ಕಟಕ: ಹಾರರ್, ಸೆಂಟಿಮೆಂಟ್‌ಗಳ ಸಂಗಮ

Update: 2017-10-14 18:41 GMT

ಅದೊಂದು ಗಂಡ,ಹೆಂಡತಿ ಹಾಗೂ ಪುಟಾಣಿ ಹೆಣ್ಣು ಮಗುವಿರುವ ಪುಟ್ಟ ಸಂಸಾರ. ಈ ದಂಪತಿ ಹಳ್ಳಿಯೊಂದರಲ್ಲಿ ಬಂದು ನೆಲೆಸುತ್ತಾರೆ. ಅಲ್ಲೊಂದು ಶಾಲೆಯನ್ನು ಸ್ಥಾಪಿಸುವ ಯೋಚನೆ ಪತಿಯದು. ಆದರೆ ‘ದುಷ್ಟ ಶಕ್ತಿ’ಯೊಂದು ಆ ಅಮಾಯಕ ಮಗುವಿನ ಮೇಲೆ ತನ್ನ ಕೆಟ್ಟ ದೃಷ್ಟಿಯನ್ನು ಬೀರುತ್ತದೆ. ಆನಂತರ ಭಯಾನಕ, ಕೌತುಕ ಹಾಗೂ ಸೆಂಟಿಮೆಂಟ್‌ಗಳಲ್ಲಿ ಪ್ರೇಕ್ಷಕ ತೇಲಿಹೋಗುತ್ತಾನೆ. ಉದಯೋನ್ಮುಖ ನಿರ್ದೇಶಕ ರವಿಬಸ್ರೂರು ನಿರ್ದೇಶನದ ಕಟಕ, ಒಂದು ಹಂತದಲ್ಲಿ ನಮಗೆ 90ರ ದಶಕದ ಹಾಲಿವುಡ್ ಹಾರರ್ ಚಿತ್ರ ‘ಪೊಲ್ಟರ್‌ಜೀಸ್ಟ್’ನನ್ನು ನೆನಪಿಸುತ್ತದೆ. ಆದಾಗ್ಯೂ, ಕಟಕ, ಕಥೆ ಹಾಗೂ ನಿರೂಪಣೆಯಲ್ಲಿ ಬಹಳಷ್ಟು ಮಟ್ಟಿಗೆ ಒರಿಜಿನಾಲಿಟಿಯನ್ನು ಕಾಯ್ದುಕೊಂಡಿದೆ. ಅಷ್ಟೇ ಅಲ್ಲ ಪ್ರೇಕ್ಷಕರನ್ನು ಕೇವಲ ಭಯದಲ್ಲಿ ಕೆಡವಿ ರಂಜಿಸುವ ಜೊತೆಗೆ ಕಥೆಯಲ್ಲಿ ಹಲವಾರು ಭಾವನಾತ್ಮಕ ಸನ್ನಿವೇಶಗಳನ್ನು ಹದವಾಗಿ ಬೆರೆಸುವ ಮೂಲಕ ಚಿತ್ರಕ್ಕೆ ಮೆರುಗು ನೀಡಿದ್ದಾರೆ.

    ಸಾಮಾನ್ಯವಾಗಿ ಹಾರರ್ ಚಿತ್ರಗಳಲ್ಲಿರುವ ಥ್ರಿಲ್ಲಿಂಗ್ ಸನ್ನಿವೇಶಗಳು ಹಾಗೂ ಭಯಾನಕ ದೃಶ್ಯಗಳ ಜೊತೆಗೆ ನಿರ್ದೇಶಕರು ಸುಂದರವಾದ ಕಥೆಯನ್ನು ಹೆಣೆದಿರುವುದು ಕಟಕವನ್ನು ಸದಭಿರುಚಿಯ ಚಿತ್ರವನ್ನಾಗಿ ಮಾಡಿದೆ. ಕುಮಾರ್ (ಅಶೋಕ್ ರಾಜ್)ಗೆ ನಗರ ವೊಂದರಲ್ಲಿ ಶಾಲಾ ಶಿಕ್ಷಕ. ಆದರೆ ಕ್ರಮೇಣ ಆತನಿಗೆ ಪೇಟೆಯ ಧಾವಂತದ ಬದುಕು ಬೇಸರ ಮೂಡಿಸುತ್ತದೆ. ಹೀಗಾಗಿ ಆತ ತನ್ನ ಹುಟ್ಟೂರಿಗೆ ಮರಳಿಬರಲು ನಿರ್ಧರಿಸುತ್ತಾನೆ. ಊರಿನಲ್ಲಿ ತನ್ನದೇ ಆದ ಶಾಲೆಯನ್ನು ಸ್ಥಾಪಿಸಿ, ಅಲ್ಲಿ ಹಳ್ಳಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮಹತ್ವಾಕಾಂಕ್ಷೆ ಹೊಂದಿರುತ್ತಾನೆ.

