ಭೀತಿಯ ಸನ್ನಿವೇಶ ಸೃಷ್ಟಿಸುತ್ತಿರುವ ಕೇರಳ ಸಿಎಂ : ಪಾರಿಕ್ಕರ್ ಆರೋಪ

Update: 2017-10-16 14:25 GMT

 ಕೊಲ್ಲಂ, ಅ.16: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಪ್ರಯತ್ನಿಸುತ್ತಿದ್ದರೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೀತಿಯ ಸನ್ನಿವೇಶ ಸೃಷ್ಟಿಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಆರೋಪಿಸಿದ್ದಾರೆ.

   ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಅಧಿಕಾರಾವಧಿಯಲ್ಲಿ ರಾಜಕೀಯ ಹಿಂಸಾಚಾರ ಹಾಗೂ ಜಿಹಾದ್ ಹೆಚ್ಚುತ್ತಿದೆ ಎಂದು ಆರೋಪಿಸಿ, ಇದನ್ನು ಜನತೆಗೆ ತಿಳಿಯಪಡಿಸುವ ಉದ್ದೇಶದಿಂದ ರವಿವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಜನ ರಕ್ಷಾ ಯಾತ್ರೆ’ಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಎಡಪಕ್ಷಗಳ ಕಾರ್ಯಕರ್ತರು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಸುತ್ತಿರುವ ಹಲ್ಲೆ ಘಟನೆಯಿಂದ ಕೇರಳ ರಾಜ್ಯದ ಪ್ರತಿಷ್ಠೆಗೆ ಘಾಸಿಯಾಗಿದ್ದು ಇದನ್ನು ಸರಿಪಡಿಸಲು ರಾಜ್ಯದ ಜನತೆ ಸಂಘಟಿತರಾಗಬೇಕು ಎಂದು ಪಾರಿಕ್ಕರ್ ಹೇಳಿದರು.

ರಾಜ್ಯದ ಜನತೆ ಸುಶಿಕ್ಷಿತರಾಗಿದ್ದು ಸಿಪಿಐ(ಎಂ)ನ ರಾಜಕೀಯ ಪ್ರೇರಿತ ಹಿಂಸಾಚಾರವನ್ನು ತೊಡೆದುಹಾಕಲು ಮುಂದಾಗಬೇಕು ಎಂದ ಅವರು , ಭಾರತವು ಬದಲಾವಣೆಯ ಹಾದಿಯಲ್ಲಿರುವುದನ್ನು ವಿಶ್ವವೇ ಗಮನಿಸಿದೆ ಎಂದು ಹೇಳಿದರು.

ಎರಡು ವಾರ ನಡೆಯಲಿರುವ ‘ಜನರಕ್ಷಾ ಯಾತ್ರೆ’ಯಲ್ಲಿ ಬಿಜೆಪಿ ಮಹಿಳಾ ಮೋರ್ಛಾದ ರಾಷ್ಟ್ರೀಯ ಅಧ್ಯಕ್ಷೆ ವಿಜಯಾ ರಹತ್ಕರ್, ಬಿಜೆಪಿ ಕೇರಳ ಘಟಕಾಧ್ಯಕ್ಷ ಕುಮ್ಮನಮ್ ರಾಜಶೇಖರನ್ ಮತ್ತಿತರರು ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News