ಏರ್‌ಇಂಡಿಯಾ ಖಾಸಗೀಕರಣದಿಂದ ಹಜ್ ವಿಮಾನಯಾನ ನಿರ್ವಹಣೆಗೆ ತೊಂದರೆ: ಸಮಿತಿ ವರದಿ

Update: 2017-10-08 14:49 GMT

ಹೊಸದಿಲ್ಲಿ, ಅ.8: ಏರ್‌ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಿಸಿದರೆ ಹಜ್ ವಿಮಾನಯಾನ ಕಾರ್ಯನಿರ್ವಹಣೆಗೆ ಗಂಭೀರ ಪರಿಣಾಮವಾಗಬಹುದು ಎಂದು ಕೇಂದ್ರ ಸರಕಾರ ನೇಮಿಸಿದ ಸಮಿತಿ ತಿಳಿಸಿದೆ. ಒಂದು ವೇಳೆ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಮುಂದುವರಿದರೆ ಈ ಬಗ್ಗೆ ಸಲ್ಲಿಸಬೇಕಾದ ಪ್ರತಿಕ್ರಿಯೆಯನ್ನು ಸಿದ್ಧವಾಗಿರಿಸುವಂತೆ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲಹೆ ನೀಡಿದೆ. ಹಜ್ ಕಾರ್ಯನೀತಿ 2018-22ರ ಬಗ್ಗೆ ಸಲಹೆ ನೀಡಲು ನೇಮಿಸಲಾಗಿರುವ ಸಮಿತಿಯು , ಸೌದಿ ಅರೆಬಿಯದ ಸರಕಾರದ ಜೊತೆ ಸಮಾಲೋಚನೆ ನಡೆಸಿ ಹಜ್ ವಿಮಾನಯಾನ ವ್ಯವಸ್ಥೆಯನ್ನು ನಿರ್ವಹಿಸಲು ಜಾಗತಿಕ ಟೆಂಡರ್ ಕರೆಯುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

  ಹಜ್ ಯಾತ್ರೆಯ ಸಂದರ್ಭ ಯಾತ್ರಾರ್ಥಿಗಳನ್ನು ಕರೆದೊಯ್ಯುವ ವಿಮಾನವು ವಾಪಾಸು ಬರುವಾಗ ಖಾಲಿಯಾಗಿ ಬರಬೇಕಾಗುತ್ತದೆ ಎಂದು ಸಮಿತಿಯ ಸಂಯೋಜಕರಾಗಿರುವ ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಇಂತಹ ವಿಮಾನಗಳನ್ನು ವಾಪಾಸು ಬರುವಾಗ ವಾಣಿಜ್ಯಕ ಬಳಕೆಗೆ ಬಸುವ ಸಾಧ್ಯತೆಯ ಕುರಿತು ಅಲ್ಪಸಂಖ್ಯಾತರ ವ್ಯವಹಾರ ಇಲಾಖೆ ಹಾಗೂ ನಾಗರಿಕ ವಿಮಾನಯಾನ ಇಲಾಖೆ ಪರಿಶೀಲಿಸಬೇಕು ಎಂದು ಸಮಿತಿ ತಿಳಿಸಿದೆ.

 ಅಲ್ಲದೆ ಹಜ್ ಯಾತ್ರಾರ್ಥಿಗಳಿಗೆ ಸರಬರಾಜು ಮಾಡುವ ಆಹಾರದಲ್ಲಿ ಮಸಾಲೆ ಬೆರೆತಿರಬಾರದು ಹಾಗೂ ಯಾತ್ರಾರ್ಥಿಗಳು ಯಾವ ಪ್ರದೇಶದವರು ಎಂಬುದನ್ನು ಪರಿಗಣಿಸಿ ಆಯಾ ಪ್ರದೇಶದ ಜನರು ಬಳಸುವ ಖಾದ್ಯವನ್ನು ಸರಬರಾಜು ಮಾಡಬೇಕು. ಇವನ್ನು ಆರೋಗ್ಯಕರ ರೀತಿಯಲ್ಲಿ ತಯಾರಿಸಿ ಪ್ಯಾಕ್ ಮಾಡಿರಬೇಕು. ಅಲ್ಲದೆ ಅಧಿಕಾರಿಗಳು ಆಗಿಂದಾಗ್ಗೆ ಈ ಖಾದ್ಯದ ಮಾದರಿ ಪರಿಶೀಲನೆ ನಡೆಸುತ್ತಿರಬೇಕು.ಯಾತ್ರಾರ್ಥಿಗಳು ಜಿದ್ದಾ ಅಥವಾ ಮದೀನಾದಲ್ಲಿ ಇಳಿದ ಬಳಿಕ ಅವರಿಗೆ ಹೆಚ್ಚುವರಿ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲಿಯನ್ನು ನೀಡಬೇಕು ಎಂದು ಸಮಿತಿ ಸಲಹೆ ನೀಡಿದ್ದು ತನ್ನ ವರದಿಯನ್ನು ಶನಿವಾರ ಅಲ್ಪಸಂಖ್ಯಾತರ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಗೆ ಮುಂಬೈಯಲ್ಲಿ ಸಲ್ಲಿಸಿದೆ. ಭಾರತದಿಂದ ಪ್ರತೀ ವರ್ಷ ಸುಮಾರು 1.70 ಲಕ್ಷ ಯಾತ್ರಾರ್ಥಿಗಳು ಹಜ್ ಯಾತ್ರೆಗೆ ತೆರಳುತ್ತಿದ್ದು ಮುಂದಿನ ವರ್ಷದಿಂದ ವಿಮಾನ ಪ್ರಯಾಣದ ಹೊರತಾಗಿ, ಹಡಗಿನ ಮೂಲಕವೂ ಯಾತ್ರಾರ್ಥಿಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಸರಕಾರ ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News