ಆರ್.ಕೆ.ಯ ಹೃದಯಕ್ಕೆ ಬಿದ್ದ ಬೆಂಕಿ

Update: 2017-10-09 18:56 GMT

ಮುಂಬೈ ಮಹಾನಗರದ ಚೆಂಬೂರ್‌ನಲ್ಲಿರುವ ಆರ್.ಕೆ. ಸ್ಟುಡಿಯೋ ಕೇವಲ ಒಂದು ಫಿಲ್ಮ್ ಸ್ಟುಡಿಯೋ ಮಾತ್ರವಲ್ಲ. ಬಾಲಿವುಡ್‌ನ ಗ್ರೇಟೆಸ್ಟ್ ಶೋಮ್ಯಾನ್ ರಾಜ್ ಕಪೂರ್‌ರ ಒಂದು ಕನಸು ಕೂಡಾ ಆಗಿತ್ತು. ಈ ಕನಸಿನ ಮೂಲಕ ರಾಜ್‌ಕಪೂರ್ ಪರದೆಯಲ್ಲಿ ಸುಂದರ ಕತೆಗಳನ್ನು ನೀಡಿ ದರು. ಅದಕ್ಕೆ ಸಾಕ್ಷಿಗಳು ಈ ಸ್ಟುಡಿಯೋದಲ್ಲಿವೆ. ಇದನ್ನು ವೀಕ್ಷಿಸ ಲೆಂದೇ ಪ್ರವಾಸಿಗರೂ ಬಹಳ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿರುತ್ತಾರೆ. ಇತ್ತೀಚೆಗೆ (6, ಸೆಪ್ಟಂಬರ್ 2017) ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ ಕಾಣಿಸಿತು. ಈ ಸುದ್ದಿ ಕೇಳಿ ಜನ ದಂಗಾಗಿ ಬಿಟ್ಟರು. ಫಿಲ್ಮ್ ಇತಿಹಾಸದ ದಂತಕತೆಯಾಗಿರುವ ಈ ಸ್ಟುಡಿಯೋಗೆ ಬೆಂಕಿ ಬಿತ್ತು ಅಂದರೆ ಜನಕ್ಕೆ ನಂಬಲಾಗಲಿಲ್ಲ. ಕಪೂರ್ ಕುಟುಂಬವಂತೂ ಈ ಆಘಾತದಿಂದ ಇನ್ನೂ ಚೇತರಿಸಿಲ್ಲ.

ಈ ಸ್ಟುಡಿಯೋದ ಪ್ರತಿಷ್ಠಿತ ಸ್ಟೇಜ್ ನಂಬರ್ 1ರಲ್ಲಿ ನಿರ್ಮಿಸಲಾದ ಟಿ.ವಿ. ಸೀರಿಯಲ್ ಶೋ ‘ಸೂಪರ್ ಡ್ಯಾನ್ಸರ್ 2’ರ ಸೆಟ್‌ನಲ್ಲಿ ಕಾಣಿಸಿದ ಈ ಬೆಂಕಿಯಲ್ಲಿ ಆರ್.ಕೆ.ಬ್ಯಾನರ್‌ನ ಸಿನೆಮಾಗಳ ನಾಯಕಿಯರಾದ ನರ್ಗೀಸ್‌ರಿಂದ ಹಿಡಿದು ಐಶ್ವರ್ಯ ರೈ ತನಕ ಬಳಸಿದ ಕಾಸ್ಟ್ಯೂಮ್‌ಗಳು, ಮೇರಾ ನಾಮ್ ಜೋಕರ್‌ನ ರಾಜ್‌ಕಪೂರ್‌ರ ಮುಖವಾಡ, ಕಾಸ್ಟ್ಯೂಮ್‌ಗಳು.... ಹೀಗೆ ಐತಿಹಾಸಿಕ ಗುರುತುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ.