   ಪತ್ನಿ ಹಾಗೂ ಮಗುವಿನೊಂದಿಗೆ ಊರಿಗೆ ಬಂದ ಕುಮಾರ್, ಅಲ್ಲಿ ತನ್ನ ಚಿಕ್ಕಪ್ಪನೊಂದಿಗೆ ವಾಸವಾಗುತ್ತಾನೆ. ತನ್ನ ಬಾಲ್ಯಕಾಲದ ಸ್ನೇಹಿತ ಹಾಗೂ ಚಿಕ್ಕಪ್ಪನ ನೆರವು ಪಡೆದು ಶಾಲೆಯ ನಿರ್ಮಾಣ ಯೋಜನೆಗೆ ಸಿದ್ಧತೆ ನಡೆಸುತ್ತಾನೆ. ಆದರೆ ಹಳ್ಳಿಯ ಕೆಲವರಿಗೆ ಕುಮಾರ್‌ನ ಚಿಂತನೆ ಇಷ್ಟವಾಗುವುದಿಲ್ಲ. ಶಾಲೆಯನ್ನು ಸ್ಥಾಪಿಸದಂತೆ ಅವರು ತಡೆಯಲು ಮುಂದಾಗುತ್ತಾರೆ. ದಿನಕಳೆದಂತೆ ಕುಮಾರ್‌ಗೆ ತನ್ನ ಗ್ರಾಮದಲ್ಲಿ ಹಲವಾರು ವೈರಿಗಳು ಹುಟ್ಟಿಕೊಳ್ಳುತ್ತಾರೆ. ಅದೇ ಹೊತ್ತಿಗೆ ಕುಮಾರ್‌ನ ಮುದ್ದಿನ ಮಗಳು ವಾಮಾಚಾರದ ಬಲೆಗೆ ಸಿಲುಕಿಕೊಳ್ಳುತ್ತಾಳೆ. ಆಕೆಯನ್ನು ದೆವ್ವ ಆವರಿಸಿಕೊಳ್ಳುತ್ತದೆ. ಇಡೀ ಕುಟುಂಬಕ್ಕೆ ಭೀತಿಯ ಬರಸಿಡಿಲು ಬಡಿಯುತ್ತದೆ. ಕ್ಷಣಕ್ಷಣಕ್ಕೂ ಉಲ್ಬಣಿಸುವ ಈ ಸಮಸ್ಯೆಯಿಂದ ಕುಟುಂಬ ಹೇಗೆ ಹೊರಬರುತ್ತದೆಯೆಂಬುದನ್ನು ಬಸ್ರೂರ್ ರೋಮಾಂಚನಗೊಳಿಸುವ ರೀತಿಯಲ್ಲಿ ಪರದೆಯ ಮೇಲೆ ಮೂಡಿಸಿದ್ದಾರೆ.

  ಕರಾವಳಿ ಕರ್ನಾಟಕದ ಧಾರ್ಮಿಕ ಆಚರಣೆಗಳು, ಜಾನಪದ ಸಂಸ್ಕೃತಿಯ ಯಥೇಚ್ಛ ದೃಶ್ಯಗಳನ್ನು ಚಿತ್ರದುದ್ದಕ್ಕೂ ತೋರಿಸಲಾಗಿದ್ದು ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗಿದೆ. ಹಾರರ್ ದೃಶ್ಯಗಳ ಜೊತೆಜೊತೆಗೆ ಆಚರಣೆಯಲ್ಲಿರುವ ಕೆಲವು ವಾಮಾಚಾರದ ವಿಧಿವಿಧಾನಗಳ ಬಗ್ಗೆಯೂ ಚಿತ್ರ ಬೆಳಕು ಚೆಲ್ಲುತ್ತದೆ.

