ಕ್ಯಾಲಿಫೋರ್ನಿಯ ಕಿಚ್ಚು ನಿಯಂತ್ರಣಕ್ಕೆ

Update: 2017-10-13 16:38 GMT

ಸ್ಯಾಕ್ರಮೆಂಟೊ (ಕ್ಯಾಲಿಫೋರ್ನಿಯ), ಅ. 13: ಕ್ಯಾಲಿಫೋರ್ನಿಯದಲ್ಲಿ ಭಾರೀ ವೇಗದಲ್ಲಿ ಹರಡುತ್ತಿದ್ದ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಗುರುವಾರ ಯಶಸ್ವಿಯಾಗಿದ್ದಾರೆ.

ಕಾಡ್ಗಿಚ್ಚಿನ ಪ್ರಕೋಪಕ್ಕೆ ಬಲಿಯಾದವರ ಸಂಖ್ಯೆ ಕನಿಷ್ಠ 31ಕ್ಕೇರಿದೆ ಹಾಗೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಜೊತೆಗೆ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಅಮೆರಿಕದ ಇತಿಹಾಸದಲ್ಲಿ ಅತೀ ಹೆಚ್ಚು ಜನರು ಮೃತಪಟ್ಟ ಕಾಡ್ಗಿಚ್ಚು ಇದಾಗಿದೆ. 1933ರಲ್ಲಿ ಲಾಸ್ ಏಂಜಲಿಸ್‌ನಲ್ಲಿ ನಡೆದ ಗ್ರಿಫಿತ್ ಪಾರ್ಕ್ ಬೆಂಕಿಯಲ್ಲಿ 29 ಮಂದಿ ಪ್ರಾಣ ಕಳೆದುಕೊಂಡಿದ್ದರು.

2017ರ ಬೆಂಕಿಯಲ್ಲಿ ಇದಕ್ಕಿಂತ ಇಬ್ಬರು ಹೆಚ್ಚಿಗೆ ಮೃತಪಟ್ಟಿದ್ದಾರೆ.

ಸುಮಾರು 3,500 ಮನೆಗಳು ಮತ್ತು ಅಂಗಡಿಗಳು ಸುಟ್ಟುಹೋಗಿವೆ.

ಅದೇ ವೇಳೆ, ಬೆಂಕಿಯು 1,90,000 ಎಕರೆಗೂ ಅಧಿಕ ಭೂಮಿಯನ್ನು ಸುಟ್ಟು ಹಾಕಿದೆ. ಇದು ನ್ಯೂಯಾರ್ಕ್ ನಗರದ ಗಾತ್ರಕ್ಕೆ ಸಮವಾಗಿದೆ.

ಇನ್ನೂ 463 ಮಂದಿ ನಾಪತ್ತೆ

ಸೊನೊಮ ನಗರದಲ್ಲಿ 900 ರಷ್ಟು ಜನ ನಾಪತ್ತೆಯಾಗಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಆ ಪೈಕಿ 437 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಸೊನೊಮ ಕೌಂಟಿ ಶರೀಫ್ ರಾಬ್ ಜಿಯೊರ್ಡಾನೊ ತಿಳಿಸಿದರು.

ಇನ್ನೂ ನಾಪತ್ತೆಯಾಗಿರುವ 463 ಮಂದಿ ಬೆಂಕಿಗೆ ಬಲಿಯಾಗಿದ್ದಾರೆಯೇ ಅಥವಾ ತಮ್ಮ ಮನೆಗಳನ್ನು ತೊರೆದು ಓಡಿದ ಬಳಿಕ ಅಧಿಕಾರಿಗಳಿಗೆ ತಿಳಿಸಲು ಮರೆತಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News