ಸರಕಾರಿ ಬಿಲ್ ಪಾವತಿಸದವರನ್ನು ಚುನಾವಣೆಯಿಂದ ನಿಷೇಧಿಸಬೇಕೆಂಬ ಆಯೋಗದ ಪ್ರಸ್ತಾವಕ್ಕೆ ನಕಾರ
Update: 2017-10-08 20:24 IST
ಹೊಸದಿಲ್ಲಿ,ಅ.8: ಸರಕಾರಿ ಮನೆ ಬಾಡಿಗೆ,ವಿದ್ಯುತ್ ಶುಲ್ಕದಂತಹ ಬಿಲ್‌ಗಳನ್ನು ಬಾಕಿಯುಳಿಸಿಕೊಂಡಿರುವ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂಬ ಚುನಾವಣಾ ಆಯೋಗದ ಪ್ರಸ್ತಾವವನ್ನು ಸರಕಾರವು ತಿರಸ್ಕರಿಸಿದೆ.
ಸಾರ್ವಜನಿಕ ಸೌಲಭ್ಯಗಳ ಬಳಕೆಯ ಶುಲ್ಕವನ್ನು ಪಾವತಿಸುವಲ್ಲಿ ವೈಫಲ್ಯವನ್ನು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧೆಗೆ ಅನರ್ಹತೆಯನ್ನಾಗಿಸಲು ಚುನಾವಣಾ ಕಾನೂನುಗಳಲ್ಲಿ ತಿದ್ದುಪಡಿಗೆ ಆಗ್ರಹಿಸಿ ಆಯೋಗವು ಕಾನೂನು ಸಚಿವಾಲಯಕ್ಕೆ ಪತ್ರವನ್ನು ಬರೆದಿತ್ತು.
ಯಾವುದೇ ಬಾಕಿಯಿಲ್ಲ ಎಂಬ ಪ್ರಮಾಣಪತ್ರ ಅಥವಾ ನಿರಾಕ್ಷೇಪಣಾ ಪತ್ರವನ್ನು ನೀಡುವ ಅಧಿಕಾರಿ ಪಕ್ಷಪಾತದ ಧೋರಣೆ ಹೊಂದಿರಬಹುದು ಮತ್ತು ಅಗತ್ಯವಿರುವ ದಾಖಲೆಗಳನ್ನು ನೀಡದಿರಬಹುದು. ಹೀಗಾಗಿ ಅಭ್ಯರ್ಥಿಗಳ ನಿಷೇಧ ಅಪೇಕ್ಷಣೀಯವಲ್ಲ ಎಂದು ಕಾನೂನು ಸಚಿವಾಲಯವು ಆಯೋಗಕ್ಕೆ ನೀಡಿರುವ ಉತ್ತರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.