×
Ad

ಎಫ್‌ಐಆರ್‌ನಲ್ಲಿ ಮೃತಪಟ್ಟ ವ್ಯಕ್ತಿಗಳ ಹೆಸರು ಸೇರ್ಪಡೆ

Update: 2017-10-15 23:29 IST

ಹೊಸದಿಲ್ಲಿ, ಅ. 15: ಪ್ರವೇಶ ಹಾಗೂ ನೇಮಕಾತಿಗೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ಪ್ರಥಮ ಮಾಹಿತಿ ವರದಿಯಲ್ಲಿ ಮೃತಪಟ್ಟ ವ್ಯಕ್ತಿಗಳ ಹೆಸರನ್ನು ಮಧ್ಯಪ್ರದೇಶ ಪೊಲೀಸರು ಸೇರಿಸಿರುವುದನ್ನು ಸಿಬಿಐ ಬಹಿರಂಗಗೊಳಿಸಿದ ಬಳಿಕ ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಸಾವುಗಳ ಬಗ್ಗೆ ವಿವಾದ ಸ್ಫೋಟಗೊಂಡಿದೆ.

ಮಧ್ಯಪ್ರದೇಶದ ಪ್ರವೇಶ ಮತ್ತು ನೇಮಕಾತಿ ಹಗರಣದ ಆರೋಪಿಗಳ ಹತ್ಯೆಗೆ ನಡೆದ ಪಿತೂರಿಯ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಅಲ್ಲದೆ 24 ವ್ಯಕ್ತಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸಿಬಿಐಯಲ್ಲಿ ವಿನಂತಿಸಲಾಗಿತ್ತು.

ಮೃತಪಟ್ಟ 24 ಮಂದಿಯಲ್ಲಿ 16 ಮಂದಿಯ ಸಾವು ವ್ಯಾಪಂ ಹಗರಣಕ್ಕೆ ಸಂಬಂಧಿಸಿ ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಮೊದಲೇ ಸಂಭವಿಸಿದೆ ಎಂದು ಸಿಬಿಐ ಪತ್ತೆ ಮಾಡಿದೆ ಹಾಗೂ ಸಾವಿನ ಹಿಂದೆ ಪಿತೂರಿ ಇದೆ ಎಂಬುದನ್ನು ನಿರಾಕರಿಸಿದೆ. ಉಳಿದ ಸಾವು ಸ್ವಾಭಾವಿಕವಾಗಿ ಸಂಭವಿಸಿದೆ ಎಂದು ಸಿಬಿಐ ಹೇಳಿದೆ.

ರಾಮ್‌ಶಂಕರ್ (ಹೆಸರು ಬದಲಾಯಿಸಲಾಗಿದೆ) 2007 ಜೂನ್ 18ರಂದು ಮುಳುಗಿ ಮೃತಪಟ್ಟಿದ್ದರು. ಆದರೆ, 7 ವರ್ಷಗಳ ಬಳಿಕ ಅವರ ಹೆಸರು ವ್ಯಾಪಂ ಹಗರಣದ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವ್ಯಾಪಂ ಹಗರಣದ ಶಂಕಿತರ ಹತ್ಯೆ ನಡೆಸುವ ಸಂಚಿನ ಪರಿಣಾಮವಾಗಿ ನಡೆದಿದೆ ಎಂದು ಹೇಳಲಾಗುವ ಶಂಕರ್ ಸಾವಿನ ಪ್ರಕರಣದ ತನಿಖೆಯಲ್ಲಿ ಶಂಕರ್ ಸಾವು 2007 ಜೂನ್ 18ರಂದು ಸಂಭವಿಸಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

2014 ಜೂನ್ 18ರಂದು ದಾಖಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ ಶಂಕರ್ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಯನ್ನು ಹಣಕ್ಕಾಗಿ ಪರಿಹರಿಸಿದ ಸೋಗುಗಾರ ಎಂದು ರಾಜ್ಯ ಪೊಲೀಸರು ಉಲ್ಲೇಖಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಶಂಕರ್ ಸಾವು ನೀರಿನಲ್ಲಿ ಮುಳುಗಿ ಆಗಿದೆ ಎಂಬುದನ್ನು ಹೇಳಿದೆ. ಇದನ್ನು ಪ್ರತ್ಯಕ್ಷ ಸಾಕ್ಷಿಗಳು ಕೂಡ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News