ದಾದ್ರಿ: ಅಖ್ಲಾಕ್ ಕೊಲೆ ಆರೋಪಿಗಳಿಗೆ ಉದ್ಯೋಗದ ಕೊಡುಗೆ !

Update: 2017-10-14 14:47 GMT

ಮೀರತ್, ಅ. 14: ಮನೆಯಲ್ಲಿ ಗೋಮಾಂಸ ಇದೆ ಎಂದು ಆರೋಪಿಸಿ 2015 ಸೆಪ್ಟಂಬರ್‌ನಲ್ಲಿ ದಾದ್ರಿಯ ಬಿಶಾರಾ ಗ್ರಾಮದಲ್ಲಿ ಮುಹಮ್ಮದ್ ಅಖ್ಲಾಕ್‌ರನ್ನು ಥಳಿಸಿ ಹತ್ಯೆಗೈದ 15 ಮಂದಿ ಆರೋಪಿಗಳಿಗೆ ಎನ್‌ಟಿಪಿಸಿ ಲಿಮಿಟೆಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸದ ಅವಕಾಶ ನೀಡಲಾಗಿದೆ.

ಅಕ್ಟೋಬರ್ 9ರಂದು ಎನ್‌ಟಿಪಿಸಿ ಹಿರಿಯ ಅಧಿಕಾರಿ ಗಳೊಂದಿಗೆ ನಡೆದ ಸಭೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ತೇಜ್‌ಪಾಲ್ ನಗರ್ ಈ ನೇಮಕಾತಿ ಸುಗಮಗೊಳಿಸಿದರು ಎಂದು ತಿಳಿದು ಬಂದಿದೆ.

ಈ ಆರೋಪಿಗಳು ಅಲಹಾಬಾದ್ ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಂಡಿದ್ದಾರೆ.

ತನ್ನ ಯೋಜನೆಯಿಂದ ಸಂತ್ರಸ್ತರಾದವರಿಗೆ ಸೌಲಭ್ಯ ನೀಡುವ ಮಹಾರಾತ್ನಾ ಕಂಪೆನಿಯ ಕಾರ್ಯಕ್ರಮದ ಒಂದು ಭಾಗವಾಗಿ ಆರೋಪಿಗಳಿಗೆ ಉದ್ಯೋಗ ನೀಡಲಾಗಿದೆ. ಎನ್‌ಟಿಪಿಸಿಯ ಸಮೀಪದಲ್ಲಿ ಬಿಶಾರಾ ಗ್ರಾಮವಿದೆ. ಎನ್‌ಟಿಪಿಸಿ ತನ್ನ ಯೋಜನೆ ಅನುಷ್ಠಾನಿಸಲು ಹಲವು ಗ್ರಾಮ ನಿವಾಸಿಗಳ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಆರೋಪಿ ಯುವಕರಿಗೆ ಉದ್ಯೋಗ ಅವಕಾಶ ನೀಡಲಾಗಿದೆ ಎಂದು ಎನ್‌ಟಿಪಿಸಿಯ ವಕ್ತಾರರು ತಿಳಿಸಿದ್ದಾರೆ.

ಬಿಶಾರಾದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ನಾವು ಒಪ್ಪಿಕೊಂಡಿದ್ದೇವೆ. ಅಖ್ಲಾಕ್ ಥಳಿಸಿ ಹತ್ಯೆ ನಡೆಸಿದ ಘಟನೆಗೂ ಇದಕ್ಕೂ ಸಂಬಂಧ ಇಲ್ಲ. ಯೋಜನೆಯಿಂದ ತೊಂದರೆಗೊಳಗಾದ ವ್ಯಕ್ತಿಗಳಿಗೆ ಅವರ ಅರ್ಹತೆ ಹಾಗೂ ತಜ್ಞತೆ ಅನುಸರಿಸಿ ಉದ್ಯೋಗ ನೀಡುವುದು ಎನ್‌ಟಿಪಿಸಿ ನೀತಿ ಎಂದು ಎನ್‌ಟಿಪಿಸಿಯ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News