.

64ಜಿಬಿಯ ‘ರೋಸ್ ಗೋಲ್ಡ್’ ಐಫೋನ್ 8 ಪ್ಲಸ್‌ನ್ನು ಖರೀದಿಸಿದ್ದ ಆಕೆ ಕಂಪನಿಯು ಒದಗಿಸಿದ್ದ ಕೇಬಲ್ ಮತ್ತು ಅಡಾಪ್ಟರ್ ಬಳಸಿಯೇ ಅದನ್ನು ಚಾರ್ಜಿಗಿಟ್ಟಿದ್ದಳು. ಸುಮಾರು ಮೂರು ನಿಮಿಷಗಳ ಬಳಿಕ ಫೋನ್‌ನ ಎದುರಿನ ಪ್ಯಾನೆಲ್ ಉಬ್ಬತೊಡಗಿತ್ತು ಮತ್ತು ಅಂತಿಮವಾಗಿ ಸಾಧನದಿಂದ ಸಂಪೂರ್ಣವಾಗಿ ಮೇಲಕ್ಕೆದ್ದು ಬಂದಿತ್ತು. ಇದಾದ ಬಳಿಕ ಜಪಾನ್, ಚೀನಾ, ಕೆನಡಾ ಮತ್ತು ಗ್ರೀಸ್‌ಗಳಿಂದಲೂ ಇಂತಹ ಘಟನೆಗಳು ವರದಿಯಾಗಿವೆ. ಮಾಧ್ಯಮಗಳ ವರದಿಗಳಂತೆ ಕನಿಷ್ಠ ಐದು ದೇಶಗಳಲ್ಲಿ ಐಫೋನ್ 8 ಮತ್ತು 8 ಪ್ಲಸ್‌ನ ಬ್ಯಾಟರಿಗಳು ಉಬ್ಬಿಕೊಂಡ ಕನಿಷ್ಠ ಆರು ಪ್ರಕರಣಗಳು ನಡೆದಿವೆ.

ನಮಗೆ ಈ ಬಗ್ಗೆ ಗೊತ್ತಾಗಿದೆ ಮತ್ತು ನಾವು ಪರಿಶೀಲಿಸುತ್ತಿದ್ದೇವೆ ಎಂದು ಆ್ಯಪಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈವರೆಗೂ ಹೊಸ ಐಫೋನ್‌ಗಳಲ್ಲಿ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು ವರದಿಯಾಗಿಲ್ಲ, ಆದರೆ ಅವು ಎರಡು ಭಾಗಗಳಾಗಿ ವಿಭಜನೆಗೊಂಡು ಸ್ಮಾರ್ಟ್‌ಫೋನ್‌ನ ಒಳಭಾಗವೆಲ್ಲ ಕಾಣುತ್ತಿತ್ತು.

ಹೊಚ್ಚ ಹೊಸ ಬ್ಯಾಟರಿಯು ಸಾಮಾನ್ಯವಾಗಿ ಉಬ್ಬುವುದಿಲ್ಲ. ಈ ಬ್ಯಾಟರಿಯಲ್ಲಿ ಯಾವುದೋ ಮೂಲಭೂತ ದೋಷವಿರುವ ಸಾಧ್ಯತೆಯಿದೆ ಎನ್ನುತ್ತಾರೆ ಕೇರ್ನ್ ಎನರ್ಜಿ ರೀಸರ್ಚ್ ಅಡ್ವೈಸರ್ಸ್‌ನ ಆಡಳಿತ ನಿರ್ದೇಶಕ ಸ್ಯಾಮ್ ಜಾಫೆ.

