​ ಮಾತೃ-ಪ್ರೇಮದ ಜೊತೆಗೆ ರೌಡಿಸಮ್ ಕರಿಯಕ್ರಮ!

Update: 2017-10-14 18:31 GMT

ಚಿತ್ರ: ಕರಿಯ 2
ತಾರಾಗಣ: ಸಂತೋಷ್ ಬಾಲರಾಜ್, ಮಯೂರಿ ಕ್ಯಾತರಿ
ನಿರ್ದೇಶನ: ಪ್ರಭು ಶ್ರೀನಿವಾಸ್
ನಿರ್ಮಾಣ: ಆನೇಕಲ್ ಬಾಲರಾಜ್

ಯಶಸ್ವಿ ಚಿತ್ರಗಳ ಎರಡನೆ ಭಾಗಗಳ ಸೃಷ್ಟಿ ಹಿಂದಿನಿಂದಲೂ ನಡೆದಿದೆ. ಆದರೆ ಕರಿಯ 2ರ ಮಟ್ಟಿಗೆ ಮೊದಲ ಭಾಗದಲ್ಲಿ ನಾಯಕರಾಗಿದ್ದ ಛಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿಲ್ಲ ಎನ್ನುವುದೇ ಪ್ರಥಮ ಛಾಲೆಂಜ್ ಎನ್ನಬಹುದು.

ಕರಿಯ ಎಂದೊಡನೆ ಚಿತ್ರದಲ್ಲಿ ದರ್ಶನ್ ಗೆ ನೀಡಿರುವ ಇಂಟ್ರಡಕ್ಷನ್ ದೃಶ್ಯ ಮರೆಯಲಾಗದು. ನಾಯಕನ ಪರಿಚಯವನ್ನು ಇಲ್ಲಿಯೂ ಅಂಥದೇ ಒಂದು ಮೈನವಿರೇಳಿಸುವ ದೃಶ್ಯದೊಂದಿಗೆ ನೀಡಲಾಗಿದೆ. ಆದರೆ ಚಿತ್ರದ ನಾಯಕನ ಹೆಸರು ಮತ್ತು ರೌಡಿಸಂ ಫೀಲ್ಡು ಇವೆರಡಕ್ಕಷ್ಟೇ ಹೋಲಿಕೆಗಳು ಸೀಮಿತವಾಗುತ್ತವೆ. ಉಳಿದಂತೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧಗಳಿಲ್ಲ. ಬಹಳಷ್ಟು ಯಶಸ್ವಿ ರೌಡಿಸಂ ಚಿತ್ರಗಳಂತೆ ಈ ಚಿತ್ರದ ರೌಡಿಗೂ ಒಂದು ಪ್ರೇಮಕತೆಯಿದೆ. ಆ ಪ್ರೇಯಸಿಗೂ ಕತೆಯಲ್ಲೊಂದು ಮುಖ್ಯ ಪಾಲಿದೆ. ನಾಯಕಿಗೆ ಪ್ರಾಮುಖ್ಯತೆ ನೀಡುವ ಚಿತ್ರಗಳಲ್ಲಿ ಎಂದಿಗೂ ಗಟ್ಟಿಯಾದ ಕಥಾ ಹಂದರವಿರುತ್ತದೆ. ಅಂಥದೊಂದು ನಾಯಕಿಯ ಪಾತ್ರದಲ್ಲಿ ನಟಿಸಲು ಮಯೂರಿ ಕ್ಯಾತರಿಗೆ ಮತ್ತೊಂದು ಅವಕಾಶ ದೊರಕಿದೆ.

