×
Ad

ಟೈಮ್ ಮ್ಯಾಗಝಿನ್‌ನ ಮುಂದಿನ ಪೀಳಿಗೆಯ ನಾಯಕರ ಪಟ್ಟಿಯಲ್ಲಿ ಗುರ್ಮೆಹರ ಕೌರ್

Update: 2017-10-13 23:46 IST

ಚಂಡಿಗಡ,ಅ.13: ದಿಲ್ಲಿ ವಿವಿಯ ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅವರನ್ನು ಪ್ರತಿಷ್ಠಿತ ಟೈಮ್ ಮ್ಯಾಗಝಿನ್ 2017ನೇ ಸಾಲಿಗೆ ತನ್ನ 10 ಮುಂದಿನ ಪೀಳಿಗೆಯ ನಾಯಕರ ಪಟ್ಟಿಯಲ್ಲಿ ಸೇರಿಸಿದೆ. 20ರ ಹರೆಯದ ಕೌರ್ ಅವರನ್ನು ‘ಅಭಿವ್ಯಕ್ತಿ ಸ್ವಾತಂತ್ರದ ಹೋರಾಟಗಾರ್ತಿ’ ಎಂದು ಮ್ಯಾಗಝಿನ್ ಪ್ರಶಂಸಿಸಿದೆ.

 ಜಲಂಧರ್ ನಿವಾಸಿಯಾಗಿರುವ ಕೌರ್ ಅವರು ಈ ವರ್ಷದ ಫೆಬ್ರವರಿಯಲ್ಲಿ ತನ್ನ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರ ಹಿಂಸಾಚಾರದ ವಿರುದ್ಧ ಧ್ವನಿಯೆತ್ತುವ ಮೂಲಕ ಮುಂಚೂಣಿಗೆ ಬಂದಿದ್ದರು. ತನ್ನ ನಿಲುವಿಗಾಗಿ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತನಗೆ ಎದುರಾಗಿದ್ದ ಯಾವುದೇ ಬೆದರಿಕೆಗಳಿಗೂ ಕೌರ್ ಮಣಿದಿರಲಿಲ್ಲ.

ಕೌರ್ ಕೇವಲ ಎರಡು ವರ್ಷಗಳ ಮಗುವಾಗಿದ್ದಾಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡುತ್ತ ಹುತಾತ್ಮರಾಗಿದ್ದರು.

‘ನನ್ನ ತಂದೆಯನ್ನು ಕೊಂದಿದ್ದು ಯುದ್ಧ, ಪಾಕಿಸ್ತಾನವಲ್ಲ ’ಎಂದು ಬರೆದಿದ್ದ ಭಿತ್ತಿಪತ್ರವನ್ನು ಹಿಡಿದುಕೊಂಡ ತನ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ಕೌರ್ ಪ್ರಬಲವಾದ ಸಂದೇಶವನ್ನು ಬೀರಲು ಪ್ರಯತ್ನಿಸಿದ್ದರು. ಇದು ಎಬಿವಿಪಿಯನ್ನು ಕೆರಳಿಸಿತ್ತು.

 ಟೈಮ್ ಮ್ಯಾಗಝಿನ್‌ನ ಪಟ್ಟಿಯಲ್ಲಿ ಕೌರ್ ಎರಡನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News