ಅಮೆರಿಕ-ಪಾಕ್ ನಡುವೆ ನೈಜ ಸಂಬಂಧ ಆರಂಭ: ಟ್ರಂಪ್

Update: 2017-10-14 16:21 GMT

ವಾಶಿಂಗ್ಟನ್, ಅ.14: ಪಾಕಿಸ್ತಾನವು ಕಳೆದ ಹಲವಾರು ವರ್ಷಗಳಿಂದ ಅಮೆರಿಕದಿಂದ ಭರ್ಜರಿ ಸವಲತ್ತುಗಳನ್ನು ಪಡೆದಿದೆ. ಆದರೆ ಉಭಯ ದೇಶಗಳು ಈಗ ವಾಸ್ತವ (ನೈಜ) ಸಂಬಂಧ ಸಾಧಿಸುವ ನಿಟ್ಟಿನಲ್ಲಿ ಮುಂದುವರಿದಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹಖ್ಖಾನಿ ಭಯೋತ್ಪಾದಕ ತಂಡದ ವಶದಲ್ಲಿದ್ದ ಅಮೆರಿಕ-ಕೆನಡ ಪ್ರಜೆಗಳ ಕುಟುಂಬವನ್ನು ಪಾಕ್ ಪಡೆಗಳು ರಕ್ಷಿಸಿದ ಘಟನೆಯ ಹಿನ್ನೆಲೆಯಲ್ಲಿ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.ಪಾಕಿಸ್ತಾನ ಹಾಗೂ ಅದರ ಮುಖಂಡರೊಂದಿಗೆ ಉತ್ತಮ ಸಂಬಂಧ ಸಾಧಿಸುವ ಪ್ರಕ್ರಿಯೆ ಆರಂಭವಾಗಿದೆ. ಅಮೆರಿಕಕ್ಕೆ ಹಲವು ಕ್ಷೇತ್ರಗಳಲ್ಲಿ ನೀಡಿರುವ ಸಹಕಾರಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಟ್ರಂಪ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಅಫ್ಘಾನಿಸ್ತಾನಕ್ಕೆ ಪ್ರವಾಸ ತೆರಳಿದ್ದ ಅಮೆರಿಕದ ಪ್ರಜೆ ಕ್ಯಾತ್ಲನ್ ಕೋಲ್‌ಮನ್ ಹಾಗೂ ಆಕೆಯ ಕೆನಡಿಯನ್ ಪತಿ ಜೊಶ್ವಾ ಬಾಯ್ಲೆಯನ್ನು 2012ರಲ್ಲಿ ಹಖ್ಖಾನಿ ಉಗ್ರರ ಸಂಘಟನೆ ಅಪಹರಿಸಿತ್ತು. ಈ ದಂಪತಿ ಬಂಧಿಯಾಗಿದ್ದ ಅವಧಿಯಲ್ಲಿ ಇವರಿಗೆ ಮೂವರು ಮಕ್ಕಳು ಜನಿಸಿದ್ದರು.

ಅಮೆರಿಕದ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ್ದ ಪಾಕ್ ಪಡೆಗಳು ಗುರುವಾರ ಈ ದಂಪತಿಯನ್ನು ಮೂವರು ಮಕ್ಕಳ ಸಹಿತ ರಕ್ಷಿಸಲು ಯಶಸ್ವಿಯಾಗಿದ್ದರು.

ಈ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನವನ್ನು ಶ್ಲಾಘಿಸಿರುವ ಟ್ರಂಪ್, ಪಾಕಿಸ್ತಾನ ಮತ್ತೆ ಅಮೆರಿಕವನ್ನು ಗೌರವಿಸಲು ಆರಂಭಿಸಿದೆ ಎಂದಿದ್ದಾರೆ.