ಚಿತ್ರದಲ್ಲಿ ಆಕೆಯ ಹೆಸರು ಜಾನಕಿ. ಕರಿಯ ಮತ್ತು ಜಾನಕಿ ಪ್ರೇಮ-ದ್ವೇಷದ ಕತೆ ಹೊಸದೇನೂ ಅಲ್ಲ. ಆದರೆ ಅದನ್ನು ಫ್ಲ್ಯಾಶ್ ಬ್ಯಾಕ್ ಮೂಲಕ ನಿರೂಪಿಸಿರುವ ರೀತಿ ಆಕರ್ಷಕವಾಗಿದೆ. ನಾಯಕನಾಗಿ ಸಂತೋಷ್ ಗಣಪ ಚಿತ್ರದಂತೆ ಇಲ್ಲಿಯೂ ಹೊಡೆದಾಟ ಮತ್ತು ಮುಗ್ಧ ಪ್ರೇಮ ತೋರುವ ಪ್ರತೀ ದೃಶ್ಯದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.ತಲೆಗೆ ಏಟು ಬಿದ್ದು ಸ್ಥಿಮಿತ ಕಳೆದುಕೊಂಡ ಮೇಲೆ ಆತ ಓಡಾಡುವ ರೀತಿ ‘ಪಿತಾಮಗನ್’ ಚಿತ್ರದ ವಿಕ್ರಮ್‌ನ ಹಾವಭಾವ ನೆನಪಿಸುತ್ತದೆ. ನಾಯಕಿಯಾಗಿ ಮಯೂರಿ ದ್ವೇಷದ ಕಿಚ್ಚು ಮತ್ತು ತುಂಟಾಟವನ್ನು ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ‘ಕಬಾಲಿ’ ಚಿತ್ರದ ರಜನಿಕಾಂತ್‌ರ ಪಂಚ್ ಡೈಲಾಗ್ ಹೋಲುವ ಸಂಭಾಷಣೆ ನುಡಿಯುವ ದೃಶ್ಯ ಮಯೂರಿಯಲ್ಲಿನ ವೈವಿಧ್ಯಕ್ಕೆ ಕನ್ನಡಿ. ಬೋಳು ತಲೆಯ ಖಳನಾಯಕ ಕೂಡ ಚಿತ್ರ ಮುಗಿದ ಮೇಲೆಯೂ ನೆನಪಲ್ಲಿ ಉಳಿಯುತ್ತಾನೆ. ಆದರೆ ಹಾಸ್ಯದ ಸನ್ನಿವೇಶಗಳನ್ನು ಮಾತ್ರ ತಮಿಳು, ಮಲಯಾಳಂ ಚಿತ್ರಗಳಿಂದ ಎತ್ತಿಕೊಳ್ಳಲಾಗಿದೆ.

ಹಾಡಿನ ವಿಚಾರಕ್ಕೆ ಬಂದರೆ ‘ಅನುಮಾನವೇ ಇಲ್ಲ..’ ಎನ್ನುವುದು ಅರ್ಮಾನ್ ಮಲಿಕ್ ಕಂಠದಲ್ಲಿ ಜನಪ್ರಿಯವಾದ ಗೀತೆ. ಆದರೆ ಹಾಡಿನ ಪಲ್ಲವಿ ಕೇಳುವಾಗ ‘ಅಂದಾಜು ಸಿಗುತ್ತಿಲ್ಲ..’ ಎನ್ನುವ ಸೋನು ನಿಗಮ್ ಕಂಠದ ಹಾಡು ನೆನಪಾಗುವುದರಲ್ಲಿ ಅನುಮಾನವೇ ಇಲ್ಲ. ಅದು ‘ಟೋನಿ’ ಚಿತ್ರಕ್ಕೆ ಸಾಧು ಕೋಕಿಲ ರಾಗ ಸಂಯೋಜಿಸಿದ ಗೀತೆ. ಬಹುಶಃ ಸಂಗೀತ ನಿರ್ದೇಶಕ ಕರಣ್ ಬಿ ಕೃಪ ಆ ಹಾಡು ಆಲಿಸಿರಬಹುದೇ ಎನ್ನುವುದು ತಿಳಿಯದು.

ಒಟ್ಟು ಚಿತ್ರದ ಆಕರ್ಷಕ ಅಂಶಗಳಾಗಿ ಪ್ರತಿಯೊಂದು ಸಾಹಸ ಸಂಯೋಜನೆ, ಅಮ್ಮ ಎಂದಾಗ ಸ್ಟ್ಯಾಚ್ಯು ಆಗಿ ಬಿಡುವ ಕರಿಯನ ಅಸ್ವಸ್ಥತೆಯನ್ನು ತೋರಿಸಿರುವ ರೀತಿ ಮತ್ತು ಮಧ್ಯಂತರದ ಬಳಿಕ ಕತೆಗೆ ಸಿಗುವ ಅನಿರೀಕ್ಷಿತ ತಿರುವು ಹಾಗೂ ಶ್ರೀನಿವಾಸ್ ದೇವಸ್ವಂ ಛಾಯಾಗ್ರಹಣ ಕಲೆ ಮೊದಲಾದವನ್ನು ಮೆಚ್ಚಲೇಬೇಕು. ಕರಿಯ ಚಿತ್ರದಂತೆ ರೌಡಿಯ ಪ್ರೇಮದ ಜತೆಗೆ ‘ಜೋಗಿ’ ಸಿನಿಮಾದ ಅಮ್ಮ ಸೆಂಟಿಮೆಂಟ್ ಕೂಡ ಸೇರಿಸಿರುವುದು ನಿರ್ದೇಶಕರ ಬುದ್ಧಿವಂತಿಕೆಗೆ ಸಾಕ್ಷಿ. ಆದರೆ ಅದೇ ಸೀಮಿತ ವಲಯದಲ್ಲೇ ಇರುವುದು ಚಿತ್ರದ ಕೊರತೆಯೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News