ಈ ದೋಷ ಕೆಲವೇ ಬ್ಯಾಟರಿಗಳಲ್ಲಿ ಕಾಣಿಸಿರಬಹುದು ಮತ್ತು ಸಮಗ್ರ ಉತ್ಪಾದನೆಯೇ ದೋಷಪೂರ್ಣ ಬ್ಯಾಟರಿಗಳೊಂದಿಗೆ ಕೂಡಿರದಿರಲಿ ಎಂದು ಆ್ಯಪಲ್ ದೇವರಲ್ಲಿ ಪ್ರಾರ್ಥಿಸುತ್ತಿರಬಹುದು. ಹಾಗೇನಾದರೂ ಆದರೆ ಈವರೆಗೆ ಮಾರಾಟವಾಗಿರುವ ಅಷ್ಟೂ ಐಫೋನ್ 8 ಮತ್ತು 8 ಪ್ಲಸ್‌ಗಳನ್ನು ಅದು ವಾಪಸ್ ತೆಗೆದುಕೊಳ್ಳ ಬೇಕಾಗುತ್ತದೆ ಮತ್ತು ಇದರೊಂದಿಗೆ ಅದು ಈ ಎಲ್ಲ ವರ್ಷಗಳ ಕಾಲ ಐಫೋನ್‌ಗಳ ಸುತ್ತ ನಿರ್ಮಿಸಿರುವ ವರ್ಚಸ್ಸು ಸಂಪೂರ್ಣವಾಗಿ ಹಾಳಾಗುತ್ತದೆ ಎನ್ನುತ್ತವೆ ವರದಿಗಳು.

ಕಳೆದ ವರ್ಷ 59,000 ರೂ. ಮೌಲ್ಯದ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 7 ಫೋನ್‌ಗಳು ಸ್ಫೋಟಗೊಂಡಿದ್ದವು. ವಿಶ್ವಾದ್ಯಂತ ಇಂತಹ ಹಲವಾರು ಘಟನೆಗಳು ವರದಿಯಾಗಿದ್ದವು. ಅಮೆರಿಕದಲ್ಲಿಯ ಶೇ.90ರಷ್ಟು ಗ್ರಾಹಕರು ತಮ್ಮ ಪೋನ್ ಅತಿಯಾಗಿ ಬಿಸಿಯಾಗುತ್ತಿದೆ ಎಂದು ದೂರಿಕೊಂಡಿದ್ದರು. ವಿವಾದಗಳ ನಡುವೆಯೇ ಸ್ಯಾಮ್ಸಂಗ್ ಹೊಸ ಪೋನ್ ಗಳನ್ನು ಶೀಘ್ರ ಒದಗಿಸುವ ಭರವಸೆಯೊಂದಿಗೆ ವಿಶ್ವಾದ್ಯಂತ ಮಾರಾಟವಾಗಿದ್ದ 2.5 ಮಿಲಿಯನ್ ಗ್ಯಾಲಕ್ಸಿ ನೋಟ್ 7 ಫೋನ್‌ಗಳನ್ನು ವಾಪಸ್ ಪಡೆದಿತ್ತು. ಇದರಿಂದಾಗಿ ಸ್ಯಾಮ್ಸಂಗ್ ಸುಮಾರು ಐದು ಶತಕೋಟಿ ಡಾ.ಗಳಷ್ಟು ನಷ್ಟವನ್ನು ಅನುಭವಿಸಿತ್ತು.

ಇತ್ತ ಆ್ಯಪಲ್ ‘ದೂರುಗಳನ್ನು ತಾನಿನ್ನೂ ಪರಿಶೀಲಿಸುತ್ತಿದ್ದೇನೆ’ ಎಂದು ಹೇಳುತ್ತಲೇ ಇದೆ. ಗ್ಯಾಲಕ್ಸಿ ನೋಟ್ 7ಕ್ಕೆ ಆದ ಗತಿಯೇ ಐಫೋನ್ 8 ಮತ್ತು 8 ಪ್ಲಸ್‌ಗೂ ಬರದಿರಲಿ ಎಂದು ಆ್ಯಪಲ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅವರ ಈ ಹಾರೈಕೆ ಈಡೇರುವುದೇ ಎನ್ನುವುದನ್ನು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News