ಆರ್.ಕೆ. ಸ್ಟುಡಿಯೋವನ್ನು 1948ರಲ್ಲಿ ರಾಜ್ ಕಪೂರ್ ನಿರ್ಮಿಸಿದ್ದರು. ಕೆಲ ಸಮಯದ ಹಿಂದೆ ನಾನು, ಜೋಗಿ, ಆಹೋರಾತ್ರ ಮೊದಲಾದವರು ಸಾಹಿತಿ ಡಾ.ವ್ಯಾಸರಾವ್ ನಿಂಜೂರು ಮನೆಗೆ ಹೋಗಿದ್ದವರು ಅಲ್ಲಿಂದ ಬರುವಾಗ ಆರ್.ಕೆ.ಸ್ಟುಡಿಯೋಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಅಲ್ಲಿ ಮೊದಲೇ ತಿಳಿಸಿದ್ದರಿಂದ ರಿಷಿ ಕಪೂರ್, ರಣಧೀರ್ ಕಪೂರ್‌ರನ್ನು ಮಾತಾನಾಡಿಸುವ ಅವಕಾಶವೂ ಸಿಕ್ಕಿತ್ತು. ರಾಜ್‌ಕಪೂರ್ ಸಿನೆಮಾಗಳ ಕಾಸ್ಟ್ಯೂಮ್‌ಗಳನ್ನೂ ಕಾಣುವ ಭಾಗ್ಯ ಸಿಕ್ಕಿತ್ತು. ಪುಟ್ಟಣ್ಣ ಕಣಗಾಲ್‌ರನ್ನು ರಿಷಿ ನೆನಪಿಸಿಕೊಂಡರು. ಆರ್. ಕೆ. ಸ್ಟುಡಿಯೋದ ವತಿಯಿಂದ ನಡೆಯುವ ಹೋಳಿಹಬ್ಬ ಇತ್ತೀಚಿನ ವರ್ಷಗಳಲ್ಲಿ ನಿಲ್ಲಿಸಿದ್ದನ್ನೂ ನೆನಪಿಸಿದ ರಿಷಿಕಪೂರ್, ಕೊನೆ ಕೊನೆಯ ವರ್ಷಗಳಲ್ಲಿ ಬಂದವರಲ್ಲಿ ಕೆಲವರು ವಸ್ತುಗಳನ್ನು ಮನೆಗೂ ಒಯ್ಯುತ್ತಿದ್ದುದನ್ನು ಹೇಳಿ ‘‘ಜನ ಈಗ ಬದಲಾಗಿದ್ದಾರೆ’’ ಅಂದಿದ್ದರು.

ಬೆಂಕಿ ಆರ್. ಕೆ. ಸ್ಟುಡಿಯೋವನ್ನು ಮತ್ತೆ ನೆನಪಿಸಿತು. ಮೊನ್ನೆಯ ಘಟನೆ ನಡೆದಾಗ ಬಹುದಿನಗಳಿಂದ ಬೆಂಕಿಯ ಕಾರಣವೇ ತಿಳಿಯಲು ಒದ್ದಾಡಿದ್ದರು. ರಾಜ್ ಕಪೂರ್ ಪುತ್ರ ರಿಷಿ ಕಪೂರ್ ಟ್ವೀಟ್ ಮಾಡುತ್ತಾ ‘‘16 ಸೆಪ್ಟಂಬರ್ 2017ರ ಭಯಾನಕ ಬೆಂಕಿಯಲ್ಲಿ ನೆನಪುಗಳು ಬೂದಿಯಾಗಿವೆ. ಇದರ ಗುರುತು ಸದಾ ಇರುತ್ತದೆ. ಆದರೆ ಇನ್ನು ಇದನ್ನು ಸ್ಟೇಟ್ ಆಫ್‌ದ ಆರ್ಟ್ ಸ್ಟುಡಿಯೋವನ್ನಾಗಿ ರೂಪಿಸಲಾಗುವುದು. ಬೆಂಕಿಯ ಕೆನ್ನಾಲಿಗೆಗಳು ಮೊನ್ನೆ ಈ ಸ್ಟುಡಿಯೋದ ಮುಖ್ಯ ಶೂಟಿಂಗ್ ಏರಿಯಾವನ್ನು ಸುಟ್ಟು ಹಾಕಿದೆ’’ ಎಂದಿದ್ದರು.

