ಲಂಕಾ ವಿಮಾನ ನಿಲ್ದಾಣ ನಡೆಸಲು ಭಾರತ ಮುಂದು

Update: 2017-10-13 16:33 GMT

ಕೊಲಂಬೊ, ಅ. 13: ಶ್ರೀಲಂಕಾದ ದಕ್ಷಿಣ ತುದಿಯಲ್ಲಿರುವ ವಿಮಾನ ನಿಲ್ದಾಣವೊಂದನ್ನು ಬಳಸುವ ಬಗ್ಗೆ ಆ ದೇಶದೊಂದಿಗೆ ಭಾರತ ಕೊನೆಯ ಹಂತದ ಮಾತುಕತೆಯಲ್ಲಿ ತೊಡಗಿದೆ ಎಂದು ಶ್ರೀಲಂಕಾದ ಸಚಿವರೊಬ್ಬರು ತಿಳಿಸಿದ್ದಾರೆ.

ಇದೇ ಭಾಗದಲ್ಲಿ ಚೀನಾ ತನ್ನ ‘ಬೆಲ್ಟ್ ಮತ್ತು ರಸ್ತೆ’ ಯೋಜನೆಯ ಭಾಗವಾಗಿ ಭಾರೀ ಹೂಡಿಕೆಯನ್ನು ಮಾಡಿದೆ.

ಹಂಬನ್‌ಟೋಟ ಪ್ರದೇಶದಲ್ಲಿ ಪರ್ಯಾಯ ಹೂಡಿಕೆದಾರರಿಗಾಗಿ ಶ್ರೀಲಂಕಾ ಶೋಧ ನಡೆಸುತ್ತಿತ್ತು ಎಂದು ನಾಗರಿಕ ವಾಯುಯಾನ ಸಚಿವ ನಿಮಲ್ ಸಿರಿಪಾಲ ಹೇಳಿದರು. ಈ ವಲಯದಲ್ಲಿ ಚೀನಾ ಒಂದು ಬಂದರನ್ನು ನಿರ್ಮಿಸಿದೆ ಹಾಗೂ ಅಲ್ಲಿ ಒಂದು ಹೂಡಿಕೆ ವಲಯ ಮತ್ತು ಒಂದು ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸುವುದಕ್ಕಾಗಿ ಮಾತುಕತೆಗಳಲ್ಲಿ ತೊಡಗಿದೆ.

‘‘ಆಗ ಭಾರತ ಈ ಪ್ರಸ್ತಾಪವನ್ನು ಮುಂದಿಟ್ಟಿತು’’ ಎಂದು ಸಿರಿಪಾಲ ತಿಳಿಸಿದರು.

ಹಂಬನ್‌ಟೋಟ ಪಟ್ಟಣವು ಪ್ರಪಂಚದ ಅತ್ಯಂತ ಸಕ್ರಿಯ ಹಡಗು ಮಾರ್ಗಗಳ ಪೈಕಿ ಒಂದರ ಸಮೀಪದಲ್ಲಿದೆ ಹಾಗೂ ಅದು ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಪ್ರಮುಖ ಭಾಗವಾಗಿದೆ.

ಇಲ್ಲಿನ ಬಂದರನ್ನು ಚೀನಾ 99 ವರ್ಷಗಳ ಲೀಸ್‌ನಲ್ಲಿ ಪಡೆದುಕೊಂಡಿದೆ ಹಾಗೂ ತೈಲಾ ಶುದ್ಧೀಕರಣ ಘಟಕ ಹಾಗೂ ಸುಮಾರು 15,000 ಎಕರೆ ಹೂಡಿಕೆ ವಲಯ ಸ್ಥಾಪನೆ ಮೂಲಕ ಈ ವಲಯದಲ್ಲಿನ ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಬಯಸುತ್ತಿದೆ.

ಹಂಬನ್‌ಟೋಟ ಬಂದರಿನ ಸಮೀಪದಲ್ಲಿರುವ ಮಟ್ಟಾಲ ವಿಮಾನ ನಿಲ್ದಾಣ ನಷ್ಟದಲ್ಲಿ ನಡೆಯುತ್ತಿದ್ದು, ಅದನ್ನು ಶ್ರೀಲಂಕಾದ ಜೊತೆಗೆ ಜಂಟಿಯಾಗಿ ವಿಸ್ತರಿಸುವ ಹಾಗೂ ನಡೆಸುವ ಇಂಗಿತವನ್ನು ಭಾರತ ವ್ಯಕ್ತಪಡಿಸಿದೆ.

ಭಾರತದಿಂದ ಯೋಜನಾ ಮೊತ್ತದ 70 ಶೇ. ಹೂಡಿಕೆ

ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಆರಂಭಿಕ ಬಂಡವಾಳ 293 ಮಿಲಿಯ ಡಾಲರ್ (ಸುಮಾರು 1,900 ಕೋಟಿ ರೂಪಾಯಿ) ಆಗಿದ್ದು, 40 ವರ್ಷಗಳ ಲೀಸ್‌ಗಾಗಿ ಭಾರತ ಬಂಡವಾಳದ 70 ಶೇಕಡವನ್ನು ಪೂರೈಸಲಿದೆ ಎಂದು ಶ್ರೀಲಂಕಾದ ಕ್ಯಾಬಿನೆಟ್ ಪೇಪರ್ ಹೇಳಿದೆ.

ಈ ವಿಮಾನ ನಿಲ್ದಾಣವನ್ನು ಚೀನಾ 253 ಮಿಲಿಯ ಡಾಲರ್ (1643 ಕೋಟಿ ರೂಪಾಯಿ) ವೆಚ್ಚದಲ್ಲಿ ನಿರ್ಮಿಸಿದೆ ಹಾಗೂ ಇದಕ್ಕಾಗಿ ಅದು 230 ಮಿಲಿಯ ಡಾಲರ್ (1494 ಕೋಟಿ ರೂಪಾಯಿ) ನಿಧಿಯನ್ನೂ ಒದಗಿಸಿದೆ.

ಆದರೆ, ಈ ವಿಮಾನ ನಿಲ್ದಾಣಕ್ಕೆ ದುಬೈಯಿಂದ ದಿನಕ್ಕೆ ಒಂದು ವಿಮಾನ ಮಾತ್ರ ಬರುತ್ತದೆ. ಇದನ್ನು ಜಗತ್ತಿನ ಖಾಲಿ ವಿಮಾನ ನಿಲ್ದಾಣ ಎಂಬುದಾಗಿ ಕರೆಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News