   ತಾಂತ್ರಿಕವಾಗಿಯೂ ಕಟಕ ಉತ್ಕೃಷ್ಟವಾಗಿದ್ದು, ಉತ್ತಮವಾದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣವು ಚಿತ್ರಕ್ಕೆ ಶೋಭೆಯನ್ನು ತುಂಬಿದೆ. ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅಶೋಕ್ ರಾಜ್ ಹಾಗೂ ಸ್ಪಂದನಾ, ಗಮನಸೆಳೆಯುವ ಅಭಿನಯ ನೀಡಿದ್ದಾರೆ. ಆದರೆ ಎಲ್ಲರಿಗೂ ಇಷ್ಟವಾಗುವುದು ಬಾಲನಟಿ ಶ್ಲಾಘಾ ಸಾಲಿಗ್ರಾಮಳ ಅಭಿನಯ. ಖಂಡಿತವಾಗಿಯೂ ಚಿತ್ರ ನೋಡಿದವರಿಗೆ ಶ್ಲಾಘಾ ಅಭಿನಯ ಬಹಳ ಸಮಯದವರೆಗೆ ನೆನಪಿನಲ್ಲುಳಿಯುತ್ತದೆ. ವಾಮಾಚಾರಕ್ಕೆ ಸಿಲುಕುವ ಬಾಲಕಿಯಾಗಿ ನಟಿಸಿರುವ ಶ್ಲಾಘಾ ಅಭಿನಯವೇ ಚಿತ್ರದ ಪ್ರಮುಖ ಹೈಲೈಟ್‌ಳಲ್ಲೊಂದು. ಗ್ರಾಫಿಕ್ ದೃಶ್ಯಗಳನ್ನು ಕೂಡಾ ಸಹನೀಯವೆನಿಸುವ ರೀತಿಯಲ್ಲಿ ಚಿತ್ರದಲ್ಲಿ ಅಳವಡಿಸಿರುವುದು ಇನ್ನೊಂದು ಮೆಚ್ಚತಕ್ಕ ಅಂಶ. ಕೆಲವು ನಾಟಕೀಯವೆನಿಸುವ ಸನ್ನಿವೇಶಗಳನ್ನು ಬಿಟ್ಟರೆ, ಕಟಕ ಎಲ್ಲಿಯೂ ಪ್ರೇಕ್ಷಕರ ಸಹನೆಯನ್ನು ಕುಟುಕುವುದಿಲ್ಲ. ಛಾಯಾಗ್ರಾಹಕ ಸಚಿನ್ ಬಸ್ರೂರ್, ಕರಾವಳಿ ಯ ದೃಶ್ಯಗಳನ್ನು ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇದರೊಂದಿಗೆ ಕನ್ನಡ ಸಿನೆಮಾ ಜಗತ್ತಿಗೆ ಹೊಸ ಭರವಸೆಯ ಛಾಯಾಗ್ರಾಹಕರೊಬ್ಬರು ದೊರೆತಂತಾಗಿದೆ. ಅನಿಮೇಶನ್‌ನಲ್ಲಿ ಸೃಷ್ಟಿಯಾಗಿರುವ ಏಡಿಗೂ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ.

ಚಿತ್ರದಲ್ಲಿ ಪ್ರಭಾವಪೂರ್ಣವಾದ ಅಭಿನಯವನ್ನು ನೀಡಿರುವ ಇನ್ನೋರ್ವ ನಟನೆಂದರೆ ಮಾಧವಕರ್ಕಡ. ಖಂಡಿತವಾಗಿಯೂ ಈ ಉದಯೋನ್ಮುಖ ನಟ ಸ್ಯಾಂಡಲ್‌ವುಡ್‌ಗೆ ದೊಡ್ಡ ಅಸ್ತಿಯಾಗಲಿದ್ದಾರೆ.

ಅದ್ಭುತವಾದ ಅನಿಮೇಶನ್ ಹಾಗೂ ಹಾರರ್ ದೃಶ್ಯಗಳ ಸುಂದರವಾದ ಸಂಯೋಜನೆಯೇ ಕಟಕ ಎಂದರೆ ತಪ್ಪಾಗಲಾರದು.ನೀವು ಹಾರರ್ ಚಿತ್ರಗಳ ಅಭಿಮಾನಿಯಾಗಿದ್ದರೆ, ಖಂಡಿತವಾಗಿಯೂ ಕಟಕವನ್ನು ಒಂದು ಸಲವಾದರೂ ತಪ್ಪದೆ ನೋಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News