ಮುಂಬೈಯ ಟಿವಿ ಶೋ ಸೆಟ್‌ಗಳಲ್ಲಿ ಈ ಹಿಂದೆಯೂ ಇಂತಹ ಬೆಂಕಿ ಅವಘಡಗಳು ಹಲವು ಸಲ ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ‘ಬೆಹದ್’ ಧಾರಾವಾಹಿಯ ಸೆಟ್‌ನಲ್ಲಿಯೂ ಬೆಂಕಿ ಕಾಣಿಸಿತ್ತು. ಇದಕ್ಕಿಂತ ಹಿಂದೆ ‘ಕಾಮಿಡಿ ನೈಟ್ಸ್ ವಿದ್ ಕಪಿಲ್’ ಸೆಟ್‌ನಲ್ಲೂ ಬೆಂಕಿ ಕಾಣಿಸಿತ್ತು. ‘ಯೆ ಹೈ ಮೊಹಬ್ಬತೇಂ’, ‘ಜಮಾ ರಾಜಾ’, ‘ದೇವೋಂ ಕೆ ದೇವ್’, ‘ಮಹಾದೇವ್’....ಇಂತಹ ಶೋಗಳ ಸೆಟ್‌ನಲ್ಲೂ ಬೆಂಕಿ ಹತ್ತಿಕೊಂಡದ್ದಿದೆ. ಆಗಾಗ ಟಿವಿ ಶೋಗಳ ಸೆಟ್‌ನಲ್ಲಿ ಬೆಂಕಿ ದುರ್ಘಟನೆಗಳು ಯಾಕೆ ಕಾಣಿಸಿಕೊಳ್ಳುತ್ತವೆ? ಇದಕ್ಕೆಲ್ಲಾ ಸುರಕ್ಷಾ ನಿಯಮಗಳನ್ನು ನಿರ್ಲಕ್ಷಿಸುತ್ತಿರುವುದೇ ಕಾರಣವೇ?.

ಭಾರತೀಯ ಸಿನೆಮಾದ ನೂರು ವರ್ಷ 2013ಕ್ಕೆ ಪೂರ್ಣಗೊಂಡಿದೆ. ಇದೀಗ 104 ವರ್ಷಗಳ ಪಯಣ ನಮ್ಮ ಸಿನೆಮಾ ಜಗತ್ತಿನದ್ದು. ಇಂದು ‘ಬಾಲಿವುಡ್’ ಹೆಸರಲ್ಲಿ ಸಿನೆಮಾ ಬಝಾರ್ ಪ್ರಖ್ಯಾತಿಗೊಂಡಿದೆ. ವಾರ್ಷಿಕ ಸುಮಾರು 190 ಕೋಟಿ ಡಾಲರ್‌ಗೂ ಹೆಚ್ಚಿನ ಕಾರುಬಾರು ಬಾಲಿವುಡ್‌ನಲ್ಲಿದೆ.

