ಈ ಅದ್ಭುತ ಪೇಯ ಸಂಧಿವಾತಕ್ಕೆ ರಾಮಬಾಣ

Update: 2017-10-15 11:17 GMT

ನಮ್ಮ ಶರೀರವು ಮೂಳೆಗಳು, ಸ್ನಾಯುಗಳು ಮತ್ತು ನರಗಳ ಸಂಕೀರ್ಣ ವ್ಯವಸ್ಥೆಯಾಗಿದೆ. ಅವು ಒಂದಾಗಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತ ಬದುಕಿನುದ್ದಕ್ಕೂ ನಮ್ಮನ್ನು ಜೀವನ್ಮುಖಿಯಾಗಿರಿಸುತ್ತವೆ. ಮಾನವ ಶರೀರವು ಮುಖ್ಯವಾಗಿ ಪ್ರೋಟಿನ್‌ನಿಂದ ನಿರ್ಮಾಣಗೊಂಡಿದ್ದು, ವಯಸ್ಸಾದಂತೆ ಅದರ ಉತ್ಪಾದನೆ ಕುಂಠಿತಗೊಳ್ಳುತ್ತದೆ ಮತ್ತು ಇದೇ ಕಾರಣದಿಂದ ಯುವಜನರಿಗಿಂತ ವಯಸ್ಸಾದವರು ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.

ಮೂಳೆಗಳು ಮತ್ತು ಸಂದುಗಳ ಸವಕಳಿಯು ವಯಸ್ಸಾದವರಲ್ಲಿ ಸಾಮಾನ್ಯವಾಗಿದೆ. ವಯಸ್ಸಾಗುತ್ತಿದ್ದಂತೆ ಮೂಳೆಗಳು ಕ್ಯಾಲ್ಶಿಯಂ ಅನ್ನು ಕಳೆದುಕೊಳ್ಳಲು ಆರಂಭಿಸುತ್ತವೆ. ಜೊತೆಗೆ ಸ್ನಾಯುಗಳು ದುರ್ಬಲಗೊಳ್ಳುತ್ತ ಸಂದುಗಳಲ್ಲಿ ನೋವನ್ನುಂಟು ಮಾಡುತ್ತವೆ. ವಯಸ್ಸಾದವರಲ್ಲಿ ತೀರ ಸಾಮಾನ್ಯವಾಗಿರುವ ಈ ಸಮಸ್ಯೆಗೆ ನಾವು ಸಂಧಿವಾತ ಅಥವಾ ಕೀಲೂತ ಎಂದು ಕರೆಯುತ್ತೇವೆ.

ಸಂಧಿವಾರಕ್ಕೆ ಹಲವಾರು ಚಿಕಿತ್ಸೆಗಳು ಲಭ್ಯವಿವೆ. ಆದರೆ ನೈಸರ್ಗಿಕ ಪರಿಹಾರೋ ಪಾಯಗಳು ಸರ್ವಕಾಲಕ್ಕೂ ಅತ್ಯುತ್ತಮ ಎಂದು ಸಾಬೀತಾಗಿದೆ. ಮುಳ್ಳುಸೌತೆಯ ರಸ ಮತ್ತು ಅರಿಷಿಣ ಸಂಧಿವಾತ ಚಿಕಿತ್ಸೆಯಲ್ಲಿ ತುಂಭ ಪರಿಣಾಮಕಾರಿಯಾಗಿವೆ.

ಮುಳ್ಳುಸೌತೆಯು ನೋವನ್ನು ಕಡಿಮೆ ಮಾಡಬಲ್ಲ ಅತ್ಯುತ್ತಮ ಉರಿಯೂತ ನಿವಾರಕ ಗುಣವನ್ನು ಹೊಂದಿದೆ. ಅದೇ ರೀತಿ ಅರಿಷಿಣವು ಉರಿಯೂತ ಮತ್ತು ಸಂದುಗಳು ಪೆಡಸಾಗುವುದನ್ನು ತಗ್ಗಿಸುತ್ತದೆ. ಸಂಧಿವಾತವನ್ನು ನಿವಾರಿಸುವ ಪೇಯವನ್ನು ತಯಾರಿಸಲು ಇವೆರಡು ಮುಖ್ಯವಾಗಿವೆ.

 

ಒಂದು ಮುಳ್ಳುಸೌತೆಯನ್ನು ಅದರ ಸಿಪ್ಪೆಯನ್ನು ತೆಗೆಯದೇ ಹೆಚ್ಚಿಕೊಳ್ಳಿ. ಇದನ್ನು ಒಂದು ಇಂಚು ಉದ್ದದ ಅರಿಷಿಣ ಕೊಂಬಿನೊಂದಿಗೆ ಸೇರಿಸಿ ಜ್ಯೂಸರ್‌ನಲ್ಲಿ ಹಾಕಿ. ಅಗತ್ಯವಾದರೆ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ. ಕೆಲವು ಹನಿಗಳಷ್ಟು ವೆನಿಲ್ಲಾ ಸಾರವನ್ನು ಈ ರಸಕ್ಕೆ ಬೆರೆಸಿಕೊಂಡು ಕುಡಿಯಿರಿ.

ಸಂಧಿನೋವಿನಿಂದ ಶೀಘ್ರ ಉಪಶಮನ ಬೇಕಾದರೆ ಈ ರಸವನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಸೇವಿಸಬೇಕು. ಬೊಜ್ಜುದೇಹ ಸಂಧಿನೋವಿಗೆ ಕಾರಣವಾಗಿದ್ದರೆ ಈ ರಸವನ್ನು ಸೇವಿಸುವ ಜೊತೆಗೆ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News