ಸೊಲೊ ಕ್ಲೈಮಾಕ್ಸ್ ನಲ್ಲಿ ಬದಲಾವಣೆ

Update: 2017-10-13 12:46 GMT

ದುಲ್ಕರ್ ಸಲ್ಮಾನ್ ಅಭಿನಯದ ‘ಸೊಲೊ’ ಈ ವರ್ಷದ ಭಾರೀ ನಿರೀಕ್ಷೆಯ ಚಿತ್ರಗಳಲ್ಲೊಂದಾಗಿತ್ತು. ಆದರೆ ತಮಿಳು ಮಲಯಾಳಂ ಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದದ್ದೇ ತಡ ಪ್ರೇಕ್ಷಕರಿಂದ ಕ್ಲೈಮಾಕ್ಸ್ ದೃಶ್ಯದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದವು. ಪರಿಣಾಮವಾಗಿ ನಿರ್ದೇಶಕ ಬಿಜಯ್ ನಂಬಿಯಾರ್ ಅವರ ಅನುಮತಿ ಪಡೆಯದೆಯೇ ಮಲಯಾಳಂ ಆವೃತ್ತಿಯ ‘ಸೊಲೊ’ದ ಕ್ಲೈಮಾಕ್ಸ್ ದೃಶ್ಯದಲ್ಲಿ ಮಾರ್ಪಾಡು ಮಾಡಲಾಯಿತು. ಈ ಮಧ್ಯೆ ನಟ ದುಲ್ಕರ್ ಸಲ್ಮಾನ್ ಸ್ವತಃ ಅಭಿಮಾನಿಗಳಿಗೆ ಬಹಿರಂಗಪತ್ರ ಬರೆದು, ಚಿತ್ರವನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ವೀಕ್ಷಿಸುವಂತೆ ಮನವಿ ಕೂಡಾ ಮಾಡಿದರು.

ಅಕ್ಟೋಬರ್ 5ರಂದು ತೆರೆಕಂಡ ‘ಸೊಲೊ’ ಬಿಡು ಗಡೆಯಾದಾಗಿನಿಂದ ಒಂದಲ್ಲ ಒಂದು ವಿವಾದಗಳಿಗೆ ಸಿಲುಕತೊಡಗಿತ್ತು. ತಮಿಳುನಾಡಿನಲ್ಲಿ ಸ್ಥಳೀಯಾಡಳಿತದ ಮನರಂಜನಾ ತೆರಿಗೆ ವಿರುದ್ಧ ತಮಿಳು ಚಿತ್ರ ನಿರ್ಮಾಪಕರ ಒಕ್ಕೂಟ ಮುಷ್ಕರಕ್ಕಿಳಿದಿದ್ದರಿಂದ ಬಿಡುಗಡೆಯಾದ ಮರುದಿನವೇ ಚಿತ್ರಮಂದಿರಗಳಿಂದ ‘ಸೊಲೊ’ವನ್ನು ಹಿಂದೆಗೆಯಲಾಯಿತು. ನಾಲ್ಕು ಕಥೆಗಳ ಸಂಕಲನವಾದ ‘ಸೊಲೊ’ದ ಒಂದು ಅಧ್ಯಾಯವಾದ ಸೊಲೊ ಆಫ್ ರುದ್ರದ ಕಥೆಯು ಪಡೆದುಕೊಳ್ಳುವ ತಿರುವಿಗೆ ಪ್ರೇಕ್ಷಕರಿಂದ ಗಾಢವಾದ ಅಸಮಾಧಾನ ವ್ಯಕ್ತವಾಯಿತು. ಈ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಚಿತ್ರದ ಮಲಯಾಳಂ ಆವೃತ್ತಿಯ ಕ್ಲೈಮಾಕ್ಸ್‌ನಲ್ಲಿ ಬದಲಾವಣೆ ಮಾಡಲಾಯಿತು. ಈ ಮಧ್ಯೆ ನಿರ್ದೇಶಕ ಬಿಜಯ್ ಮೋಹನ್ ತನ್ನ ಒಪ್ಪಿಗೆ ಪಡೆಯದೆ ಕ್ಲೈಮಾಕ್ಸ್ ನಲ್ಲಿ ಬದಲಾವಣೆ ಮಾಡಲಾಗಿದೆಯೆಂದು ಅಲವತ್ತುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಚಿತ್ರ ನಿರ್ಮಾಪಕರ ಮುಷ್ಕರ ಮುಗಿದಂತೆಯೇ ಚಿತ್ರವನ್ನು ಮತ್ತೆ ರಿಲೀಸ್ ಮಾಡುವ ಯೋಚನೆ ನಿರ್ಮಾಪಕರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News