ಭಾರತದ ಮೊದಲ ಫೀಚರ್ ಫಿಲ್ಮ್ ‘ರಾಜಾ ಹರಿಶ್ಚಂದ್ರ’ ಆಗಿತ್ತು. ಇದು ಮೂಕಿ ಸಿನೆಮಾ. ಪೌರಾಣಿಕ ಕತೆಯನ್ನು ಆಧರಿಸಿತ್ತು. ಈ ಬಾಲಿವುಡ್‌ನ್ನು ಹೊಸ ದಿಕ್ಕಿನತ್ತ ಒಯ್ಯುವಲ್ಲಿನ ಶ್ರೇಯಸ್ಸು ಕಲಾವಿದರ ಜೊತೆ ಇಲ್ಲಿನ ಸ್ಟುಡಿಯೋಗಳಿಗೂ ಸಲ್ಲಬೇಕು. ಒಂದೊಮ್ಮೆ ಮುಂಬೈಯ ವಿವಿಧ ಸಿನೆಮಾ ಸ್ಟುಡಿಯೋಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿದ್ದವು. ಆ ದಿನಗಳಲ್ಲಿ ಮುಂಬೈಗೆ ಬರುವ ಪ್ರವಾಸಿಗರಿಗೆ ತಾವು ಯಾವುದಾದರೊಂದು ಸಿನೆಮಾದ ಶೂಟಿಂಗ್ ನೋಡಬೇಕು ಎಂದಿರುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಸ್ಟುಡಿಯೋಗಳು ತಮ್ಮನ್ನು ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಅಲ್ಲದೆ ಇವುಗಳನ್ನು ವ್ಯವಸ್ಥಿತವಾಗಿ ಕಾಪಾಡುವಲ್ಲಿಯೂ ಖರ್ಚು ಹೆಚ್ಚಾಗುತ್ತಾ ಬಂತು. ಇನ್ನೊಂದೆಡೆ ನಿರ್ಮಾಪಕ ನಿರ್ದೇಶಕರಿಗೆ ಪಾರಂಪರಿಕ ಸ್ಟುಡಿಯೋಗಳಲ್ಲಿ ಶೂಟಿಂಗ್ ಮಾಡುವುದು ಕೂಡಾ ಅಪ್ರಸ್ತುತ ಎಂದೆನಿಸತೊಡಗಿತು. ಮತ್ತೊಂದೆಡೆ ರಿಯಲ್ ಎಸ್ಟೇಟ್‌ನ ಹೆಚ್ಚಿದ ಬೇಡಿಕೆ ಕೂಡಾ ಸ್ಟುಡಿಯೋಗಳ ಜಾಗ ಮಾರಾಟದತ್ತ ಒಲವು ತೋರಿಸುವಂತಾಯಿತು.... ಈ ರೀತಿ ಒಂದರ ಹಿಂದೆ ಒಂದರಂತೆ ಕಾಣುವ ಈ ಎಲ್ಲ ಕಾರಣಗಳಿಂದ ಸಿನೆಮಾ ಸ್ಟುಡಿಯೋಗಳು ಇತಿಹಾಸದ ಭಾಗವಾಗುತ್ತಾ ಬರತೊಡಗಿತು. ಇಂತಹ ಸ್ಥಿತಿಯಲ್ಲೂ ಕೆಲವು ಸ್ಟುಡಿಯೋಗಳು ತಮ್ಮನ್ನು ಬದುಕಿಸಿಕೊಳ್ಳಲು ಪ್ರಯತ್ನಿಸುತ್ತಾ ಬಂದಿವೆ. ಇವುಗಳಲ್ಲೊಂದು ರಾಜ್ ಕಪೂರ್‌ರ ಆರ್.ಕೆ. ಸ್ಟುಡಿಯೋ.

ಸ್ವಾತಂತ್ರ್ಯ ದೊರೆತ ಒಂದು ವರ್ಷದ ಬಳಿಕ 1948 ರಲ್ಲಿ ಆರ್.ಕೆ. ಸ್ಟುಡಿಯೋವನ್ನು ನಿರ್ಮಿಸಲಾಯಿತು. ಇಲ್ಲಿ ಮೊತ್ತ ಮೊದಲ ಫಿಲ್ಮ್ ‘ಆಘ್’ ನಿರ್ಮಾಣವಾಗಿತ್ತು. ಇದು ಸೂಪರ್ ಹಿಟ್ ಎನಿಸಲಿಲ್ಲ. ಆನಂತರ 1949ರ ‘ಬರ್ಸಾತ್’ ಯಶಸ್ಸು ಕೊಟ್ಟಿತು. ಮುಂದೆ ‘ಆವಾರಾ’, ‘ಶ್ರೀ 420’, ‘ಮೇರಾ ನಾಮ್ ಜೋಕರ್’, ‘ಬೂಟ್ ಪಾಲಿಶ್’, 1978ರಲ್ಲಿ ‘ಸತ್ಯಂ ಶಿವಂ ಸುಂದರಮ್’.... ಇಂತಹ ಪ್ರಸಿದ್ಧ ಸಿನೆಮಾಗಳು ಹೊರಬಂದವು. 1973ರ ‘ಬಾಬ್ಬಿ’, 1982ರ ‘ಪ್ರೇಮ್‌ರೋಗ್’ ಸಾಕಷ್ಟು ಸುದ್ದಿಯಾಯಿತು. 1985ರಲ್ಲಿ ಕೊನೆಯ ಸಿನೆಮಾ ‘ರಾಮ್ ತೇರಿ ಗಂಗಾ ಮೈಲಿ’ ಬಂತು. 1988ರಲ್ಲಿನ ಅಪೂರ್ಣ ಚಿತ್ರ ‘ಹೆನ್ನಾ’ 1991ರಲ್ಲಿ ಪೂರ್ಣಗೊಂಡಿತು. ರಾಜ್ ಕಪೂರ್ 1988ರಲ್ಲಿ ನಿಧನರಾದರು.

