ಕೋಳಿ ಗೂಡೊಂದರಲ್ಲಿ ಅಡಗಿ ಕೂತಿದ್ದ ನಾನು ಮ್ಯಾನ್ಮಾರ್ ಸೈನಿಕರು ಗಂಡನ ಕತ್ತು ಸೀಳುವುದನ್ನು ನೋಡಿದೆ: ಫಾತಿಮಾ

Update: 2017-10-10 10:14 GMT

ಇಡೀ ದಿನ ನಾವು ಸಹಾಯಕ್ಕಾಗಿ ಕಾದು ಕುಳಿತಿದ್ದೆವು.  ಬೆಳಗ್ಗಿನಿಂದಲೇ ಮಳೆಯೂ ಎಡೆಬಿಡದೆ ಸುರಿಯುತ್ತಿತ್ತು. ನಾನು ಮತ್ತು ನನ್ನ ಹನ್ನೊಂದು ತಿಂಗಳ ಮಗ ಅನೀಸ್ ಸಂಪೂರ್ಣವಾಗಿ  ಒದ್ದೆಯಾಗಿದ್ದೆವು, ಮಗು ಚಳಿಯಿಂದ ನಡುಗುತ್ತಿದ್ದ.  ಪ್ರತಿ ದಿನ ನಾನು ನನ್ನ ಪುಟ್ಟ ಮಗುವಿನೊಂದಿಗೆ ರಸ್ತೆ ಬದಿಯಲ್ಲಿ ಕುಳಿತುಕೊಳ್ಳುತ್ತೇನೆ.  ಕೆಲವೊಮ್ಮೆ ಜನರು ತಮ್ಮ ಕಾರು ನಿಲ್ಲಿಸಿ ನಮಗೆ ಆಹಾರ ಇಲ್ಲವೇ ಹಣ ನೀಡುತ್ತಿದ್ದರು. ಆಹಾರ ಮತ್ತು ಹಣ ದೊರಕಿತೆಂದರೆ  ನಾವು ಇನ್ನೊಂದು ವಾರ ಬದುಕಬಹುದಾಗಿತ್ತು.

ಮಾಯನ್ಮಾರ್ ನ ಸೈನಿಕರು ನನ್ನ ಗಂಡನ ಕೂದಲು ಹಿಡಿದೆಳೆದಿದ್ದರು.  ಆತ ಅವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕ್ಷಮೆಯಾಚಿಸಿದ್ದ. ಆದರೆ ಅವರು ಆತನನ್ನು ಕೊಂದು ನಮ್ಮೆದುರೇ ಆತನ ದೇಹಕ್ಕೆ ಬೆಂಕಿ ಹಚ್ಚಿದ್ದರು.

ಕೋಳಿ ಗೂಡೊಂದರಲ್ಲಿ ನಾನು ನನ್ನ ಪುಟ್ಟ ಮಗುವಿನೊಂದಿಗೆ ಅಡಗಿ ಕುಳಿತೆ.  ಅಲ್ಲಿಂದ ನಾನು ಸೈನಿಕರು ನನ್ನ ಗಂಡನ ಕತ್ತನ್ನು ಕತ್ತಿಯಿಂದ ಸೀಳುತ್ತಿರುವುದನ್ನು ನೋಡಿದೆ. ನಾನು ನನ್ನ ಮಗುವಿನ ಕಣ್ಣಿಗೆ ಅಡ್ಡ ಹಿಡಿದು ಆತ ಅದನ್ನು ನೋಡದಂತೆ ನೋಡಿಕೊಂಡೆ. ನಾನು ಯಾವಾಗ  ಪ್ರಜ್ಞೆ ಕಳೆದುಕೊಂಡು ಬಿದ್ದೆನೆಂದು ನನಗೆ ತಿಳಿದಿಲ್ಲ. ಎಚ್ಚರವಾದಾಗ ಎಲ್ಲವೂ ಸುಟ್ಟು ಬೂದಿಯಾಗಿತ್ತು.

