ವ್ಯಕ್ತಿ ಬದುಕಲಾರ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದ ಬಳಿಕವೇ ದಯಾಮರಣ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಅ. 11: ವ್ಯಕ್ತಿಯ ರೋಗ ಗುಣಪಡಿಸಲಾಗದ ಸ್ಥಿತಿಯಲ್ಲಿದೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದ ಬಳಿಕವೇ ವೈದ್ಯಕೀಯ ಚಿಕಿತ್ಸೆ ಸ್ಥಗಿತಗೊಳಿಸಿ ಗೌರವದಿಂದ ಸಾಯಲು ಅವಕಾಶ ನೀಡಬೇಕು ಎಂಬ ರೋಗಿಯ ಕೋರಿಕೆ ಮನ್ನಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಬುಧವಾರ ಹೇಳಿದ್ದಾರೆ.
ವ್ಯಕ್ತಿಯ ಬದುಕುವ ನಿಖರ ಇಚ್ಛೆ ಅಥವಾ ಬದುಕು ಕೊನೆಗೊಳಿಸಲು ವೈದ್ಯಕೀಯ ಚಿಕಿತ್ಸೆಯ ನಿಲ್ಲಿಸುವ ಪೂರ್ವ ನಿರ್ದೇಶನ ಯಾವಾಗ ಅನ್ವಯವಾಗಬೇಕು ಎಂಬ ಚರ್ಚೆಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಈ ಪ್ರತಿಕ್ರಿಯೆ ನೀಡಿದೆ.
ದಯಾಮರಣದ ಕುರಿತಂತೆ ಕರಡು ನಿಯಮಾವಳಿಗಳನ್ನು ರಚನೆಗೆ ಸಂಬಂಧಿಸಿ ತಾನು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದಾಗಿ ಪೀಠ ತಿಳಿಸಿದೆ.
ಪೂರ್ವ ನಿರ್ದೇಶನಕ್ಕೆ ಮ್ಯಾಜಿಸ್ಟ್ರೇಟ್ ಅನುಮೋದನೆ ನೀಡಬಹುದು. ಬುದ್ಧಿ ಸ್ಥಿಮಿತದಲ್ಲಿರುವ ವ್ಯಕ್ತಿ ಬದುಕುವ ಇಚ್ಛೆ ಕಳೆದುಕೊಂಡಿದ್ದಾನೆಯೇ ಎಂಬ ಬಗ್ಗೆ ಮ್ಯಾಜಿಸ್ಟೇಟರು ಪರಿಶೀಲಿಸುತ್ತಾರೆ. ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ.
ದಯಾಮರಣ ಕರಡು ಮಸೂದೆ ಸಿದ್ಧ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ
ಗುಣಮುಖವಾಗದ ಅನಾರೋಗ್ಯಕ್ಕೆ ತುತ್ತಾದ ರೋಗಿಯ ವೈದ್ಯಕೀಯ ಚಿಕಿತ್ಸೆ ಸ್ಥಗಿತಗೊಳಿಸಿ ದಯಾಮರಣ ನೀಡುವ ಕರಡು ಮಸೂದೆ ಸಿದ್ಧವಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಬುದ್ಧಿ ಸ್ಥಿಮಿತದಲ್ಲಿರುವ ವ್ಯಕ್ತಿ ತನ್ನ ರೋಗ ಗುಣಮುಖವಾಗುತ್ತದೆ ಎಂಬ ಭರವಸೆ ಕಳೆದುಕೊಂಡ ಬಳಿಕ ವೈದ್ಯಕೀಯ ಚಿಕಿತ್ಸೆ ನಿಲ್ಲಿಸಿ ದಯಾಮರಣ ನೀಡುವ ಬಗ್ಗೆ ಕೇಂದ್ರ ಸರಕಾರಕ್ಕೆ ವಿರೋಧವಿದೆ. ಹಾಗೂ ಇದನ್ನು ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ತನ್ನ ಸಂಕ್ಷಿಪ್ತ ವಿವರಣೆಯಲ್ಲಿ ಆರೋಗ್ಯ ಸಚಿವಾಲಯ ಸಿದ್ಧಪಡಿಸಿದ ಗುಣಮುಖರಾಗದ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ (ರೋಗಿ ಹಾಗೂ ವೈದ್ಯರ ರಕ್ಷಣೆ) ಶೀರ್ಷಿಕೆಯ ಕರಡು ಮಸೂದೆ ಸಿದ್ಧವಾಗಿದೆ ಎಂದರು.