ಗ್ರೇಟೆಸ್ಟ್ ಶೋಮ್ಯಾನ್ ರಾಜ್ ಕಪೂರ್ ಉತ್ಸವ ಪ್ರೇಮಿ. ಆರ್.ಕೆ. ಸ್ಟುಡಿಯೋದಲ್ಲಿ ಹಬ್ಬಗಳಿಗೆ ವಿಶೇಷ ಆಕರ್ಷಣೆ ಇರುತ್ತಿತ್ತು. ಯಾವುದೇ ಹಬ್ಬಗಳಿರಲಿ ಆ ದಿನಗಳಲ್ಲಿ ಫಿಲ್ಮ್ ಜಗತ್ತಿನ ಗಣ್ಯರೆಲ್ಲಾ ಇಲ್ಲಿಗೆ ಬರುತ್ತಿದ್ದರು. ಇಲ್ಲಿಯ ಹೋಳಿ ಆಡಲು ವರ್ಷವಿಡೀ ಸಿನೆಮಾ ತಾರೆಯರು ಕಾಯುತ್ತಿದ್ದರು.

ಇಂತಹ ಆರ್.ಕೆ. ಸ್ಟುಡಿಯೋ ಒಂದೊಮ್ಮೆ ಹಣದ ತೊಂದರೆಯನ್ನು ಎದುರಿಸಿತ್ತು. ಆ ಸಮಯದಲ್ಲಿ ರಾಜ್ ಕಪೂರ್‌ರಿಗೆ ಮಹಾನ್ ಕಲಾವಿದೆ ನರ್ಗೀಸ್‌ರು ಜೊತೆ ನೀಡಿದ್ದರು. ಅರ್ಥಾತ್ ಅವರು ತಮ್ಮ ಚಿನ್ನದ ಬಳೆಯನ್ನು ಮಾರಿ ಹಣ ಸಂಗ್ರಹಿಸಿ ನೀಡಿದ್ದರು ಹಾಗೂ ಹೊರಗಿನ ನಿರ್ಮಾಪಕರ ಸಿನೆಮಾಗಳಾದ ‘ಅದಾಲತ್’, ‘ಘ್‌ರ್ ಸಂಸಾರ್’, ‘ಲಾಜವಂತೀ’...ಮುಂತಾದ ಸಿನೆಮಾಗಳಲ್ಲಿ ಕೆಲಸ ಮಾಡಿ ಅದರಲ್ಲಿ ಸಿಕ್ಕಿದ ಹಣವನ್ನು ರಾಜ್ ಕಪೂರ್‌ಗೆ ನೀಡಿದರು. ರಾಜ್ ಕಪೂರ್ ಮತ್ತು ನರ್ಗೀಸ್ ಮೊದಲ ಬಾರಿ ‘ಆಘ್’ನಲ್ಲಿ ಜೊತೆಗೆ ನಟಿಸಿದ್ದರು. ಇದು ರಾಜ್ ಕಪೂರ್‌ರ ಮೊದಲ ನಿರ್ದೇಶನದ ಸಿನೆಮಾ ಆಗಿತ್ತು. ಇದೇ ಸಿನೆಮಾದ ಜೊತೆ ಆರ್.ಕೆ. ಬ್ಯಾನರ್‌ನ ಪಂಚಾಂಗ ಕಟ್ಟಲಾಯಿತು. ಹೀಗಾಗಿ ಪ್ರೇಕ್ಷಕರೂ ಇವರಿಬ್ಬರ ಛಾಪನ್ನೇ ನಿರೀಕ್ಷಿಸಿದ್ದರು. ಇದೀಗ ಸಂಭವಿಸಿದ ಒಂದು ಅಗ್ನಿಕಾಂಡ ಎಲ್ಲರಲ್ಲಿಯೂ ನೋವನ್ನು ತರಿಸಿದೆ.

