ನೇತ್ರರಕ್ಷಣೆ ಕ್ಷೇತ್ರ: ರಾಷ್ಟ್ರೀಯ ಕಾರ್ಯನೀತಿಗೆ ಚಿಂತನೆ
ಹೊಸದಿಲ್ಲಿ, ಅ.8: ನೇತ್ರತಜ್ಞರೂ ಸೇರಿದಂತೆ ನೇತ್ರರಕ್ಷಣೆ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ತರಬೇತಿ ನೀಡಿ ಅವರ ಕಾರ್ಯನಿರ್ವಹಣೆಯನ್ನು ಕ್ರಮಬದ್ಧಗೊಳಿಸುವ ಕುರಿತು ಒಂದು ರಾಷ್ಟ್ರೀಯ ಕಾರ್ಯನೀತಿಯನ್ನು ರೂಪಿಸುವ ಕುರಿತು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನೇತ್ರತಜ್ಞರಿಗೆ ನೀಡಲಾಗುವ ತರಬೇತಿಯಲ್ಲಿ ಏಕರೂಪತೆ ಇಲ್ಲ ಹಾಗೂ ನೇತ್ರರಕ್ಷಣೆ ಕ್ಷೇತ್ರ ಕ್ರಮಬದ್ಧವಾಗಿಲ್ಲ. ಸಾವಿರಾರು ಅನಿಯಂತ್ರಿತ ನೇತ್ರತಜ್ಞರು ದೃಷ್ಟಿ ಪರೀಕ್ಷೆ, ರೋಗಲಕ್ಷಣ ನಿರ್ಧರಿಸುವುದು, ಚಿಕಿತ್ಸೆ ನೀಡುವುದು ಇತ್ಯಾದಿ ಪ್ರಾಥಮಿಕ ನೇತ್ರ ಚಿಕಿತ್ಸೆ ಒದಗಿಸುತ್ತಿದ್ದಾರೆ. ದೇಶದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ನೋಂದಾಯಿಸಲ್ಪಡದ ಅಥವಾ ನೇತ್ರಶಾಸ್ತ್ರದಲ್ಲಿ ಪೂರ್ಣಪ್ರಮಾಣದ ಪದವಿ ಪಡೆದಿರದ ಸುಮಾರು 90,000 ನೇತ್ರತಜ್ಞರಿದ್ದಾರೆ ಎಂದು ಸರಕಾರ ತಿಳಿಸಿದೆ.
ನೇತ್ರತಜ್ಞರು, ಕನ್ನಡಕ ವ್ಯಾಪಾರಿಗಳು, ನೇತ್ರತಜ್ಞರ ಸಹಾಯಕರು ಹಾಗೂ ಕಣ್ಣಿನ ರಕ್ಷಣೆ ವಿಷಯಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿರುವವರ ಸಭೆಯೊಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ(ಅ.9ರಂದು) ಕರೆದಿದೆ. ವೈದ್ಯಕೀಯ ಅರ್ಹತೆ ಪಡೆಯದೆ ನೇತ್ರ ಸುರಕ್ಷೆ ವೃತ್ತಿ ನಿರ್ವಹಿಸುವವರ ಕೌಶಲ್ಯ ಹಾಗೂ ಸ್ಪರ್ಧಾತ್ಮಕತೆಯಲ್ಲಿ ಇರುವ ವ್ಯತ್ಯಾಸವನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.