ಇರಾನ್, ಬ್ರೆಝಿಲ್ ನಾಕೌಟ್ ಗೆ ಲಗ್ಗೆ

Update: 2017-10-10 18:32 GMT

ಗೋವಾ, ಅ.10: ಫಿಫಾ ಅಂಡರ್-17ವಿಶ್ವಕಪ್‌ನಲ್ಲಿ ಇರಾನ್ ಹಾಗೂ ಬ್ರೆಝಿಲ್ ತಂಡಗಳು ಅಂತಿಮ-16ರ ಸುತ್ತಿಗೆ ಪ್ರವೇಶಿಸಿವೆ.

ಮಂಗಳವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಇರಾನ್ ತಂಡ ಜರ್ಮನಿಯನ್ನು 4-0 ಅಂತರದಿಂದ ಮಣಿಸಿ ಶಾಕ್ ನೀಡಿತು. ‘ಡಿ’ ಗುಂಪಿನ ಪಂದ್ಯದಲ್ಲಿ ಬ್ರೆಝಿಲ್ ತಂಡ ಉತ್ತರ ಕೊರಿಯಾವನ್ನು 2-0 ಅಂತರದಿಂದ ಸೋಲಿಸಿತು.

ಸಿ ಗುಂಪಿನ ಪಂದ್ಯದುದ್ದಕ್ಕೂ ಬಿಗಿ ಹಿಡಿತ ಸಾಧಿಸಿದ್ದ ಇರಾನ್ ತಂಡ ಪರ ಯೂನಿಸ್ ಡೆಲ್ಫಿ ಅವಳಿ ಗೋಲು(6ನೆ, 42ನೆ ನಿಮಿಷ) ಬಾರಿಸಿದರೆ, ಅಲ್ಲಾಹಾರ್ ಸಯ್ಯದ್(49ನೆ ನಿ.) ಹಾಗೂ ವಾಹಿದ್ ನಾಮ್‌ದಾರಿ(75ನೆನಿ.) ತಲಾ ಒಂದು ಗೋಲು ಬಾರಿಸಿದರು.

ಮೊದಲ ಪಂದ್ಯದಲ್ಲಿ ಗಿನಿಯಾ ತಂಡವನ್ನು ಮಣಿಸಿದ್ದ ಇರಾನ್ ‘ಡಿ’ ಗುಂಪಿನಲ್ಲಿ ಒಟ್ಟು 6 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದ್ದು, ಅಂತಿಮ 16ರ ಸುತ್ತಿಗೆ ತೇರ್ಗಡೆಯಾಗಿದೆ. ಮೊದಲ ಪಂದ್ಯದಲ್ಲಿ ಕೋಸ್ಟರಿಕಾವನ್ನು 2-1ರಿಂದ ಮಣಿಸಿದ್ದ ಜರ್ಮನಿ ತಂಡಕ್ಕೆ ಮುಂದಿನ ಸುತ್ತಿಗೇರಲು ಗಿನಿಯಾ ವಿರುದ್ಧ ಪಂದ್ಯ ಗೆಲ್ಲಲೇಬೇಕಾಗಿದೆ. ಇರಾನ್ ಅ.13 ರಂದು ಕೋಸ್ಟರಿಕಾ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯ ಆಡಲಿದೆ.

ಮತ್ತೊಂದು ಪಂದ್ಯದಲ್ಲಿ ನಾರ್ತ್ ಕೊರಿಯಾವನ್ನು 2-0 ಅಂತರದಿಂದ ಮಣಿಸಿದ ಬ್ರೆಝಿಲ್ ನಾಕೌಟ್ ರೌಂಡ್‌ಗೆ ತೇರ್ಗಡೆಯಾಯಿತು.

 ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್‌ನ್ನು 1-0 ಅಂತರದಿಂದ ಮಣಿಸಿದ್ದ ಬ್ರೆಝಿಲ್‌ನ ಪರ ಲಿಂಕೊಲಿನ್(56ನೆ ನಿ.) ಹಾಗೂ ಪೌಲಿನ್ಹೊ(61 ನೆ ನಿ.)ತಲಾ ಒಂದು ಗೋಲು ಬಾರಿಸಿದರು. ನೈಜರ್ ವಿರುದ್ಧ ಮೊದಲ ಪಂದ್ಯವನ್ನು 0-1 ರಿಂದ ಸೋತಿದ್ದ ಕೊರಿಯಾ ಕೊನೆಯ ಲೀಗ್ ಪಂದ್ಯದಲ್ಲಿ ಸ್ಪೇನ್‌ನ್ನು ಎದುರಿಸಲಿದೆ. ಕೊರಿಯಾಕ್ಕೆ ಮುಂದಿನ ಸುತ್ತಿಗೇರುವ ಅವಕಾಶ ಕಡಿಮೆಯಿದೆ.