ಟಿ.ವಿ. ಸೆಟ್‌ಗಳಲ್ಲಿ ಕೆಲಸ ಮಾಡುವ ವರ್ಕರ್ಸ್ ಯೂನಿಯನ್ ಹೇಳುವಂತೆ, ‘‘ಶೋ ವ್ಯವಸ್ಥಾಪಕರು ಇಂತಹ ದುರ್ಘಟನೆಗಳನ್ನು ಎದು ರಿಸಲು ಗಂಭೀರವಾಗಿ ಯಾವ ಸಿದ್ಧತೆಗಳನ್ನೂ ಮಾಡುತ್ತಿಲ್ಲ. ಬೆಂಕಿಗೆ ಸಂಬಂಧಿತ ನಿಯಮಗಳನ್ನು ಪಾಲಿಸುತ್ತಿಲ್ಲ.’’ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯ್ಸಾನ ಅಧ್ಯಕ್ಷ ಬಿ.ಎನ್. ತಿವಾರಿ ಹೇಳುವಂತೆ, ‘‘ಹೆಚ್ಚಿನ ಸೆಟ್‌ಗಳಲ್ಲಿ ಹೊರಗೆ ಹೋಗುವ ದಾರಿಯೇ ಇರುವುದಿಲ್ಲ. ಹೀಗಾಗಿ ದುರ್ಘಟನೆ ನಡೆದರೆ ಓಡಲು ಸಾಧ್ಯವಾಗುವುದಿಲ್ಲ. ಬೆಂಕಿ ಕಾಣಿಸಿಕೊಂಡರೆ ದೀಪಗಳನ್ನು ಆರಿಸಲಾಗುತ್ತಿದೆ. ಹೀಗಾಗಿ ಜನ ಒಳಗೆಯೇ ಸಿಕ್ಕಿಬೀಳುತ್ತಾರೆ. ಇಂದಿನ ದಿನಗಳಲ್ಲಿ ಸುಂದರ, ಭವ್ಯ ಸೆಟ್‌ಗಳನ್ನು ಅಳವಡಿಸುವಿಕೆಗೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಆದರೆ ಅಷ್ಟೇ ಪ್ರಾಮುಖ್ಯತೆಯನ್ನು ಅಗ್ನಿಶಾಮಕ ವ್ಯವಸ್ಥೆಗೆ ಕೊಡುವುದಿಲ್ಲ.’’ ಅತ್ತ ನಿರ್ಮಾಪಕರು ಟೆಕ್ನಿಶಿಯನ್‌ಗಳಿಗೆ ಸರಿಯಾದ ತರಬೇತಿ ನೀಡುವುದು ಅಗತ್ಯವಿದೆ ಎನ್ನುತ್ತಾರೆ.

