ಹೇರ್ ಡೈ ಬಳಸುವ ಮಹಿಳೆಯರೇ ಎಚ್ಚರಿಕೆ, ಅದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ

Update: 2017-10-16 09:33 GMT

   ಮನುಷ್ಯ ಮಧ್ಯವಯಸ್ಸು ತಲುಪುತ್ತಿದ್ದಂತೆ ತಲೆಯಲ್ಲಿ ಬಿಳಿಕೂದಲುಗಳು ಇಣುಕಲು ಆರಂಭಿಸುತ್ತವೆ. ಕೂದಲು ನೆರೆಯುವುದನ್ನು ತಡೆಯಲು ಸಾಧ್ಯವಿಲ್ಲ, ಹೀಗಾಗಿ ಹೆಚ್ಚಿನವರು ವಯಸ್ಸಾಗಿರುವುದನ್ನು ಮುಚ್ಚಿಡುವ ಪ್ರಯತ್ನವಾಗಿ ಹೇರ್ ಡೈ ಅಥವಾ ಕೂದಲಿನ ಬಣ್ಣಕ್ಕೆ ಮೊರೆ ಹೋಗುತ್ತಾರೆ. ಆದರೆ ಪ್ರತಿಬಾರಿಯೂ ಬಿಳಿಯ ಕೂದಲು ಕಾಣಿಸಿಕೊಂಡಾಗ ಬಣ್ಣವನ್ನು ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ಮಹಿಳೆಯರಂತೂ ಕೂದಲಿನ ಬಣ್ಣದ ಬಗ್ಗೆ ತುಂಬ ಎಚ್ಚರಿಕೆಯನ್ನು ವಹಿಸವುದು ಅಗತ್ಯವಾಗಿದೆ. ಅವರು ವರ್ಷದಲ್ಲಿ 2ರಿಂದ 5 ಬಾರಿಯಷ್ಟೇ ಕೂದಲನ್ನು ಕಪ್ಪು ಮಾಡಿಕೊಂಡರೆ ಸಾಕು, ಇದಕ್ಕೂ ಹೆಚ್ಚು ಸಲ ಕೂದಲಿಗೆ ಬಣ್ಣ ಹಚ್ಚಿಕೊಂಡರೆ ಅದು ಅಪಾಯಕ್ಕೆ ಆಹ್ವಾನ ನೀಡುತ್ತದೆ.

ಆಗಾಗ್ಗೆ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಅಪಾಯ ಶೇ.14ರಷ್ಟು ಹೆಚ್ಚು ಎನ್ನುವುದನ್ನು ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಬೆಳಕಿಗೆ ತಂದಿದೆ.

ಮಹಿಳೆಯರು ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಬೇಕು ಮತ್ತು ಅದರ ಬದಲಿಗೆ ನೈಸರ್ಗಿಕ ಘಟಕಗಳನ್ನೊಳಗೊಂಡ ಉತ್ಪನ್ನಗಳನ್ನು ಬಳಸಬೇಕು ಎಂದು ಸಂಶೋಧಕರು ಸೂಚಿಸಿದ್ದಾರೆ. ಹೆಚ್ಚಿನ ವಾಣಿಜ್ಯಿಕ ಉತ್ಪನ್ನಗಳು ಮಹಿಳೆಯರು ಪ್ರತಿ 4-5 ವಾರಕ್ಕೊಮ್ಮೆ ಹೇರ್ ಡೈ ಬಳಸಬೇಕು ಎಂದು ಸಲಹೆ ನೀಡುತ್ತವೆ. ಆದರೆ ಮಹಿಳೆಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಹತ್ತು ವಾರಕ್ಕೊಮ್ಮೆ ಕೂದಲಿಗೆ ಬಣ್ಣ ಹಚ್ಚಿಕೊಂಡರೆ ಸಾಕು. ಈ ಅಂತರ ಹೆಚ್ಚಾದಷ್ಟೂ ಅವರಿಗೇ ಒಳ್ಳೆಯದು.

 ಮಹಿಳೆಯರು ತಮ್ಮ ತಲೆಗೂದಲಿಗೆ ನೈಸರ್ಗಿಕ ಬಣ್ಣಗಳಾದ ಬೀಟ್‌ರೂಟ್, ಮೆಹಂದಿ ಮತ್ತು ಒಂದು ಜಾತಿಯ ಗುಲಾಬಿ ಹೂವಿನ ಪೊದೆಗಳಲ್ಲಿ ಬೆಳೆಯುವ ‘ರೋಸ್‌ಹಿಪ್’ ಎಂಬ ಹಣ್ಣನ್ನು ಬಳಸುವುದು ಒಳ್ಳೆಯದು ಎಂದು ಅಧ್ಯಯನ ವರದಿಯು ಹೇಳಿದೆ. ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಏಜೆನ್ಸಿಯಾಗಿರುವ ನ್ಯೂ ಸೌತ್ ವೇಲ್ಸ್‌ನ ಕ್ಯಾನ್ಸರ್ ಕೌನ್ಸಿಲ್ ಹೇರ್ ಡೈಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೊಜೆನ್ ನಮ್ಮ ಶರೀರವನ್ನು ಸೇರುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಅಧ್ಯಯನದ ಫಲಿತಾಂಶಗಳನ್ನು ದೃಢೀಕರಿಸಲು ಇನ್ನಷ್ಟು ಸಂಶೋಧನೆಗಳು ಅಗತ್ಯವಾಗಿವೆಯಾದರೂ ಹೇರ್ ಡೈ ಬಳಕೆಯು ಸ್ತನ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದೆಂದು ಈ ಫಲಿತಾಂಶಗಳು ಎಚ್ಚರಿಕೆಯ ಗಂಟೆಯನ್ನು ಬಾರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News