ನಾಳೆ ಜರ್ಮನಿ-ಕೊಲಂಬಿಯಾ ಕಾದಾಟ

Update: 2017-10-15 17:56 GMT

ಹೊಸದಿಲ್ಲಿ, ಅ.15: ಫುಟ್ಬಾಲ್‌ನ ಅತ್ಯಂತ ದೊಡ್ಡ ಪ್ರತಿಭಾನ್ವೇಷಣೆ ಪಂದ್ಯಾವಳಿಯಾಗಿರುವ ಫಿಫಾ ಅಂಡರ್-17 ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳು ಸೋಮವಾರ ಇಲ್ಲಿ ಆರಂಭವಾಗಲಿದ್ದು, ಜರ್ಮನಿ ಹಾಗೂ ಕೊಲಂಬಿಯಾ ತಂಡಗಳು ಕ್ವಾರ್ಟರ್ ಫೈನಲ್ ತಲುಪಲು ಹೋರಾಟ ನಡೆಸಲಿವೆ.

 ಇಲ್ಲಿನ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಉಭಯ ತಂಡಗಳು ತಮ್ಮ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಯುರೋಪ್‌ನ ಜರ್ಮನಿ ಹಾಗೂ ದಕ್ಷಿಣ ಅಮೆರಿಕದ ತಂಡ ಕೊಲಂಬಿಯಾ ಪ್ರಸ್ತುತ ಟೂರ್ನಮೆಂಟ್‌ನ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಅಂಡರ್-17 ವಿಶ್ವಕಪ್‌ನಲ್ಲಿ ಜರ್ಮನಿಯ ದಾಖಲೆ ಆಶಾದಾಯಕವಾಗಿಲ್ಲ. ನಾಲ್ಕು ಬಾರಿ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಜರ್ಮನಿ ಇತರ ಎಲ್ಲ ಯುರೋಪ್ ತಂಡಗಳಿಗಿಂತ ಗರಿಷ್ಠ ಪಂದ್ಯಗಳನ್ನು(44) ಆಡಿದೆ. 1985ರಲ್ಲಿ ರನ್ನರ್ಸ್‌-ಅಪ್ ಆಗಿರುವುದು ಜರ್ಮನಿಯ ಈವರೆಗಿನ ಉತ್ತಮ ಸಾಧನೆಯಾಗಿದೆ. ಕೊಲಂಬಿಯಾ ದಕ್ಷಿಣ ಅಮೆರಿಕದ ಅತ್ಯಂತ ದೊಡ್ಡ ಫುಟ್ಬಾಲ್ ಆಡುವ ದೇಶವಾಗಿದೆ. ಆದರೆ, ಈತನಕ ವಿಶ್ವಕಪ್‌ನ್ನು ಗೆದ್ದುಕೊಂಡಿಲ್ಲ. ಆರನೆ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೊಲಂಬಿಯಾ 2009ರಲ್ಲಿ ಸ್ಪೇನ್ ವಿರುದ್ಧ ನಡೆದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ 1-0 ಅಂತರದಿಂದ ಸೋಲುವ ಮೂಲಕ ಮೂರನೆ ಸ್ಥಾನ ಪಡೆದಿತ್ತು. ಈ ಬಾರಿ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಜರ್ಮನಿ ತಂಡ ಇರಾನ್ ವಿರುದ್ಧ ಪ್ರಸ್ತುತ ಟೂರ್ನಿಯಲ್ಲಿ ಸೋಲುವುದರೊಂದಿಗೆ ಹಿನ್ನಡೆ ಕಂಡಿತ್ತು. ಆ ಸೋಲಿನಿಂದ ಹೊರ ಬಂದಿರುವ ಜರ್ಮನಿ ಅಂತಿಮ-16ರ ಸುತ್ತಿನಲ್ಲಿ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ.

 ಉಭಯ ತಂಡಗಳು ರೌಂಡ್ ರಾಬಿನ್ ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿವೆ. ತಲಾ ಒಂದು ಪಂದ್ಯದಲ್ಲಿ ಸೋತಿವೆ. ಎರಡೂ ತಂಡಗಳು ಕೊರಿಯಾದಲ್ಲಿ ನಡೆದಿದ್ದ 2007ರ ಆವೃತ್ತಿಯ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು ಆ ಪಂದ್ಯ 3-3 ಅಂತರದಿಂದ ಡ್ರಾಗೊಂಡಿತ್ತು.

 ಫಾರ್ವರ್ಡ್ ಆಟಗಾರ ಜಾನ್-ಫಿಯೆಟ್ ಆರ್ಪ್ ಜರ್ಮನಿಯ ಸ್ಟಾರ್ ಆಟಗಾರನಾಗಿದ್ದಾರೆ. ಜುಯಾನ್ ಪೆನಾಲೊಂಝಾ ಕೊಲಂಬಿಯಾ ತಂಡ ಪ್ರಿ-ಕ್ವಾರ್ಟರ್‌ಫೈನಲ್ ತಲುಪಲು ಮಹತ್ವದ ಕೊಡುಗೆ ನೀಡಿದ್ದಾರೆ.

ಕೊಲಂಬಿಯಾ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಘಾನಾ ವಿರುದ್ಧ 0-1 ರಿಂದ ಸೋತಿತ್ತು. ಭಾರತ ವಿರುದ್ಧ 2-1 ಅಂತರದಿಂದ ರೋಚಕ ಜಯ ಸಾಧಿಸಿರುವ ಕೊಲಂಬಿಯಾ ತಂಡ ಅಮೆರಿಕವನ್ನು 3-1 ರಿಂದ ಮಣಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತ್ತು.

ಕೋಸ್ಟರಿಕಾ ತಂಡವನ್ನು 2-1 ಅಂತರದಿಂದ ಮಣಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಜರ್ಮನಿ ತಂಡ ಇರಾನ್ ವಿರುದ್ಧ 0-4 ರಿಂದ ಸೋತಿತ್ತು. ಗಿನಿಯಾ ವಿರುದ್ಧ 3-1 ರಿಂದ ಭರ್ಜರಿ ಜಯ ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News