ಸಿನೆ ಆ್ಯಂಡ್ ಟಿವಿ ಆರ್ಟಿಸ್ಟ್ ಎಸೋಸಿಯೇಶನ್ (ಸಿಂಟಾ) ಹೇಳುವಂತೆ ಶೇ. 70 ಸೆಟ್‌ಗಳಲ್ಲಿ ಫೈರ್ ಆಡಿಟ್ ಇಲ್ಲವಂತೆ. ಮುಂಬೈಯ ಈ ಶೇ. 70 ಸೆಟ್‌ಗಳು ನಾಯ್‌ಗಾಂವ್, ಕಾಶೀಮೀರಾ ಮೊದಲಾದೆಡೆ ಇವೆ. ಹಳೆಯ ಸ್ಟುಡಿಯೋಗಳಾದ ಕಮಲಿಸ್ತಾನ್, ಫಿಲ್ಮಿಸ್ತಾನ್, ಮಹಬೂಬ್, ಆರ್.ಕೆ. ಮತ್ತು ಫಿಲ್ಮ್ ಸಿಟಿ ಇಂತಹ ಕಡೆ ಫೈರ್ ಆಡಿಟ್ ಇದೆಯಂತೆ. ಆದರೆ ಇಲ್ಲಿ ಹೊಸ ಸೆಟ್ಸ್ ನಿರ್ಮಾಣವಾಗುತ್ತಿದ್ದು ಅವು ಅಪಾಯಕಾರಿ ಆಗಿರುತ್ತದೆ. ಹೀಗಾಗಿ ಪ್ರತೀ ಸೆಟ್‌ನಲ್ಲೂಫರ್ ಆಡಿಟ್ ಮಾಡಬೇಕು.
ಏನೇ ಇರಲಿ, ಆರ್.ಕೆ. ಬ್ಯಾನರ್‌ನ ಸುಮಧುರ ನೆನಪುಗಳ ಗುರುತುಗಳು ಬೆಂಕಿಗೆ ಆಹುತಿಯಾಗಿರುವುದಂತೂ ಅತೀವ ದು:ಖದ ಸಂಗತಿಯೇ ಆಗಿದೆ.
***

ರಾಣಿಬಾಗ್ ಉದ್ಯಾನ: ಪ್ರಾಣಿ-ಪಕ್ಷಿಗಳ ಸಾವು
ಮುಂಬೈಯ ರಾಣಿಬಾಗ್‌ನ ಪಕ್ಷಿಧಾಮದಲ್ಲಿ ವಿಭಿನ್ನ ಜಾತಿಗಳ 70 ಪ್ರಾಣಿಗಳು ಸಾವನ್ನಪ್ಪಿರುವ ಬಗ್ಗೆ 2016-2017ರ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಆದರೆ ಈ 70 ಪ್ರಾಣಿಗಳ ಸಾವಿಗೆ ವೃದ್ಧಾಪ್ಯ ಕಾರಣವೆಂದು ರಾಣಿಬಾಗ್‌ನ ಮ್ಯಾನೇಜರ್ ಹೇಳುತ್ತಿದ್ದಾರೆ.

ಈಗ ಪೆಂಗ್ವಿನ್ ಆಕರ್ಷಣೆಯಾಗಿರುವ ಕಾರಣ ಪ್ರವಾಸಿಗರ ಸಂಖ್ಯೆ ಏರಿದೆ. 2016-2017ರ ವರದಿಯಂತೆ ವಿತ್ತ ವರ್ಷದ ಆರಂಭದಲ್ಲಿ ರಾಣಿಬಾಗ್‌ನಲ್ಲಿ ವಿಭಿನ್ನ ಜಾತಿಗಳ ಒಟ್ಟು 453 ಪ್ರಾಣಿಗಳ ನೋಂದಣಿ ಆಗಿತ್ತು. ಈ ವರ್ಷ ಇದುವರೆಗೆ 46 ಪ್ರಾಣಿಗಳು ಜನ್ಮ ನೀಡಿವೆ. ಹೀಗಾಗಿ ಒಟ್ಟು ಸಂಖ್ಯೆ 499ಕ್ಕೆ ತಲುಪಿತ್ತು. ಆದರೆ ಇದರಲ್ಲಿ 70 ಪ್ರಾಣಿಗಳು ತಮ್ಮ ಹೆಚ್ಚಿದ ಪ್ರಾಯದಿಂದಾಗಿ ಸಾವನ್ನಪ್ಪಿವೆ. ಇಂದು ವಿಭಿನ್ನ ಜಾತಿಗಳ 420 ಪ್ರಾಣಿಗಳು ರಾಣಿಬಾಗ್‌ನಲ್ಲಿ ಉಳಿದಿವೆ.
ರಾಣಿಬಾಗ್‌ನಲ್ಲಿ 29 ಜಾತಿಗಳ ಪಕ್ಷಿಗಳಿದ್ದು ಇವುಗಳ ಒಟ್ಟು ಸಂಖ್ಯೆ 279 ಇತ್ತು. ಇವುಗಳಲ್ಲಿ ಕ್ರೆನ್ ಜಾತಿಗಳಲ್ಲಿ ಹೊಸ ಪಕ್ಷಿಗಳ ಜನನದಿಂದಾಗಿ ಸಂಖ್ಯೆ ವೃದ್ಧಿಸಿತ್ತು. ಆದರೆ 46 ಪಕ್ಷಿಗಳು ಸಾವನ್ನಪ್ಪಿವೆ.
***