ಪಾಕಿಸ್ತಾನ ನಮ್ಮಿಂದ ಹಲವಾರು ವರ್ಷಗಳಿಂದ ಭರ್ಜರಿ ಅನುಕೂಲಗಳನ್ನು ಪಡೆದುಕೊಂಡಿದೆ ಎಂದು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ ನಾವು ಈಗ ವಾಸ್ತವ ಸಂಬಂಧ ಸಾಧಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದೇವೆ. ಅವರು ಹಾಗೂ ಇತರ ದೇಶಗಳು ಅಮೆರಿಕವನ್ನು ಒಂದು ರಾಷ್ಟ್ರವೆಂದು ಮತ್ತೆ ಗೌರವಿಸಲು ಆರಂಭಿಸಿದ್ದಾರೆ ಎಂದು ಟ್ರಂಪ್ ಹೇಳಿದರು.

 ಟ್ರಂಪ್ ಹೇಳಿಕೆಗೆ ಧ್ವನಿಗೂಡಿಸಿರುವ ಡೆಮಕ್ರಾಟ್ ಸಂಸದ ಟೆಡ್ ಲ್ಯು, ಟ್ರಂಪ್ ಹೇಳಿಕೆಯನ್ನು ತಾನು ಒಪ್ಪುವುದಾಗಿ ತಿಳಿಸಿದ್ದಾರೆ. ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಪಾಕಿಸ್ತಾನವು ಒಂದು ಪ್ರಮುಖ ಮಿತ್ರರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಶೀಘ್ರದಲ್ಲೇ ಪಾಕ್‌ಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

 ಹಖ್ಖಾನಿ ಉಗ್ರರ ಗುಂಪು ಅಪಘಾನಿಸ್ತಾನದಲ್ಲಿ ಅಮೆರಿಕದ ಸಂಸ್ಥೆ ಹಾಗೂ ನಾಗರಿಕರನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದೆ. ಅಲ್ಲದೆ 2008ರಲ್ಲಿ ಕಾಬೂಲ್‌ನಲ್ಲಿ ಭಾರತೀಯ ದೂತಾವಾಸದ ಮೇಲೆ ನಡೆದ ಬಾಂಬ್ ದಾಳಿಯೂ (58 ಮಂದಿ ಮೃತಪಟ್ಟಿದ್ದರು) ಸೇರಿದಂತೆ ಅಪಘಾನಿಸ್ತಾನದಲ್ಲಿ ಭಾರತೀಯರ ಮೇಲೆ ಹಲವಾರು ಮಾರಣಾಂತಿಕ ದಾಳಿಗಳನ್ನೂ ಈ ಸಂಘಟನೆಯೇ ಮಾಡಿದೆ .

 ಪಾಕ್‌ಗೆ ಟ್ರಂಪ್ ಶ್ಲಾಘನೆ

ಕಳೆದ ಆಗಸ್ಟ್ ತಿಂಗಳಿನಲ್ಲಿ ಅಫ್ಘಾನಿಸ್ತಾನ ಹಾಗೂ ದಕ್ಷಿಣ ಏಶ್ಯಾ ಕುರಿತ ತನ್ನ ಕಾರ್ಯನೀತಿಯನ್ನು ಘೋಷಿಸುವ ಸಂದರ್ಭ ಟ್ರಂಪ್, ಭಯೋತ್ಪಾದಕರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಪಾಕಿಸ್ತಾನವನ್ನು ಟೀಕಿಸಿದ್ದರು. ಹಾಗೂ ಪಾಕ್ ಉಗ್ರರಿಗೆ ಬೆಂಬಲ ಸ್ಥಗಿತಗೊಳಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈಗ ಟ್ರಂಪ್ ಪಾಕ್ ಬಗ್ಗೆ ಮೃದು ಧೋರಣೆ ತಳೆದಿದ್ದು, ಪಾಕ್, ಅಮೆರಿಕವನ್ನು ಮತ್ತೆ ಗೌರವಿಸಲು ಆರಂಭಿಸಿದೆ ಎಂದು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News