ಕೋಸ್ಟರಿಕಾ-ಗಿನಿಯಾ ಪಂದ್ಯ ಡ್ರಾ: ಮಂಗಳವಾರ ಗೋವಾದಲ್ಲಿ ನಡೆದ ಕೋಸ್ಟರಿಕಾ-ಗಿನಿಯಾ ನಡುವಿನ ‘ಸಿ’ ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಕೊಚ್ಚಿಯಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಸ್ಪೇನ್ ತಂಡ ನೈಜರ್ ವಿರುದ್ಧ 4-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. 0-2 ಹಿನ್ನಡೆಯಿಂದ ಬೇಗನೆ ಚೇತರಿಸಿಕೊಂಡ ಗಿನಿಯಾ ತಂಡ ಕೋಸ್ಟರಿಕಾ ವಿರುದ್ಧ 2-2 ರಿಂದ ಡ್ರಾಗೊಳಿಸಿದೆ. ನಾಲ್ಕು ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿದ ಕೋಸ್ಟರಿಕಾ ಆರಂಭದಲ್ಲೇ 2-0 ಮುನ್ನಡೆ ಸಾಧಿಸಿತ್ತು. 26ನೆ ನಿಮಿಷದಲ್ಲಿ ಜಾರ್ಕ್ವಿನ್ ಮೊದಲ ಗೋಲು ಬಾರಿಸಿದರು. 30ನೆ ನಿಮಿಷದಲ್ಲಿ ಫ್ಯಾಂಡಿ ಟೂರ್ 2-0 ಮುನ್ನಡೆ ಒದಗಿಸಿಕೊಟ್ಟರು. ಟೂರ್ ಟೂರ್ನಿಯಲ್ಲಿ 2ನೆ ಗೋಲು ಬಾರಿಸಿದರು.

ಆಫ್ರಿಕದ ಗಿನಿಯಾ ತಂಡ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತು. ಆ್ಯಂಡ್ರೆಸ್ ಗೊಮೆಝ್ 67ನೆ ನಿಮಿಷದಲ್ಲಿ ಹೆಡರ್‌ನ ಮೂಲಕ ಗೋಲು ಬಾರಿಸಿದರು. ಇಬ್ರಾಹಿಮಾ ಸೌಮ್ಹಾ 81ನೆ ನಿಮಿಷದಲ್ಲಿ ಗೋಲು ಬಾರಿಸಿ 2-2 ರಿಂದ ಸಮಬಲ ಸಾಧಿಸಲು ನೆರವಾದರು.

ಕೋಸ್ಟರಿಕಾ ಹಾಗೂ ಗಿನಿಯಾ ಕೊಚ್ಚಿಯಲ್ಲಿ ನಡೆಯಲಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಕ್ರಮವಾಗಿ ಇರಾನ್ ಹಾಗೂ ಜರ್ಮನಿ ತಂಡವನ್ನು ಎದುರಿಸಲಿವೆ.

ಸ್ಪೇನ್‌ಗೆ ಸುಲಭ ತುತ್ತಾದ ನೈಜರ್:   ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಬ್ರೆಝಿಲ್ ವಿರುದ್ಧ ಸೋತಿದ್ದ ಸ್ಪೇನ್ ತಂಡ ಸ್ಟಾರ್ ಸ್ಟ್ರೈಕರ್ ಅಬೆಲ್ ರುಯಿಝ್ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ನೈಜರ್ ತಂಡವನ್ನು 4-0 ಅಂತರದಿಂದ ಮಣಿಸಿತು. ರುಯಿಝ್ 21 ಹಾಗೂ 41ನೆ ನಿಮಿಷದಲ್ಲಿ ಗೋಲು ಬಾರಿಸಿದರು. ಸೀಸರ್ ಜೆಲ್‌ಬರ್ಟ್(45+1) ಹಾಗೂ ಸೆರ್ಜಿಯೊ ಗೊಮೆಝ್(82) ತಲಾ ಒಂದು ಗೋಲು ಬಾರಿಸಿದರು. ಸ್ಪೇನ್ ಗೋಲಿನ ಖಾತೆ ತೆರೆಯಲು ಸ್ವಲ್ಪ ಸಮಯ ತೆಗೆದುಕೊಂಡಿತು. 21ನೆ ನಿಮಿಷದಲ್ಲಿ ರುಯಿಝ್ 1-0 ಮುನ್ನಡೆ ಒದಗಿಸಿಕೊಟ್ಟರು.41ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ರುಯಿಝ್ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. 45+1ನೆ ನಿಮಿಷದಲ್ಲಿ ಸೀಸರ್ ತಂಡದ ಮುನ್ನಡೆ 3-0ಗೆ ತಲುಪಿಸಿದರು. ದ್ವಿತೀಯಾರ್ಧದಲ್ಲೂ ಸ್ಪೇನ್ ಪ್ರಾಬಲ್ಯ ಮುಂದುವರಿಸಿತು. ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿದ ಗೊಮೆಝ್(82ನೆ ನಿಮಿಷ) ಸ್ಪೇನ್‌ಗೆ ಭರ್ಜರಿ ಜಯ ತಂದುಕೊಟ್ಟರು.

ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 102 ಗೋಲುಗಳನ್ನು ಬಾರಿಸಿರುವ ಸ್ಪೇನ್ ತಂಡ ಮುಂದಿನ ಸುತ್ತಿನಲ್ಲಿ ಉತ್ತರ ಕೊರಿಯಾವನ್ನು ಎದುರಿಸಲಿದೆ. ನೈಜರ್ ತಂಡ ಗೋವಾದಲ್ಲಿ ಬ್ರೆಝಿಲ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News