ನವಿ ಮುಂಬೈಯಲ್ಲಿ ನೀಲಿ ನಾಯಿಗಳು!
ನವಿಮುಂಬೈಯ ತಲೋಜಾ ಔದ್ಯೋಗಿಕ ಕ್ಷೇತ್ರದ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಬಣ್ಣ ನೀಲಿ ಆಗುತ್ತಿವೆ. ಕಪ್ಪು, ಬಿಳಿ, ಕಂದು....ಹೀಗೆ ವಿವಿಧ ಬಣ್ಣಗಳ ನಾಯಿಗಳೆಲ್ಲ ಇತ್ತೀಚೆಗೆ ಒಂದೇ ಬಣ್ಣ ಅರ್ಥಾತ್ ನೀಲಿ ಬಣ್ಣದಲ್ಲೇ ಕಾಣುತ್ತಿವೆ. ಇದಕ್ಕೆ ಕಾರಣ ಇಲ್ಲಿನ ಕಸಾಡಿ ನದಿಯಲ್ಲಿ ಔದ್ಯೋಗಿಕ ಘಟಕಗಳು ಹರಿಯಬಿಡುವ ಕೆಮಿಕಲ್ ನೀರಾಗಿದೆ. ಯಾವ ನಾಯಿಗಳು ಈ ನೀರಲ್ಲಿ ಈಜಿ ದಾಟುತ್ತವೆಯೋ ಅದರಲ್ಲಿನ ಕೆಮಿಕಲ್ ಈ ಶ್ವಾನಗಳ ಮೈಗೆ ತಾಗಿ ನೀಲಿ ಬಣ್ಣವಾಗುತ್ತಿವೆ.

ನವಿಮುಂಬೈಯಲ್ಲಿ ಎನಿಮಲ್ ಪ್ರೊಟೆಕ್ಷನ್ ಸೆಲ್ ನಡೆಸುವ ಆರತಿ ಚೌಹಾಣ್, ‘‘ನಾವು ಈಗಾಗಲೇ ಇಂತಹ ಹಲವು ನಾಯಿಗಳನ್ನು ಕಂಡಿದ್ದೇವೆ. ನದಿಯ ನೀರಿನಲ್ಲಿ ಅತೀ ಹೆಚ್ಚು ರಾಸಾಯನಿಕಗಳು ಸೇರಿರು ವುದೇ ಇದಕ್ಕೆ ಕಾರಣವಾಗಿದೆ. ನೀರು ಕಲುಷಿತವಾಗಿರುವ ಕಾರಣ ನೀರಲ್ಲಿರುವ ಜಲಚರಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಮನುಷ್ಯನ ಆರೋಗ್ಯದ ಮೇಲೆಯೂ ಇದು ಪ್ರಭಾವ ಬೀರಲಿದೆ.

ಶ್ವಾನಗಳ ಮೈಬಣ್ಣ ನೀಲಿ ಆಗಿರುವುದನ್ನು ಗಮನಿಸಿ ನವಿ ಮುಂಬೈ ಪಶು ಸಂರಕ್ಷಣಾ ಸೆಲ್ ಮಹಾರಾಷ್ಟ್ರ ವಾಯುಮಾಲಿನ್ಯ ಮಂಡಲಕ್ಕೆ ದೂರು ದಾಖಲಿಸಿದೆ. ತಲೋಜಾ ಪರಿಸರದಲ್ಲಿ ಸುಮಾರು ಒಂದು ಸಾವಿರದಷ್ಟು ಔಷಧಿ ಇತ್ಯಾದಿ ಕಾರ್ಖಾನೆಗಳಿವೆ. ಮಹಾರಾಷ್ಟ್ರ ವಾಯುಮಾಲಿನ್ಯ ಬೋರ್ಡ್ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News