ಮರುದಿನ ಮುಂಜಾನೆ ನಾವು ಗ್ರಾಮದ ಇತರರೊಂದಿಗೆ ಅಲ್ಲಿಂದ ತಪ್ಪಿಸಿಕೊಂಡೆವು.  ಬಾಂಗ್ಲಾದೇಶದ ಗಡಿ ತಲುಪಲು ನಾಲ್ಕು ದಿನಗಳೇ ಬೇಕಾದವು. ನನ್ನ ಮಗುವನ್ನು ನನ್ನ ಬೆನ್ನಿನಲ್ಲಿ ಹೊತ್ತು ಸಾಗಿದ್ದೆ. ಆಹಾರವಿಲ್ಲದೆಯೇ ನಾವು ನಡೆದಿದ್ದೆವು.  ಆಹಾರ ಮತ್ತು ನೀರಿಲ್ಲದೆ ಮಗುವನ್ನು ಬೆನ್ನಿನಲ್ಲಿ ಹೊತ್ತುಕೊಂಡು ಹೋಗುವುದು ನೋವು ನೀಡುತ್ತಿತ್ತು. ಕೆಲವೊಮ್ಮೆ  ಸಣ್ಣ ಕೆರೆ ತೊರೆಗಳಿಂದ ನೀರು ಕುಡಿಯುತ್ತಿದ್ದೆವು.  ಮರಗಳಿಂದ ಎಲೆಗಳನ್ನು ತಿಂದೆವು ಹಾಗೂ ಆಗಸದ ಕೆಳಗೆ ಮಲಗಿದೆವು. ಸತತವಾಗಿ ಮಳೆಯಾಗುತ್ತಿದ್ದುದರಿಂದ  ಚಪ್ಪಲಿಯಿಲ್ಲದೆ ನಡೆಯುವುದು ಕಷ್ಟವಾಗಿತ್ತು.

ನದಿ ಹತ್ತಿರ ನಾವು ಬಂದಾಗ ನನ್ನ ಚಿನ್ನದ ಕಿವಿಯೋಲೆ  ಹಾಗೂ ಸರವನ್ನು ಅಂಬಿಗನಿಗೆ ನೀಡಿದೆ.  ಇನ್ನೊಂದು ಬದಿ ತಲುಪಲು ಎರಡು ಹಗಲು ಎರಡು ರಾತ್ರಿಗಳೇ ಬೇಕಾದವು.  ರಾತ್ರಿ ಹೊತ್ತು ಮಳೆಯಾಗುತ್ತಿತ್ತು ಹಾಗೂ ಭಾರೀ ಚಳಿಯಿತ್ತು.  ನಾವು ದೋಣಿಯಲ್ಲಿ 25 ಮಂದಿ ಇದ್ದೆವು. ರಕ್ಷಣೆಗಾಗಿ ನಾವು ಒಬ್ಬರನ್ನೊಬ್ಬರು  ಗಟ್ಟಿಯಾಗಿ  ಹಿಡಿದುಕೊಂಡಿದ್ದೆವು. ತಿನ್ನಲು ಏನೂ ಇರಲಿಲ್ಲ. ನೀರು ಕೂಡ ಗಡಸಾಗಿತ್ತು.   ನನ್ನ ಮಗುವಿನ ಮುಖ ಬಿಳಿಚಿಕೊಂಡಿತ್ತಲ್ಲದೆ  ಆತ ಭಯಗೊಂಡಂತಿತ್ತು.  ನನ್ನನ್ನು ಸದಾ ಗಟ್ಟಿಯಾಗಿ ಅವಚಿಕೊಂಡಿದ್ದನಾತ. ನನ್ನ ಗಂಡನನ್ನು ಉಳಿಸಿಕೊಳ್ಳಲಾಗದಂತೆ  ನನ್ನ ಮಗುವನ್ನು ಉಳಿಸಲು ಸಾಧ್ಯವಿಲ್ಲವೇನೋ ಎಂದು ನಾನಂದುಕೊಂಡಿದ್ದೆ. ಆ ರಾತ್ರಿ ನಾವು ಸತ್ತೇ ಹೋಗುತ್ತೇವೆ ಎಂಬಂತೆ ಅನಿಸಿತ್ತು.

- ಫಾತಿಮಾ 19

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News