ಎಫ್‌ಟಿಐಐ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿದ್ಧ

Update: 2017-10-13 15:57 GMT

ಮುಂಬೈ,ಅ.13: ಭಾರತೀಯ ಚಲನಚಿತ್ರ ಹಾಗೂ ಟಿವಿ ಇನ್ಸ್‌ಟಿಟ್ಯೂಟ್ (ಎಫ್‌ಟಿಐಐ)ನ ವಿದ್ಯಾರ್ಥಿಗಳು ತನಗೆ ಬರೆದಿರುವ ಬಹಿರಂಗಪತ್ರದಲ್ಲಿ ಬೆಳಕುಚೆಲ್ಲಿರುವ ವಿಷಯಗಳು ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಾನು ಸಿದ್ದನಿರುವುದಾಗಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ನಟ ಅನುಪಮ್‌ಖೇರ್ ತಿಳಿಸಿದ್ದಾರೆ.

 ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಸಂಸ್ಥೆಯಾದ ಪುಣೆ ಮೂಲದ ಎಫ್‌ಟಿಐಐನ ಅದ್ಯಕ್ಷರಾಗಿ 62 ವರ್ಷ ವಯಸ್ಸಿನ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಬುಧವಾರ ಕೇಂದ್ರ ಸರಕಾರ ನೇಮಿಸಿದೆ.

  ಎಫ್‌ಟಿಐಐ ವಿದ್ಯಾರ್ಥಿಗಳು ಗುರುವಾರ ಅನುಪಮ್ ಖೇರ್ ಅವರಿಗೆ ಬಹಿರಂಗಪತ್ರವೊಂದನ್ನು ಬರೆದು, ಈ ಪ್ರತಿಷ್ಠಿತ ಅಭಿನಯ ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಾವಧಿಯ ಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಹಣ ಸಂಪಾದಿಸುವ ಉದ್ದೇಶದಿಂದ ಎಫ್‌ಟಿಐಐನಲ್ಲಿ ಅಲ್ಪಾವಧಿಯ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆಯೆಂದು ವಿದ್ಯಾರ್ಥಿಗಳು ಪತ್ರದಲ್ಲಿ ಆರೋಪಿಸಿದ್ದರು.

 ‘‘ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಈ ಬಗ್ಗೆ ಚರ್ಚಿಸಲು ನಾನು ಇಷ್ಟಪಡುವೆ.ಅವರಿಗೆ ನಾನೊಬ್ಬ ಹಿರಿಯ ವಿದ್ಯಾರ್ಥಿಯಿದ್ದ ಹಾಗೆ. 1978ರಲ್ಲಿ ನಾನು ಎಫ್‌ಟಿಐಐನ ವಿದ್ಯಾರ್ಥಿಯಾಗಿದ್ದೆ. 38 ವರ್ಷಗಳ ಬಳಿಕ ನಾನು ಅಧ್ಯಕ್ಷನಾಗಿ ಅಲ್ಲಿಗೆ ಹೋಗುತ್ತಿದ್ದೇನೆ’’ ಎಂದು ಖೇರ್ ಪತ್ರಕರ್ತರಿಗೆ ತಿಳಿಸಿದ್ದಾರೆ.

   ಮುಂಬೈನಲ್ಲಿ ಗುರುವಾರ ಸಂಜೆ ನಡೆದ ಜಿಯೋ ಎಂಎಎಂಐ 19ನೇ ಮುಂಬೈನ ಚಲನಚಿತ್ರೋತ್ಸವದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಓರ್ವ ನಟನಿಗೆ ಸಾಕಷ್ಟು ಬೋಧಿಸುವಂತಹ ಸಾಮರ್ಥ್ಯ ಇಂದಿನ ಯುವಜನತೆಗಿದೆ. ನಾವು ಜೊತೆಯಾಗಿ ಕುಳಿತು ಈ ಬಗ್ಗೆ ಚರ್ಚಿಸಲಿದ್ದೇವೆ ಹಾಗೂ ಈ ಮಹಾನ್ ಸಂಸ್ಥೆಯನ್ನು ಉನ್ನತ ಸ್ತರದೆಡೆಗೆ ಕೊಂಡೊಯ್ಯಲಿದ್ದೇವೆ ಎಂದು ಖೇರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News