ಪಾಕಿಸ್ತಾನಕ್ಕೆ ಎರಡನೆ ಏಕದಿನ ಪಂದ್ಯದಲ್ಲೂ ಜಯ

Update: 2017-10-17 09:18 GMT
ಬಾಬರ್ ಅಝಮ್ ಏಳನೆ ಏಕದಿನ  ಶತಕ

  ಅಬುಧಾಬಿ, ಅ.17: ಬಾಬರ್ ಅಝಮ್ ಸತತ ಎರಡನೆ ಶತಕ , ಶದಾಬ್ ಖಾನ್ ಅರ್ಧಶತಕ ಮತ್ತು ಜೀವಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಲ್ಲಿ ಶ್ರೀಲಂಕಾ ವಿರುದ್ಧ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ 32 ರನ್‌ಗಳ ಜಯ ಗಳಿಸಿದೆ.

 ಶೈಖ್ ಝಿಯಾದ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 220 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ 48 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟಾಗಿದೆ. ಇದರೊಂದಿಗೆ ಪಾಕಿಸ್ತಾನ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

19ರ ಹರೆಯದ ಶದಾಬ್ ಖಾನ್ 47ಕ್ಕೆ 3 ವಿಕೆಟ್ ಉಡಾಯಿಸಿ ಶ್ರೀಲಂಕಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಲ್‌ರೌಂಡ್ ಪ್ರದರ್ಶನ ನೀಡಿದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 ಶ್ರೀಲಂಕಾದ ನಾಯಕ ಉಪುಲ್ ತರಂಗ ಔಟಾಗದೆ 112 ರನ್(114ಎ,14ಬೌ) ಏಕಾಂಗಿ ಹೋರಾಟ ಫಲ ನೀಡಲಿಲ್ಲ. ಇವರನ್ನು ಹೊರತುಪಡಿಸಿದರೆ ಜೆಪ್ರಿ ವಂಡರ್‌ಸೈ (22), ಕುಸಾಲ್ ಮೆಂಡಿಸ್(10) ಮತ್ತು ಲಹಿರು ತಿರಿಮನ್ನೆ(12) ಎರಡಂಕೆಯ ಸ್ಕೋರ್ ದಾಖಲಿಸಿದರು. ತಂಡದ ಉಳಿದ ಆಟಗಾರರಿಗೆ ಪಾಕಿಸ್ತಾನದ ಬೌಲರ್‌ಗಳ ದಾಳಿಯನ್ನು ಎದುರಿಸಿ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ.

ತರಂಗ ಮತ್ತು ಜೆಫ್ರೀ 8ನೆ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ನೀಡಿದರು. ಜೆಫ್ರೀ ಔಟಾದ ಬಳಿಕ ತಂಡ ಸೋಲಿನ ದವಡೆಗೆ ಸಿಲುಕಿತು. ತರಂಗ 15ನೆ ಏಕದಿನ ಶತಕ ದಾಖಲಿಸಿದರು.

 ಕೊನೆಯ ಐದು ಓವರ್‌ಗಳಲ್ಲಿ ಲಂಕೆಯ ಗೆಲುವಿಗೆ 51 ರನ್‌ಗಳ ಆವಶ್ಯಕತೆ ಇತ್ತು. ಆದರೆ ಕೊನೆಯ ಇಬ್ಬರು ಆಟಗಾರರು ರನೌಟಾಗಿದ್ದ ಕಾರಣದಿಂದಾಗಿ ತಂಡ ಗೆಲುವಿನ ದಡ ಸೇರುವಲ್ಲಿ ವಿಫಲಗೊಂಡಿತು.

ಟಾಸ್ ಜಯಿಸಿದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 219 ರನ್ ಗಳಿಸಿತ್ತು. 23ರ ಹರೆಯದ ಬಾಬರ್ ಅಝಮ್ ಸತತ ಎರಡನೆ ಶತಕ ದಾಖಲಿಸಿದರು. ಅವರು 101 ರನ್(133ಎ, 6ಬೌ) ಗಳಿಸಿ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಲು ನೆರವಾದರು.

   ಪಾಕಿಸ್ತಾನದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿರಲಿಲ್ಲ. ಅಗ್ರಸರದಿಯ ವಿಕೆಟ್‌ಗಳನ್ನು ಬೇಗನೆ ಕೈ ಚೆಲ್ಲಿತ್ತು. ಲಹಿರು ಗಾಮಗೆ (57ಕ್ಕೆ 4) ದಾಳಿಗೆ ತತ್ತರಿಸಿ 101ಕ್ಕೆ ಪಾಕಿಸ್ತಾನ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಏಳನೆ ವಿಕೆಟ್‌ಗೆ ಅಝಮ್‌ಗೆ ಶದಾಬ್ ಖಾನ್ ಜೊತೆಯಾದರು. ಇವರು ಜೊತೆಯಾಟದಲ್ಲಿ 109 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು. ಅಝಮ್ 49.1ನೆ ಓವರ್‌ನಲ್ಲಿ ಗಾಮಗೆ ಎಸೆತದಲ್ಲಿ ಕುಶಾಲ್ ಮೆಂಡಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆಗ ತಂಡದ ಸ್ಕೋರ್ 210ಕ್ಕೆ ಏರಿತ್ತು. ಶದಾಬ್ ಅವರು ಔಟಾಗದೆ 52 ರನ್(68,1ಬೌ) ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಪಾಕಿಸ್ತಾನ 50 ಓವರ್‌ಗಳಲ್ಲಿ 219/9(ಬಾಬರ ಅಝಮ್ 101, ಶದಾಬ್ ಖಾನ್ ಔಟಾಗದೆ 52; ಲಹಿರು ಗಾಮಗೆ 57ಕ್ಕೆ 4).

ಶ್ರೀಲಂಕಾ 48 ಓವರ್‌ಗಳಲ್ಲಿ ಆಲೌಟ್ 187(ಉಪುಲ್ ತರಂಗ ಔಟಾಗದೆ 112, ಜೆಫ್ರೀ 22; ಶದಾಬ್ 47ಕ್ಕೆ 3).

ಪಂದ್ಯಶ್ರೇಷ್ಠ: ಶದಾಬ್ ಖಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News